SUDDILIVE || SHIVAMOGGA
ಶಿವಮೊಗ್ಗದಲ್ಲಿ ಕಾರಿನ ಗ್ಲಾಸ್ ಒಡೆದು ವಿದ್ಯಾರ್ಥಿನಿಯ ಚಿನ್ನದ ಸರ ದೋಚಿದ ಖದೀಮ- Thief smashes car window and steals female student's gold chain in Shivamogga
ಶಿವಮೊಗ್ಗ: ಸ್ನೇಹಿತೆಯರಿಗಾಗಿ ಕಾರಿನಲ್ಲಿ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಬೆದರಿಸಿ, ಕಾರಿನ ಗಾಜು ಒಡೆದು ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 15 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದ ಪುರದಾಳು ರಸ್ತೆಯಲ್ಲಿ ನಡೆದಿದೆ.
ಕಾಲೇಜು ವಿದ್ಯಾರ್ಥಿನಿಯೊಬ್ಬರು ತಮ್ಮ ಸ್ನೇಹಿತೆಯರೊಂದಿಗೆ ಪುರದಾಳು ಡ್ಯಾಂಗೆ ತೆರಳಲು ಯೋಜಿಸಿದ್ದರು. ವಿದ್ಯಾರ್ಥಿನಿ ಕಾರಿನಲ್ಲಿ ತೆರಳುತ್ತಿದ್ದರೆ, ಅವರ ಸ್ನೇಹಿತೆಯರು ಸ್ಕೂಟರ್‌ನಲ್ಲಿ ಹಿಂದಿನಿಂದ ಬರುತ್ತಿದ್ದರು. ಮಾರ್ಗಮಧ್ಯೆ ಸ್ನೇಹಿತೆಯರು ತಡವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಪುರದಾಳು ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿಕೊಂಡು ಅವರಿಗಾಗಿ ಕಾಯುತ್ತಿದ್ದರು.
ಈ ವೇಳೆ ಏಕಾಏಕಿ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕೋಲಿನಂತಹ ವಸ್ತುವಿನಿಂದ ಕಾರಿನ ಗಾಜಿಗೆ ಹೊಡೆದಿದ್ದಾನೆ. ಪರಿಣಾಮ ಕಾರಿನ ಗಾಜು ಒಡೆದು ಹೋಗಿದೆ. ಬಳಿಕ ಕಾರಿನೊಳಗಿದ್ದ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಆರೋಪಿ, ಆಕೆ ಧರಿಸಿದ್ದ ಸುಮಾರು 15 ಗ್ರಾಂ ತೂಕದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡಿದ್ದಾನೆ.
ಚಿನ್ನದ ಸರವನ್ನು ದೋಚಿದ ಬಳಿಕ ಆರೋಪಿ ಸ್ಥಳದಿಂದ ವೇಗವಾಗಿ ಪರಾರಿಯಾಗಿದ್ದಾನೆ. ಘಟನೆಯಿಂದ ವಿದ್ಯಾರ್ಥಿನಿ ಆತಂಕಕ್ಕೊಳಗಾಗಿದ್ದು, ಈ ಕುರಿತು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ತುಂಗಾನಗರ ಠಾಣೆ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದು, ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಸಾಧ್ಯತೆ ಇದ್ದು, ಆರೋಪಿಯ ಚಲನವಲನದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಪುರದಾಳು ರಸ್ತೆಯಲ್ಲಿ ಹಾಡಹಗಲೇ ನಡೆದಿರುವ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಒಂಟಿಯಾಗಿ ವಾಹನಗಳಲ್ಲಿ ಸಂಚರಿಸುವವರು ಹಾಗೂ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವವರು ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕಾಗಿ ತನಿಖೆ ಮುಂದುವರಿದಿದೆ.
