SUDDILIVE || SHIVAMOGGA
ಸೈನ್ಸ್ ಫೀಲ್ಡ್‌ನಲ್ಲಿ ಮರಗಳ ಕಡಿತಕ್ಕೆ ಆಕ್ಷೇಪ: ಕಠಿಣ ಕ್ರಮಕ್ಕೆ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಆಗ್ರಹ- Objection to tree felling in the Science Field: Federation of Civic Welfare Forums demands strict action
ಶಿವಮೊಗ್ಗ: ನಗರದ ಸೈನ್ಸ್ ಫೀಲ್ಡ್‌ನಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಸುಮಾರು 30 ಮರಗಳನ್ನು ಕಡಿದು ಹಾಕಿರುವ ಕ್ರಮಕ್ಕೆ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮರಗಳ ಕಡಿತಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಆಗಸ್ಟ್ 29ರಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ಆ.26 ನ ರಂದು ರಾತ್ರೋರಾತ್ರಿ ಸೈನ್ಸ್ ಫೀಲ್ಡ್ ಪ್ರದೇಶದಲ್ಲಿದ್ದ ಸುಮಾರು 30 ಮರಗಳನ್ನು ತೆರವುಗೊಳಿಸಲಾಗಿದೆ ಎಂದು ಒಕ್ಕೂಟ ಆರೋಪಿಸಿದೆ.
ಮರಗಳನ್ನು ಕಡಿದಿರುವ ಪ್ರದೇಶವು ಹಸಿರು ವಲಯಕ್ಕೆ (Green Zone) ಒಳಪಟ್ಟಿದೆ ಎಂದು ತಿಳಿಸಿರುವ ಒಕ್ಕೂಟ, ಮರಗಳ ತೆರವಿಗೆ ಸಂಬಂಧಿಸಿದಂತೆ ಅನುಮತಿ ಪಡೆದಿರುವ ಬಗ್ಗೆ ಗೊಂದಲವಿದೆ ಎಂದು ಹೇಳಿದೆ. ಜಿಲ್ಲಾ ಪಂಚಾಯತ್‌ನ ಮನವಿ ಮೇರೆಗೆ ಅರಣ್ಯ ಇಲಾಖೆ ಅನುಮತಿ ನೀಡಿದೆ ಎಂಬ ಮಾಹಿತಿಯೊಂದು ಲಭ್ಯವಾಗಿದ್ದರೆ, ಮತ್ತೊಂದೆಡೆ ಯಾವುದೇ ಅನುಮತಿ ಪಡೆಯಲಾಗಿಲ್ಲ ಎಂಬ ಮಾಹಿತಿಯೂ ಇದೆ. ಹೀಗಾಗಿ ಈ ಕುರಿತು ಜಿಲ್ಲಾಡಳಿತವು ದಾಖಲೆಗಳನ್ನು ಪರಿಶೀಲಿಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದೆ.
ಸಾರ್ವಜನಿಕ ಸಭೆ ಅಥವಾ ವಿಚಾರಣೆ ನಡೆಸದೆ ಮರಗಳನ್ನು ಕಡಿದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿರುವ ಒಕ್ಕೂಟ, ಮರಗಳ ತೆರವುಗೊಳಿಸುವ ಮೊದಲು ಪರಿಸರದ ಮೇಲೆ ಉಂಟಾಗುವ ಪರಿಣಾಮವನ್ನು ಪರಿಗಣಿಸಬೇಕಿತ್ತು. ಮರಗಳ ನಷ್ಟಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ ಎಂದು ಆರೋಪಿಸಿದೆ.
ಶಿವಮೊಗ್ಗ ನಗರದಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚುತ್ತಿರುವ ಸಂದರ್ಭದಲ್ಲಿ ನಗರದ ಹಸಿರು ಪ್ರದೇಶಗಳು ಮತ್ತು ಮರಗಳನ್ನು ಸಂರಕ್ಷಿಸುವುದು ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದೆ. ನಗರೀಕರಣದ ಹೆಸರಿನಲ್ಲಿ ಹಸಿರು ಪ್ರದೇಶಗಳಿಗೆ ಹಾನಿಯಾಗದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಒಕ್ಕೂಟದ ಪ್ರಮುಖ ಬೇಡಿಕೆಗಳು
ಶಿವಮೊಗ್ಗ ನಗರದ ಹಸಿರು ವಲಯವನ್ನು ರಕ್ಷಿಸಬೇಕು.ಸೈನ್ಸ್ ಫೀಲ್ಡ್‌ನಲ್ಲಿ ಮರಗಳ ಕಡಿತದಿಂದ ಉಂಟಾಗಿರುವ ಪರಿಸರ ನಷ್ಟಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
ಮರಗಳನ್ನು ನಿಯಮಬಾಹಿರವಾಗಿ ಕಡಿದಿರುವುದು ಸಾಬೀತಾದಲ್ಲಿ ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು.
ಮರಗಳ ಕಡಿತಕ್ಕೆ ಸಂಬಂಧಿಸಿದ ಅನುಮತಿ ಹಾಗೂ ದಾಖಲೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.
ಈ ಸಂದರ್ಭದಲ್ಲಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಅಧ್ಯಕ್ಷ ಎಸ್.ಆರ್. ಗೋಪಾಲ್, ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಎ. ಸತೀಶ್ ಕುಮಾರ್ ಶೆಟ್ಟಿ, ರಾಷ್ಟ್ರಭಕ್ತರ ಬಳಗದ ಕೆ.ಈ. ಕಾಂತೇಶ್ ಸೇರಿದಂತೆ ಹಲವು ಮುಖಂಡರು ಹಾಗೂ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Objection to tree felling in the Science Field: Federation of Civic Welfare Forums demands strict action
