ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ‘ವಿವೇಕ ವಿದ್ಯಾನಿಧಿ’ ವಿದ್ಯಾರ್ಥಿವೇತನ-vivika vidyanidhi scholarship shivamogga 5000 students

 SUDDILIVE || SHIVAMOGGA

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ‘ವಿವೇಕ ವಿದ್ಯಾನಿಧಿ’ ವಿದ್ಯಾರ್ಥಿವೇತನ-vivika vidyanidhi scholarship shivamogga 5000 students     

Vivek, vidhyanidh


ಶಿವಮೊಗ್ಗ: ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ ನೀಡುವ ಉದ್ದೇಶದಿಂದ ಅನವರತ ಫೌಂಡೇಶನ್ ವತಿಯಿಂದ ‘ವಿವೇಕ ವಿದ್ಯಾನಿಧಿ’ ವಿದ್ಯಾರ್ಥಿವೇತನ ಯೋಜನೆಯನ್ನು ಈ ವರ್ಷವೂ ಮುಂದುವರಿಸಲಾಗಿದೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅರ್ಹ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಲಾ ₹5,000 ಪ್ರೋತ್ಸಾಹಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಶಾಸಕ ಚೆನ್ನಬಸಪ್ಪ ಕಳೆದ ವರ್ಷ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದ ಯೋಜನೆಯ ಮುಂದುವರಿದ ಭಾಗವಾಗಿ ಈ ವರ್ಷವೂ ‘ವಿವೇಕ ವಿದ್ಯಾನಿಧಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆರ್ಥಿಕ ಸಂಕಷ್ಟದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು.

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆದ್ಯತೆ

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸಿಸುವ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಸ್ತುತ 10ನೇ ತರಗತಿ ಅಥವಾ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ ಎಂದರು.

ಆಯ್ಕೆ ಪ್ರಕ್ರಿಯೆಯಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸುವ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ₹5,000 ವಿದ್ಯಾರ್ಥಿವೇತನವನ್ನು ಪ್ರೋತ್ಸಾಹಧನವಾಗಿ ನೀಡಲಾಗುತ್ತದೆ ಎಂದು ಶಾಸಕರು ತಿಳಿಸಿದರು.

ಅರ್ಹತಾ ಮಾನದಂಡಗಳೇನು?

ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ₹1.80 ಲಕ್ಷಕ್ಕಿಂತ ಕಡಿಮೆ ಇರಬೇಕು. ಪೋಷಕರ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ಅಲ್ಲದೆ, ಹಿಂದಿನ ವರ್ಷದ ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯು ಶೇ.50ರಿಂದ ಶೇ.75ರ ಒಳಗೆ ಅಂಕಗಳನ್ನು ಹೊಂದಿರಬೇಕು ಎಂದು ತಿಳಿಸಿದರು. 

ವಿದ್ಯಾರ್ಥಿಯ ಪೋಷಕರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು. ಇದಕ್ಕೆ ಪೋಷಕರ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಎಂದರು. 

ಅರ್ಜಿಯೊಂದಿಗೆ ಯಾವ ದಾಖಲೆಗಳನ್ನು ಸಲ್ಲಿಸಬೇಕು?

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು:

  1. ವಿದ್ಯಾರ್ಥಿಯ ಆಧಾರ್ ಕಾರ್ಡ್.
  2. ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ.
  3. ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಾಲೆ ಅಥವಾ ಕಾಲೇಜಿನ ಪ್ರವೇಶ ಪತ್ರ/ಪ್ರಮಾಣಪತ್ರ.
  4. ವಿದ್ಯಾರ್ಥಿಯ ವೈಯಕ್ತಿಕ ಬ್ಯಾಂಕ್ ಖಾತೆಯ ಹೆಸರು ಹಾಗೂ ಖಾತೆ ವಿವರಗಳು.
  5. ಶಾಲೆ ಅಥವಾ ಕಾಲೇಜಿನ ಶುಲ್ಕ ಪಾವತಿಸಿರುವ ರಶೀದಿ. ಶುಲ್ಕದ ಮೊತ್ತ ₹30,000 ಮೀರಿರಬಾರದು.
  6. ಹಿಂದಿನ ವರ್ಷದ ಅಂಕಪಟ್ಟಿ.
  7. ಪೋಷಕರ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ.
  8. ಪೋಷಕರ ಮತದಾರರ ಗುರುತಿನ ಚೀಟಿ.
  9. ಪೋಷಕರ ಆಧಾರ್ ಕಾರ್ಡ್.

