ಸಾಗರದ ಆಜಾದ್ ಮಸೀದಿ ಮುಂಭಾಗ ಸದಸ್ಯತ್ವ ಶುಲ್ಕ ಹಾಗೂ ನಕಲಿ ಸಹಿ ಆರೋಪ: ದಿಢೀರ್ ಪ್ರತಿಭಟನೆ-Sudden protest in front of Azad Masjid in Sagar over membership fee and fake signature allegations

SUDDILIVE || SAGARA

ಸಾಗರದ ಆಜಾದ್ ಮಸೀದಿ ಮುಂಭಾಗ ಸದಸ್ಯತ್ವ ಶುಲ್ಕ ಹಾಗೂ ನಕಲಿ ಸಹಿ ಆರೋಪ: ದಿಢೀರ್ ಪ್ರತಿಭಟನೆ-Sudden protest in front of Azad Masjid in Sagar over membership fee and fake signature allegations

Protest, sudden

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಪ್ರತಿಷ್ಠಿತ ಆಜಾದ್ ರಸ್ತೆಯಲ್ಲಿರುವ ಆಜಾದ್ ಮಸೀದಿ (ಜಮಾತ್-ಉಲ್-ಮುಸ್ಲಿಮೀನ್) ಮುಂಭಾಗದಲ್ಲಿ ಸಮುದಾಯದ ಪ್ರಮುಖರು ಹಾಗೂ ನೂರಾರು ಯುವಕರು ಜಮಾಯಿಸಿ ದಿಢೀರ್ ಪ್ರತಿಭಟನೆ ನಡೆಸಿದರು. ಮುಂಬರುವ ಸಮಿತಿ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಮೇಲೆ ಅತಿಯಾದ ಸದಸ್ಯತ್ವ ಶುಲ್ಕ ಹೇರುತ್ತಿರುವುದು ಮತ್ತು ಸಮಿತಿಯ ನಿಯಮಾವಳಿ (ಬೈಲಾ) ಬದಲಾವಣೆಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಸಮುದಾಯದ ಮುಖಂಡ ತೌಫಿಕ್ ಅಹಮದ್ ನೇತೃತ್ವದಲ್ಲಿ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.


ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ತೌಫಿಕ್ ಅಹಮದ್, "ಮುಂಬರುವ ಸಮಿತಿ ಆಯ್ಕೆಯ ಸಾಮಾನ್ಯ ಸಭೆಗಾಗಿ ಹೊಸ ಸದಸ್ಯತ್ವ ನೋಂದಣಿಗೆ ₹760 ಹಾಗೂ ವಾರ್ಷಿಕ ನವೀಕರಣಕ್ಕೆ ₹600 ಶುಲ್ಕ ನಿಗದಿಪಡಿಸಲಾಗಿದೆ. ಸಾಗರ ನಗರದಲ್ಲಿ ಬಹುತೇಕರು ದಿನಗೂಲಿ ನೌಕರರಾಗಿದ್ದು, ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ಸಾಧ್ಯವಿಲ್ಲ. ಈ ಕುರಿತು ಮಸೀದಿ ಸಮಿತಿಯನ್ನು ಪ್ರಶ್ನಿಸಿದಾಗ ವಕ್ಫ್ ಬೋರ್ಡ್ ನಿಯಮ ಎಂದು ಹೇಳಿದ್ದರು. ಆದರೆ, ಜಿಲ್ಲಾ ವಕ್ಫ್ ಅಧಿಕಾರಿಯನ್ನು ಸಂಪರ್ಕಿಸಿದಾಗ, ಮಸೀದಿ ಸಮಿತಿಯೇ ಬೈಲಾ ತಿದ್ದುಪಡಿ ಮಾಡಿ ಮನವಿ ಸಲ್ಲಿಸಿದೆ ಎಂಬ ಸತ್ಯ ಹೊರಬಂದಿದೆ" ಎಂದು ಆರೋಪಿಸಿದರು.


ಇದಲ್ಲದೆ, 2022ರ ಸಾಮಾನ್ಯ ಸಭೆಯಲ್ಲಿ ಹಾಜರಾಗಿದ್ದ ಮುಸ್ಲಿಂ ಬಾಂಧವರ ಹಾಜರಾತಿ ಸಹಿ ಪಟ್ಟಿಯ ಜೆರಾಕ್ಸ್ ಪ್ರತಿಯನ್ನು ದುರ್ಬಳಕೆ ಮಾಡಿಕೊಂಡು, ಬೈಲಾ ತಿದ್ದುಪಡಿಗೆ ಸಾರ್ವಜನಿಕರೇ ಸಮ್ಮತಿ ನೀಡಿದ್ದಾರೆ ಎಂದು ವಕ್ಫ್ ಮಂಡಳಿಗೆ ಸಲ್ಲಿಸಿ ವಂಚಿಸಲಾಗಿದೆ ಎಂದು ಗಂಭೀರ ಆರೋಪ ಮಾಡಲಾಯಿತು. ಸಮಿತಿಯ 11 ಜನ ಸದಸ್ಯರಾಗಲಿ ಅಥವಾ ಸಾರ್ವಜನಿಕರಾಗಲಿ ಈ ಪ್ರಕ್ರಿಯೆಗೆ ಅಧಿಕೃತವಾಗಿ ಸಹಿ ಹಾಕಿಲ್ಲ. ಇದು ಸ್ಪಷ್ಟವಾದ ಫೋರ್ಜರಿ (ವಂಚನೆ) ಕೆಲಸವಾಗಿದ್ದು, ಇಂತಹ ಅವ್ಯವಹಾರ ನಡೆಸಿರುವ ಮಸೀದಿ ಕಮಿಟಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.


ತಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ಎಚ್ಚರಿಸಿದ ಮುಖಂಡರು, ಸ್ಥಳಕ್ಕೆ ಉಪವಿಭಾಗಾಧಿಕಾರಿಗಳು (AC), ಜಿಲ್ಲಾ ವಕ್ಫ್ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು. ವಂಚನೆ ಎಸಗಿದ ಆಡಳಿತ ಮಂಡಳಿ ಪದಾಧಿಕಾರಿಗಳ ರಾಜೀನಾಮೆ ಪಡೆಯುವುದರೊಂದಿಗೆ ಬಡ ಜನರಿಗೆ ಹೊರೆಯಾಗಿರುವ ಸದಸ್ಯತ್ವ ಶುಲ್ಕವನ್ನು ರದ್ದುಗೊಳಿಸಿ ಸೂಕ್ತ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಒತ್ತಾಯಿಸಿದರು.

Sudden protest in front of Azad Masjid in Sagar over membership fee and fake signature allegations

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close