SUDDILIVE || BHADRAVATHI
ಬಚ್ಚಲು ಮನೆಯಲ್ಲಿ ಜಿಂಕೆ ಮಾಂಸ ದಾಸ್ತಾನು; ಇಬ್ಬರ ಬಂಧನ, ಓರ್ವ ಪರಾರಿ- Deer meat stored in a closet; two arrested, one absconding
ಭದ್ರಾವತಿ: ಮನೆಯ ಬಚ್ಚಲು ಮನೆಯಲ್ಲಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ಗಳಲ್ಲಿ ಜಿಂಕೆ ಮಾಂಸ ದಾಸ್ತಾನು ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿರುವ ಘಟನೆ ಶಿವಮೊಗ್ಗ ತಾಲೂಕಿನಲ್ಲಿ ನಡೆದಿದೆ.
ಸೆಪ್ಟೆಂಬರ್ 18ರಂದು ಉಂಬಳೇಬೈಲು ವಲಯದ ರಾತ್ರಿ ಗಸ್ತು ಸಿಬ್ಬಂದಿ ಹಾಗೂ ಲಕ್ಕಿನಕೊಪ್ಪ ಶಾಖೆಯ ಸಿಬ್ಬಂದಿಗೆ ದೊರೆತ ಖಚಿತ ಮಾಹಿತಿ ಆಧರಿಸಿ ಯರಗನಾಳು ಗ್ರಾಮದಲ್ಲಿರುವ ಸೇತು ಬಿನ್ ಮಾಣಿಕ್ಯ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ದಾಳಿ ವೇಳೆ ಮನೆಯ ಬಚ್ಚಲು ಮನೆಯಲ್ಲಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ಗಳಲ್ಲಿ ಜಿಂಕೆ ಮಾಂಸವನ್ನು ದಾಸ್ತಾನು ಮಾಡಿರುವುದು ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯರಗನಾಳು ಗ್ರಾಮದ ಸೇತು ಬಿನ್ ಮಾಣಿಕ್ಯ (46) ಹಾಗೂ ಅವರ ಪುತ್ರ ಧನುಷ್/ದರ್ಶನ್ ಬಿನ್ ಸೇತು ಎಂ. (18) ಅವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಮೊಗ್ಗ ತಾಲೂಕಿನ ಕುಸ್ಕೂರು ಗ್ರಾಮದ ಲೋಕೇಶ್ ನಾಯ್ಕ್ ಬಿನ್ ಕಾಳನಾಯ್ಕ್ (32) ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಅಕ್ರಮವಾಗಿ ಜಿಂಕೆ ಮಾಂಸ ಸಂಗ್ರಹಿಸಿರುವ ಕುರಿತು ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದೆ.
