SUDDILIVE || SHIVAMOGGA
ಅರಕೇಶ್ವರ ದೇವಸ್ಥಾನದ ಬಳಿ ಮಕ್ಕಳನ್ನ ಕಟ್ಟಿಕೊಂಡು ನದಿಗೆ ಹಾರಿದ ಮಹಾತಾಯಿ- ಇಬ್ಬರು ಬಚಾವ್ ಇನ್ನಿಬ್ಬರು ನೀರುಪಾಲು-A devoted mother jumped into the river with her children near the Arakeshwara Temple.
ಶಿವಮೊಗ್ಗ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ತುಂಗ ನದಿಗೆ ಹಾರಿದ ಘಟನೆ ಇಂದು ಸಂಜೆ ನಡೆದಿದೆ. ಚಿತ್ರದುರ್ಗ ತಾಲೂಕು ಹೊಸೂರು ಗ್ರಾಮದ ಸಮೀಪದ ನಿವಾಸಿಯ ಮಹಿಳೆಯೊಬ್ಬಳು ಶಿವಮೊಗ್ಗದ ಚಿಕ್ಕಲ್ ರಸ್ತೆಯಲ್ಲಿರುವ ಅರಕೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ನಡೆಸಿದ್ದು ಆಕೆಯನ್ನು ಮತ್ತು ಆಕೆಯ ಮಗುವನ್ನ ಬಚಾವ್ ಮಾಡಲಾಗಿದೆ. ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ರಕ್ಷಿಸಲಾಗಿದ್ದು, ಇನ್ನಿಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಹೊಸೂರು ಗ್ರಾಮದ ನಿವಾಸಿ ಭವಾನಿ ಎಂಬ ಮಹಿಳೆ ತನ್ನ ಮೂರು ಮಕ್ಕಳೊಂದಿಗೆ ಚಿಕ್ಕಲ್‌ಗೆ ತೆರಳುವ ಮಾರ್ಗದಲ್ಲಿರುವ ಅರಕೇಶ್ವರ ದೇವಸ್ಥಾನದ ಹಿಂಭಾಗದ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನದಿಂದಲೇ ಮಹಿಳೆ ದೇವಸ್ಥಾನದ ಬಳಿ ಇದ್ದರು ಎನ್ನಲಾಗಿದ್ದು, ಬಳಿಕ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೃತ್ಯಕ್ಕೆ ಮುಂದಾಗಿರುವುದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಮಹಿಳೆ ನದಿಗೆ ಹಾರಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರಾದ ಪ್ರದೀಪ್ ಸೇರಿದಂತೆ ಮತ್ತಿತರರು ತಕ್ಷಣ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಭವಾನಿ ಹಾಗೂ ಅವರ 11 ತಿಂಗಳ ಗಂಡು ಮಗುವನ್ನು ಸ್ಥಳೀಯರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಭವಾನಿಯೊಂದಿಗಿದ್ದ 6 ವರ್ಷದ ಹಾಗೂ 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರು ಮಕ್ಕಳ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳೀಯರೂ ಸಹ ಶೋಧ ಕಾರ್ಯಕ್ಕೆ ಸಹಕರಿಸುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿದು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬದ ಹಿನ್ನೆಲೆ ಹಾಗೂ ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಭವಾನಿಮತ್ತು 11 ವರ್ಷದ ಮಗುವನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ದೇವಸ್ಥಾನದ ಬಳಿ ಭದ್ರತೆ ಇದ್ದರೂ ಘಟನೆ
ಅರಕೇಶ್ವರ ದೇವಸ್ಥಾನದ ಬಳಿ ಭದ್ರತೆಗಾಗಿ ಸೆಕ್ಯುರಿಟಿ ಸಿಬ್ಬಂದಿ ಇದ್ದರೂ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಈ ವರ್ಷದಲ್ಲೇ ಇಂತಹ ಘಟನೆಗಳು ಮೂರು ಬಾರಿ ನಡೆದಿವೆ ಎಂದು ಸ್ಥಳೀಯರು ಆರೋಪಿಸಿದ್ದು, ನದಿ ಪ್ರದೇಶದ ಬಳಿ ಇನ್ನಷ್ಟು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ನಾಪತ್ತೆಯಾಗಿರುವ 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಮಕ್ಕಳ ಸ್ಥಿತಿಗತಿಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಘಟನೆಯ ಕುರಿತು ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಯು ಇದಾಗಿದೆ. ಮಕ್ಕಳ ಪತ್ತೆ ಹಾಗೂ ಪೊಲೀಸ್ ತನಿಖೆಯ ಬಳಿಕ ಹೆಚ್ಚಿನ ವಿವರಗಳು ಲಭ್ಯವಾಗುವ ಸಾಧ್ಯತೆ ಇದೆ.

