SUDDILIVE || BHADRAVATHI
ಅನವೇರಿ ಕೈಮರ ರಸ್ತೆಯಲ್ಲಿ ಪಾದಚಾರಿಗೆ ಡಿಕ್ಕಿ: ಬೈಕ್ ಸವಾರನಿಗೆ 1 ವರ್ಷ 1 ತಿಂಗಳು 15 ದಿನ ಜೈಲು-Bike rider gets 1 year, 1 month and 15 days in jail for hitting pedestrian on Anaveri Kaimara Road
ಭದ್ರಾವತಿ: ಅನವೇರಿ ಕೈಮರ ರಸ್ತೆಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟ ಪ್ರಕರಣದಲ್ಲಿ ಆರೋಪಿತ ಬೈಕ್ ಚಾಲಕನಿಗೆ ಭದ್ರಾವತಿಯ 1ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಭೋಜರಾಜ್ ಎಂಬವರು ಅನವೇರಿ ಕೈಮರ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಆರೋಪಿ ನಿಖಿಲ್ ಅವರು ಬಜಾಜ್ ಪಲ್ಸರ್ ಬೈಕ್‌ನಲ್ಲಿ ಅನವೇರಿಯಿಂದ ಮಲ್ಲಾಪುರ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬಂದು ಭೋಜರಾಜ್ ಅವರಿಗೆ ಡಿಕ್ಕಿ ಹೊಡೆದಿದ್ದರು. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಭೋಜರಾಜ್ ಅವರು ಚಿಕಿತ್ಸೆ ಫಲಕಾರಿಯಾಗದೆ 2021ರ ಡಿಸೆಂಬರ್ 27ರಂದು ಮೃತಪಟ್ಟಿದ್ದರು.
ಈ ಸಂಬಂಧ ಮೃತರ ತಾಯಿ ನೀಡಿದ ದೂರಿನ ಮೇರೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.372/2021ರ ಅಡಿಯಲ್ಲಿ ಐಪಿಸಿ ಕಲಂ 279, 304(ಎ) ಹಾಗೂ ಐಎಂವಿ ಕಾಯ್ದೆಯ ಕಲಂ 181, 187ರ ಅನ್ವಯ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಅಂದಿನ ತನಿಖಾಧಿಕಾರಿ ಲಕ್ಷ್ಮೀಪತಿ, ಪೊಲೀಸ್ ಇನ್‌ಸ್ಪೆಕ್ಟರ್ ನಡೆಸಿ, ತನಿಖೆ ಪೂರ್ಣಗೊಳಿಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಭದ್ರಾವತಿಯ 1ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಸಲಾಯಿತು. ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕ ತಿಪ್ಪೇಶ್ ರಾವ್ ವಾದ ಮಂಡಿಸಿದರು.
ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಶ್ರೀಮತಿ ನಾಸಿರ್ ಭಾನು ಅವರು 2026ರ ಸೆಪ್ಟೆಂಬರ್ 17ರಂದು ಆರೋಪಿ ಬೈಕ್ ಚಾಲಕ ನಿಖಿಲ್‌ಗೆ ಒಟ್ಟು 1 ವರ್ಷ 1 ತಿಂಗಳು 15 ದಿನಗಳ ಕಾರಾಗೃಹ ಶಿಕ್ಷೆ ಹಾಗೂ ₹11,000 ದಂಡ ವಿಧಿಸಿ ಆದೇಶಿಸಿದ್ದಾರೆ.
Bike rider gets 1 year, 1 month and 15 days in jail for hitting pedestrian on Anaveri Kaimara Road
