ಶಿವಮೊಗ್ಗಕ್ಕೆ ಸಿಹಿಸುದ್ದಿ: ಮಚಲಿಪಟ್ನಂ, ಗುಂತಕಲ್‌ಗೆ ವಿಶೇಷ ರೈಲು ಸೇವೆ-ಮೋಹನ್ ರೆಡ್ಡಿ ಸ್ವಾಗತ- Good news for Shivamogga: Special train services to Machilipatnam and Guntakal – Mohan Reddy welcomes the move

 SUDDILIVE || SHIVAMOGGA

ಶಿವಮೊಗ್ಗಕ್ಕೆ ಸಿಹಿಸುದ್ದಿ: ಮಚಲಿಪಟ್ನಂ, ಗುಂತಕಲ್‌ಗೆ ವಿಶೇಷ ರೈಲು ಸೇವೆ-ಮೋಹನ್ ರೆಡ್ಡಿ ಸ್ವಾಗತ- Good news for Shivamogga: Special train services to Machilipatnam and Guntakal – Mohan Reddy welcomes the move   
Machalipattanum, guntakal



ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ರೈಲ್ವೆ ಇಲಾಖೆ, ಶಿವಮೊಗ್ಗದಿಂದ ಆಂಧ್ರಪ್ರದೇಶದ ಮಚಲಿಪಟ್ನಂ ಹಾಗೂ ಗುಂತಕಲ್ ನಡುವೆ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ಸತತ ಪ್ರಯತ್ನದ ಫಲವಾಗಿ ಈ ರೈಲು ಸೇವೆಗಳು ಲಭ್ಯವಾಗಿವೆ ಎಂದು ಬಿಜೆಪಿ ಮುಖಂಡರು ಹಾಗೂ ವಿವಿಧ ಸಮಾಜಗಳ ಪ್ರಮುಖರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ ರೈಲು ಸೇವೆಯ ವಿವರಗಳನ್ನು ನೀಡಿದರು. ಆಂಧ್ರಪ್ರದೇಶದೊಂದಿಗೆ ಶಿವಮೊಗ್ಗ ಜಿಲ್ಲೆಗೆ ವಾಣಿಜ್ಯ, ಉದ್ಯೋಗ, ಶಿಕ್ಷಣ ಹಾಗೂ ಸಾಮಾಜಿಕವಾಗಿ ನಿಕಟ ಬಾಂಧವ್ಯವಿದ್ದು, ವಿಶೇಷ ರೈಲು ಸೇವೆಯಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

20 ಬೋಗಿಗಳ ವಿಶೇಷ ರೈಲು

ವಿಶೇಷ ರೈಲುಗಳು ಒಟ್ಟು 20 ಬೋಗಿಗಳನ್ನು ಹೊಂದಿದ್ದು, ಒಂದು ಫಸ್ಟ್ ಕ್ಲಾಸ್ ಎಸಿ, ಒಂದು ಸೆಕೆಂಡ್ ಎಸಿ-ಸಂಯೋಜಿತ ಬೋಗಿ, ಒಂದು ಸೆಕೆಂಡ್ ಎಸಿ, ಎರಡು ಥರ್ಡ್ ಎಸಿ, ಒಂಬತ್ತು ಸ್ಲೀಪರ್, ಐದು ಜನರಲ್ ಹಾಗೂ ಎರಡು ಹೆಚ್ಚುವರಿ ಸ್ಲೀಪರ್ ಬೋಗಿಗಳನ್ನು ಒಳಗೊಂಡಿರಲಿವೆ ಎಂದು ಮಾಹಿತಿ ನೀಡಿದರು. 

ಮಚಲಿಪಟ್ನಂ–ಶಿವಮೊಗ್ಗ ವಿಶೇಷ ರೈಲು

ರೈಲು ಸಂಖ್ಯೆ 07217 ಆಗಸ್ಟ್ 30ರಂದು ಭಾನುವಾರ ಮಧ್ಯಾಹ್ನ 3.15ಕ್ಕೆ ಮಚಲಿಪಟ್ನಂನಿಂದ ಶಿವಮೊಗ್ಗದತ್ತ ಹೊರಡಲಿದೆ. ಈ ರೈಲು ಸೋಮವಾರ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ತಲುಪಲಿದೆ.

ರೈಲು ಸಂಖ್ಯೆ 07218 ಸೆಪ್ಟೆಂಬರ್ 2ರಂದು ಬುಧವಾರ ಸಂಜೆ 5.40ಕ್ಕೆ ಶಿವಮೊಗ್ಗದಿಂದ ಮಚಲಿಪಟ್ನಂಗೆ ಹೊರಡಲಿದ್ದು, ಸೆಪ್ಟೆಂಬರ್ 3ರಂದು ಗುರುವಾರ ಮಧ್ಯಾಹ್ನ 3.55ಕ್ಕೆ ಮಚಲಿಪಟ್ನಂ ತಲುಪಲಿದೆ.