ಅರ್ಜಿ ಸಲ್ಲಿಸುವಾಗ ದಾಖಲೆಗಳು ಸರಿಯಾಗಿರುವಂತೆ ಹಾಗೂ ಸಂಪೂರ್ಣವಾಗಿ ಲಗತ್ತಿಸಿರುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು. 

ಶಾಸಕರ ಕಚೇರಿಯಲ್ಲೇ ಅರ್ಜಿ ವಿತರಣೆ ಮತ್ತು ಸ್ವೀಕಾರ

‘ವಿವೇಕ ವಿದ್ಯಾನಿಧಿ’ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಕರ್ತವ್ಯ ಭವನದಲ್ಲಿರುವ ಶಾಸಕರ ಕಚೇರಿಯಲ್ಲಿ ಮಾತ್ರ ವಿತರಿಸಲಾಗುತ್ತದೆ ಹಾಗೂ ಸ್ವೀಕರಿಸಲಾಗುತ್ತದೆ ಎಂದು ಅನವರತ ಫೌಂಡೇಶನ್ ಪರವಾಗಿ ಶಾಸಕರು ತಿಳಿಸಿದರು

ಅರ್ಜಿ ವಿತರಣೆ ಹಾಗೂ ಸ್ವೀಕಾರ ಆರಂಭ: 11-06-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-09-2026

ಅರ್ಜಿ ಪಡೆಯುವ ಹಾಗೂ ಸಲ್ಲಿಸುವ ಸ್ಥಳ:
ಕರ್ತವ್ಯ ಭವನ (ಶಾಸಕರ ಕಚೇರಿ),
ಮಹಾನಗರ ಪಾಲಿಕೆ ಕಟ್ಟಡ,
ಶಿವಪ್ಪ ನಾಯಕ ಮಾರುಕಟ್ಟೆ ಪಕ್ಕ, ನೆಹರು ರಸ್ತೆ, ಶಿವಮೊಗ್ಗ.

‘ಶಿಕ್ಷಣದ ಕನಸುಗಳು ಕಂದಿಹೋಗಬಾರದು’

ಅನವರತ ಫೌಂಡೇಶನ್‌ನ ಗೌರವಾಧ್ಯಕ್ಷರು ಹಾಗೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಮಾತನಾಡಿ, ಶಿಕ್ಷಣವು ಕೇವಲ ವ್ಯಕ್ತಿಯ ವಿಕಾಸಕ್ಕೆ ಮಾತ್ರ ಸೀಮಿತವಾಗದೆ ಇಡೀ ಸಮಾಜದ ಹಾಗೂ ನಗರದ ಸರ್ವಾಂಗೀಣ ಅಭಿವೃದ್ಧಿಗೆ ದಾರಿದೀಪವಾಗುತ್ತದೆ ಎಂದು ಅವರು ಹೇಳಿದರು. 

ಆರ್ಥಿಕ ಅಡಚಣೆಗಳಿಂದಾಗಿ ಯಾವುದೇ ಮಗುವಿನ ಶೈಕ್ಷಣಿಕ ಕನಸುಗಳು ಕಂದಿಹೋಗಬಾರದು ಎಂಬ ದೃಢ ಸಂಕಲ್ಪದೊಂದಿಗೆ ‘ವಿವೇಕ ವಿದ್ಯಾನಿಧಿ’ ಯೋಜನೆಯನ್ನು ರೂಪಿಸಲಾಗಿದೆ. ಶಿವಮೊಗ್ಗ ನಗರದ ಸಾರ್ವಜನಿಕರು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಪ್ರೇಮಿಗಳು ಈ ಯೋಜನೆಯ ಮಾಹಿತಿಯನ್ನು ಅರ್ಹ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಲುಪಿಸಿ, ಅವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅರ್ಹ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಅವಕಾಶವನ್ನು ಬಳಸಿಕೊಂಡು ಮಕ್ಕಳ ಶೈಕ್ಷಣಿಕ ಪಯಣಕ್ಕೆ ಮತ್ತಷ್ಟು ಬಲ ನೀಡಬೇಕು ಎಂದು ಅನವರತ ಫೌಂಡೇಶನ್ ಮನವಿ ಮಾಡಿದೆ.

vivika vidyanidhi scholarship shivamogga 5000 students

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close