SUDDILIVE || SHIVAMOGGA
ಹರಕೆರೆ ರಿಂಗ್ ರೋಡ್‌ನಲ್ಲಿ ಮೊಬೈಲ್ ದರೋಡೆ ಪ್ರಕರಣ-ಮೂವರು ಆರೋಪಿಗಳ ಬಂಧನ- Mobile phone robbery case on Harakere Ring Road – Three accused arrested
ಶಿವಮೊಗ್ಗ: ನಗರದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹರಕೆರೆ ರಿಂಗ್ ರೋಡ್ ರಸ್ತೆಯಲ್ಲಿ ಇಬ್ಬರು ಸಾರ್ವಜನಿಕರನ್ನು ಬೆದರಿಸಿ ಹಲ್ಲೆ ನಡೆಸಿ, ಹಣ ಹಾಗೂ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹರಕೆರೆ ರಿಂಗ್ ರೋಡ್ ರಸ್ತೆಯಲ್ಲಿ ಕಾರಿನಲ್ಲಿ ಬಂದಿದ್ದ ಆರೋಪಿಗಳು ಅಲ್ಲಿದ್ದ ಇಬ್ಬರು ಸಾರ್ವಜನಿಕರನ್ನು ಹೆದರಿಸಿ ಹಾಗೂ ಹೊಡೆದು ಅವರ ಬಳಿಯಿದ್ದ ಹಣ ಮತ್ತು ಮೊಬೈಲ್ ಫೋನ್‌ಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 544/2026, ಕಲಂ 309(6) ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಆರೋಪಿಗಳ ಪತ್ತೆ ಹಾಗೂ ದರೋಡೆ ಮಾಡಿದ್ದ ಮಾಲು ವಶಪಡಿಸಿಕೊಳ್ಳಲು ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜೆ. ಕಾರಿಯಪ್ಪ ಹಾಗೂ ಶಿವಮೊಗ್ಗ–ಎ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ತೀಲವಂತ ಎಸ್.ಹೆಚ್. ಅವರ ಮಾರ್ಗದರ್ಶನದಲ್ಲಿ, ತುಂಗಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗುರುರಾಜ್ ಕೆ.ಟಿ. ಅವರ ನೇತೃತ್ವದಲ್ಲಿ ತನಿಖೆ ಮುಂದುವರಿಸಲಾಯಿತು.
ಪಿಎಸ್‌ಐಗಳಾದ ಗಾದಿಲಿಂಗಪ್ಪ ಗೌಡರ್ ಮತ್ತು ರಘುವೀರ್ ಹಾಗೂ ಸಿಬ್ಬಂದಿಗಳಾದ ಸಿಹೆಚ್‌ಸಿ ಶ್ಯಾಮ್ ಕುಮಾರ್, ಮೋಹನ್ ಕುಮಾರ್, ಸಿಪಿಸಿಗಳಾದ ನಾಗಪ್ಪ ಅಡಿವಪ್ಪನವರ್, ಪ್ರಶಾಂತ ಕುಮಾರ್, ಅಬ್ದುಲ್ ಖಾದರ್ ಜಿಲಾನಿ, ಪ್ರವೀಣ್ ಮತ್ತು ಎಎಚ್‌ಸಿ ಪುನೀತ್ ಅವರನ್ನು ಒಳಗೊಂಡ ತನಿಖಾ ತಂಡವು ಕಾರ್ಯಾಚರಣೆ ನಡೆಸಿತು.
ತನಿಖೆಯ ವೇಳೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸರು, ಅಮಾನ್ (24), ಅಣ್ಣಾನಗರ, ಶಿವಮೊಗ್ಗ; ಮೊಹಮ್ಮದ್ ಶೆಹಜಾನ್ (22), ಅಶೋಕನಗರ, ಶಿವಮೊಗ್ಗ; ಹಾಗೂ ಹೇಮಂತ ಎಸ್.ಎ. (21), ಗೋಪಿ ಸರ್ಕಲ್, ಶಿವಮೊಗ್ಗ ಅವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಸಾರ್ವಜನಿಕರಿಂದ ಕಿತ್ತುಕೊಂಡಿದ್ದ ₹30,500 ನಗದು ಹಣ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸಲಾಗಿದ್ದ ಇನ್ನೋವಾ ಕಾರನ್ನು ಸಹ ಅಮಾನತುಗೊಳಿಸಲಾಗಿದೆ.
ಆರೋಪಿಗಳ ಬಂಧನದೊಂದಿಗೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಪೊಲೀಸರು, ಆರೋಪಿಗಳು ಈ ಕೃತ್ಯವನ್ನು ಯಾವ ಉದ್ದೇಶದಿಂದ ನಡೆಸಿದ್ದರು ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ತುಂಗಾನಗರ ಪೊಲೀಸ್ ಠಾಣೆಯ ತನಿಖಾ ತಂಡದ ಕಾರ್ಯಾಚರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


