SUDDILIVE || SHIVAMOGGA
ಶಿವಮೊಗ್ಗದಲ್ಲಿ ಮರಳು ಗಣಿಗಾರಿಕೆ ನಿಯಮ ಉಲ್ಲಂಘನೆ: 28 ಗುತ್ತಿಗೆದಾರರಿಗೆ ₹68 ಕೋಟಿಗೂ ಅಧಿಕ ದಂಡದ ನೋಟಿಸ್-Violation of sand mining rules in Shivamogga: 28 contractors issued fine notices worth over ₹68 crore
ಶಿವಮೊಗ್ಗ: ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿಯಮಗಳನ್ನು ಉಲ್ಲಂಘಿಸಿರುವ 28 ಗುತ್ತಿಗೆದಾರರಿಗೆ ಒಟ್ಟು ₹68 ಕೋಟಿಗೂ ಅಧಿಕ ಮೊತ್ತದ ದಂಡ ವಿಧಿಸುವ ನೋಟಿಸ್ ಜಾರಿ ಮಾಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಮರಳು ಗಣಿಗಾರಿಕೆ ಹಾಗೂ ಬಾಕಿ ಇರುವ ದಂಡದ ಮೊತ್ತದ ಕುರಿತು ಮಾಹಿತಿ ನೀಡಿದ್ದಾರೆ. ಬಾಕಿ ಇರುವ ದಂಡದ ಪ್ರಕರಣಗಳನ್ನು ಜಿಲ್ಲಾ ಮರಳು ಸಮಿತಿ (DSC) ಮುಂದೆ ಮಂಡಿಸಿ, ಅನ್ವಯವಾಗುವ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದಬ್ಬಣಗದ್ದೆಯಲ್ಲಿ 2,116 ಮೆಟ್ರಿಕ್ ಟನ್ ಅಕ್ರಮ ಮರಳು ಗಣಿಗಾರಿಕೆ
ತೀರ್ಥಹಳ್ಳಿ ತಾಲೂಕಿನ ದಬ್ಬಣಗದ್ದೆ ಗ್ರಾಮದಲ್ಲಿ ನಡೆದಿರುವ ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ 2,116 ಮೆಟ್ರಿಕ್ ಟನ್ ಮರಳನ್ನು ಅಕ್ರಮವಾಗಿ ಹೊರತೆಗೆಯಲಾಗಿದೆ ಎಂದು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನಿಗೆ ₹1.08 ಕೋಟಿ ದಂಡದ ನೋಟಿಸ್ ಜಾರಿ ಮಾಡಲಾಗಿದೆ.
ಜಿಲ್ಲೆಯಲ್ಲಿ 2016ರ ತಿದ್ದುಪಡಿ ನಿಯಮಗಳಡಿ ಒಟ್ಟು 38 ಮರಳು ಗಣಿಗಾರಿಕೆ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿತ್ತು. ಈ ಪೈಕಿ 34 ಗುತ್ತಿಗೆಗಳ ಅವಧಿ ಮುಕ್ತಾಯಗೊಂಡಿದ್ದು, ಪ್ರಸ್ತುತ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು, 1994ರ ಅಡಿಯಲ್ಲಿ ಮೂರು ಮರಳು ಗುತ್ತಿಗೆಗಳು ಹಾಗೂ ಒಂದು ರಿಯಾಯಿತಿ ಮಾತ್ರ ಜಾರಿಯಲ್ಲಿವೆ ಎಂದು ಸಚಿವರು ತಿಳಿಸಿದ್ದಾರೆ.
31 ಮರಳು ಬ್ಲಾಕ್‌ಗಳ ಗುರುತು
2023ರ ರಿಯಾಯಿತಿ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 31 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ಎಂಟು ಬ್ಲಾಕ್‌ಗಳನ್ನು ಸರ್ಕಾರಿ ಕಾಮಗಾರಿಗಳಿಗಾಗಿ ಮೀಸಲಿಡಲಾಗಿದೆ. ಉಳಿದ 23 ಬ್ಲಾಕ್‌ಗಳನ್ನು ಟೆಂಡರ್-ಕಮ್-ಹರಾಜು ಪ್ರಕ್ರಿಯೆ ಮೂಲಕ ಹಂಚಿಕೆ ಅಥವಾ ವಿಲೇವಾರಿ ಮಾಡಲಾಗಿದೆ.
ಫೆಬ್ರವರಿ 24, 2025ರಂದು ಹೊರಡಿಸಲಾದ ಟೆಂಡರ್-ಕಮ್-ಹರಾಜು ಅಧಿಸೂಚನೆಯಂತೆ 20 ಮರಳು ಬ್ಲಾಕ್‌ಗಳ ಪ್ರಕ್ರಿಯೆ ಪೂರ್ಣಗೊಂಡಿದ್ದು, ಯಶಸ್ವಿ ಬಿಡ್‌ದಾರರಿಗೆ ಆಶಯ ಪತ್ರ (Letter of Intent) ನೀಡಲಾಗಿದೆ. ಮರಳು ಸಾಗಣೆ ಮತ್ತು ಸಂಬಂಧಿತ ಯೋಜನೆಗಳಿಗೆ ಅನುಮೋದನೆ ಕೂಡ ನೀಡಲಾಗಿದೆ ಎಂದು ಸಚಿವರ ಉತ್ತರದಲ್ಲಿ ತಿಳಿಸಲಾಗಿದೆ.
ಸಂಬಂಧಪಟ್ಟ ಇಲಾಖೆಗಳು ಮರಳು ಸಂಗ್ರಹಿಸಲು ಅಗತ್ಯವಿರುವ ಕ್ಯಾರಿ ಪ್ಲಾನ್ ಹಾಗೂ ಪರಿಸರ ಅನುಮತಿ ಪ್ರಮಾಣಪತ್ರವನ್ನು ಒದಗಿಸಬೇಕು ಎಂದು ತಿಳಿಸಲಾಗಿದೆ.
ಅಕ್ರಮ ಮರಳು ಗಣಿಗಾರಿಕೆ ತಡೆಗೆ ಕಾರ್ಯಪಡೆ
ಜಿಲ್ಲೆಯಲ್ಲಿ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ, ಮರಳು ದಾಸ್ತಾನು ಹಾಗೂ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಜಿಲ್ಲಾ ಮರಳು ಸಮಿತಿ, ಜಿಲ್ಲಾ ಕಾರ್ಯಪಡೆ ಮತ್ತು ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ.
ಕಂದಾಯ, ಅರಣ್ಯ, ಪೊಲೀಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.
