SUDDILIVE || BHADRAVATHI
ಅಡಿಕೆ ತೋಟದ ಬೇಲಿಗೆ ಅಕ್ರಮ ವಿದ್ಯುತ್; ಮೂರು ವರ್ಷದ ಕರಡಿ ಸಾವು: ಮೃತದೇಹ ಕಾಲುವೆಯಲ್ಲಿ ಹೂತು ಆರೋಪ- Illegal electricity to areca nut plantation fence; Three-year-old bear dies; body buried in canal, accused
ಭದ್ರಾವತಿ: ಅಡಿಕೆ ತೋಟದ ಬೇಲಿಗೆ ಅಕ್ರಮವಾಗಿ ವಿದ್ಯುತ್ ಹರಿಸಿದ ಪರಿಣಾಮ ಸುಮಾರು ಮೂರು ವರ್ಷದ ಗಂಡು ಕರಡಿ ಮೃತಪಟ್ಟಿದ್ದು, ಬಳಿಕ ಅದರ ಮೃತದೇಹವನ್ನು ತೋಟದ ಕಾಲುವೆಯಲ್ಲಿ ಹೂತು ಹಾಕಿರುವ ಆರೋಪ ಕೇಳಿಬಂದಿದೆ.
ಭದ್ರಾವತಿ ತಾಲೂಕಿನ ಹೊಳೇಹೊನ್ನೂರು ಹೋಬಳಿಯ ಯಡೇಹಳ್ಳಿ ಗ್ರಾಮದ ಸರ್ವೇ ನಂಬರ್ 54ರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಜಮೀನಿನ ಮಾಲೀಕ ದೊಡ್ಡಸೀಗೆ ಗೋವಿಂದಪ್ಪ ಎಂಬಾತ ಅಡಿಕೆ ತೋಟದ ಬೇಲಿಗೆ ಅಕ್ರಮವಾಗಿ ನೇರ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಎನ್ನಲಾಗಿದೆ.
ಈ ವಿದ್ಯುತ್ ಬೇಲಿಗೆ ಸಿಲುಕಿ ಕರಡಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಬಳಿಕ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಮೃತ ಕರಡಿಯ ದೇಹವನ್ನು ತೋಟದಲ್ಲಿರುವ ಕಾಲುವೆಯಲ್ಲಿ ಹೂತು ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಶಾಂತಿಸಾಗರ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ತನಿಖೆ ಕೈಗೊಂಡಿದ್ದು, ಅಕ್ರಮ ವಿದ್ಯುತ್ ಬೇಲಿ ಅಳವಡಿಕೆ ಹಾಗೂ ವನ್ಯಜೀವಿ ಸಾವಿನ ಕುರಿತು ಕಾನೂನು ಕ್ರಮ ಜರುಗಿಸಲಾಗಿದೆ.
ಪ್ರಕರಣದಲ್ಲಿ ಆರೋಪಿಯನ್ನು ಭದ್ರಾವತಿ 3ನೇ ಹೆಚ್ಚುವರಿ ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ವನ್ಯಜೀವಿಗಳ ಸಂಚಾರವಿರುವ ಪ್ರದೇಶಗಳಲ್ಲಿ ಜಮೀನುಗಳ ಸುತ್ತ ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸುವುದು ಅಪಾಯಕಾರಿ ಮಾತ್ರವಲ್ಲದೆ, ವನ್ಯಜೀವಿಗಳ ಸಾವಿಗೆ ಕಾರಣವಾಗುವ ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದೆ.
Illegal electricity to areca nut plantation fence; Three-year-old bear dies; body buried in canal, accused