ಶಿವಮೊಗ್ಗ–ಗುಂತಕಲ್ ವಿಶೇಷ ರೈಲು

ರೈಲು ಸಂಖ್ಯೆ 07219 ಆಗಸ್ಟ್ 31ರಂದು ಸೋಮವಾರ ಸಂಜೆ 5 ಗಂಟೆಗೆ ಶಿವಮೊಗ್ಗದಿಂದ ಗುಂತಕಲ್‌ಗೆ ಹೊರಡಲಿದ್ದು, ಸೆಪ್ಟೆಂಬರ್ 1ರಂದು ಬೆಳಗ್ಗೆ 7 ಗಂಟೆಗೆ ಗುಂತಕಲ್ ತಲುಪಲಿದೆ.

ರೈಲು ಸಂಖ್ಯೆ 07220 ಸೆಪ್ಟೆಂಬರ್ 2ರಂದು ಗುಂತಕಲ್‌ನಿಂದ ರಾತ್ರಿ 1.45ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗ ತಲುಪಲಿದೆ.

ಈ ವಿಶೇಷ ರೈಲುಗಳು ಶಿವಮೊಗ್ಗ, ಭದ್ರಾವತಿ, ತರೀಕೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಹಿಂದೂಪುರ, ಧರ್ಮಾವರಂ ಹಾಗೂ ಅನಂತಪುರ ಸೇರಿದಂತೆ ಪ್ರಮುಖ ನಿಲ್ದಾಣಗಳ ಮೂಲಕ ಸಂಚರಿಸಲಿವೆ.

ವಿದ್ಯಾರ್ಥಿಗಳು, ವ್ಯಾಪಾರಿಗಳಿಗೆ ಅನುಕೂಲ

ವಿಶೇಷ ರೈಲು ಸೇವೆಯಿಂದ ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಪ್ರಯಾಣಿಕರಿಗೆ ಆಂಧ್ರಪ್ರದೇಶದೊಂದಿಗೆ ರೈಲು ಸಂಪರ್ಕ ಮತ್ತಷ್ಟು ಸುಗಮವಾಗಲಿದೆ. ವಿದ್ಯಾರ್ಥಿಗಳು, ವ್ಯಾಪಾರಿಗಳು, ಉದ್ಯೋಗಿಗಳು, ಯಾತ್ರಾರ್ಥಿಗಳು ಸೇರಿದಂತೆ ವಿವಿಧ ವರ್ಗದ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಲಾಗಿದೆ.

ವಿಶೇಷ ರೈಲುಗಳ ವೇಳಾಪಟ್ಟಿ ಹಾಗೂ ಕಾಯ್ದಿರಿಸುವಿಕೆ ಸೌಲಭ್ಯ ICMS ಮತ್ತು NTS ವ್ಯವಸ್ಥೆಗಳಲ್ಲಿ ಲಭ್ಯವಿದ್ದು, ಪ್ರಯಾಣಿಕರು ಮುಂಗಡ ಕಾಯ್ದಿರಿಸುವಿಕೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. 

ಹಬ್ಬದ ಋತುವಿನಲ್ಲಿ ಶಿವಮೊಗ್ಗ ಹಾಗೂ ಆಂಧ್ರಪ್ರದೇಶದ ವಿವಿಧ ಭಾಗಗಳ ನಡುವೆ ಸಂಚರಿಸುವ ಸಾರ್ವಜನಿಕರಿಗೆ ಈ ರೈಲುಗಳು ಹೆಚ್ಚಿನ ಅನುಕೂಲ ಕಲ್ಪಿಸಲಿವೆ ಎಂದು ಹೇಳಿದರು.

ಶಿವಮೊಗ್ಗದ ಪ್ರಯಾಣಿಕರ ಮನವಿಗೆ ಸ್ಪಂದಿಸಿ ವಿಶೇಷ ರೈಲು ಸೇವೆ ಕಲ್ಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ರೈಲ್ವೆ ಸಚಿವಾಲಯದ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನತೆಯ ಪರವಾಗಿ ಮೋಹನ್ ರೆಡ್ಡಿ ಅಭಿನಂದನೆ ಸಲ್ಲಿಸಿದರು.

Good news for Shivamogga: Special train services to Machilipatnam and Guntakal – Mohan Reddy welcomes the move   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close