SUDDILIVE || SHIVAMOGGA
ಬಗರ್ ಹುಕುಂ ಅರ್ಜಿ ವಿಳಂಬ: ಅಧಿಕಾರಿಗಳಿಗೆ ಶಾಸಕಿ ಶಾರದಾ ಪೂರ್ಯನಾಯ್ಕ್ ತರಾಟೆ- Delay in Bagar Hukum application: MLA Sharada Pooryanaik lashes out at officials
ಶಿವಮೊಗ್ಗ: ಬಗರ್ ಹುಕುಂ ಸಾಗುವಳಿ ಸಕ್ರಮಕ್ಕೆ ಸಂಬಂಧಿಸಿದ ಅರ್ಜಿಗಳ ಪರಿಶೀಲನೆ ಹಾಗೂ ವಿಲೇವಾರಿಯಲ್ಲಿ ವಿಳಂಬ ಮಾಡುತ್ತಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶಿವಮೊಗ್ಗದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬುಧವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಬಗರ್ ಹುಕುಂ ಸಾಗುವಳಿ ಸಕ್ರಮ ಸಮಿತಿಯ ಪರಿಶೀಲನಾ ಸಭೆಯಲ್ಲಿ ಅರ್ಜಿಗಳ ವಿಲೇವಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು.
ಈ ವೇಳೆ, ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಸಿದ ಶಾಸಕಿ, ಈಗಾಗಲೇ ತಿರಸ್ಕೃತಗೊಂಡಿರುವ ಕೆಲವು ಅರ್ಜಿಗಳನ್ನು ಪದೇಪದೇ ಮರುಪರಿಶೀಲನೆಗೆ ಕಳುಹಿಸುತ್ತಿರುವುದಕ್ಕೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಅರ್ಜಿಗಳ ಪರಿಶೀಲನೆ ಮತ್ತು ವಿಲೇವಾರಿಯಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
“ಗ್ರಾಮ ಆಡಳಿತಾಧಿಕಾರಿಗಳು ತಪ್ಪಾದ ಮಾಹಿತಿ ನೀಡಿದ್ದರೆ ಅಥವಾ ಯಾವುದೇ ಲೋಪ ಎಸಗಿದ್ದರೆ, ಅದನ್ನು ಪರಿಶೀಲಿಸುವ ಜವಾಬ್ದಾರಿ ಕಂದಾಯ ನಿರೀಕ್ಷಕರದ್ದಲ್ಲವೇ? ನಿಮ್ಮ ಜವಾಬ್ದಾರಿ ಏನು?” ಎಂದು ಶಾಸಕಿ ಅಧಿಕಾರಿಗಳನ್ನು ಖಡಕ್ ಆಗಿ ಪ್ರಶ್ನಿಸಿದರು.
ನಿಯಮಾನುಸಾರ ಸಲ್ಲಿಕೆಯಾಗಿರುವ ಬಗರ್ ಹುಕುಂ ಅರ್ಜಿಗಳನ್ನು ಗರಿಷ್ಠ ಮೂರು ತಿಂಗಳೊಳಗೆ ಪರಿಶೀಲಿಸಿ ವಿಲೇವಾರಿ ಮಾಡಬೇಕಾಗಿದೆ. ಆದರೆ ಐದು ತಿಂಗಳು ಕಳೆದರೂ ಅರ್ಜಿಗಳು ಬಾಕಿ ಉಳಿದಿರುವುದು ಸರಿಯಲ್ಲ. ಹಕ್ಕುಪತ್ರಕ್ಕಾಗಿ ಬಡ ರೈತರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಶಾರದಾ ಪೂರ್ಯನಾಯ್ಕ್ ಹೇಳಿದರು.
ಅರ್ಹ ಫಲಾನುಭವಿಗಳಿಗೆ ಯಾವುದೇ ಅನ್ಯಾಯವಾಗದಂತೆ ಸರ್ಕಾರದ ನಿಯಮಾವಳಿಗಳಂತೆ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಶಾಸಕಿ ಸೂಚನೆ ನೀಡಿದರು. ಬಾಕಿ ಇರುವ ಅರ್ಜಿಗಳ ಪರಿಶೀಲನೆ ಮತ್ತು ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಗಡುವನ್ನೂ ನೀಡಿದರು.
