ತೀರ್ಥಹಳ್ಳಿ ಪಾದಯಾತ್ರೆ ದಿಕ್ಕುತಪ್ಪಿದೆಯಾ? ಮಾಧ್ಯಮದ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಖಡಕ್ ಉತ್ತರ-Has the Thirthahalli padayatra gone off track? Minister Madhu Bangarappa gives a sharp reply to a media question

SUDDILIVE || SHIVAMOGGA

ತೀರ್ಥಹಳ್ಳಿ ಪಾದಯಾತ್ರೆ ದಿಕ್ಕುತಪ್ಪಿದೆಯಾ? ಮಾಧ್ಯಮದ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಖಡಕ್ ಉತ್ತರ-Has the Thirthahalli padayatra gone off track? Minister Madhu Bangarappa gives a sharp reply to a media question

Madhu, bangarappa




ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ವಿರೋಧಿಸಿ ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ಪಾದಯಾತ್ರೆ ದಿಕ್ಕುತಪ್ಪಿದೆಯಾ ಎಂಬ ಮಾಧ್ಯಮದ ಪ್ರಶ್ನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

“ಹಾಗೆ ಯಾಕೆ ನಿಮಗೆ ಅನಿಸಿದೆ? ಇಂದು ಅಧಿಕೃತವಾಗಿ ಪಕ್ಷ ತಿಳಿಸಿದೆ. ಹಾಗಾಗಿ ನಾನು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದೇನೆ. ಮೊನ್ನೆ ನಡೆದದ್ದು ಪಕ್ಷಾತೀತ ಹೋರಾಟವಾಗಿತ್ತು” ಎಂದು ಸಚಿವರು ಸ್ಪಷ್ಟಪಡಿಸಿದರು.

ಮೊನ್ನೆ ನಡೆದ ಪಾದಯಾತ್ರೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಹೊರತುಪಡಿಸಿ ಬೇರೆ ಯಾರೂ ಭಾಗವಹಿಸಿರಲಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, “ಅದು ನನಗೆ ಗೊತ್ತಿಲ್ಲ. ಇವತ್ತು ಪಕ್ಷ ತಿಳಿಸಿದೆ, ಪಕ್ಷದ ವತಿಯಿಂದ ಭಾಗಿಯಾಗುತ್ತಿದ್ದೇನೆ” ಎಂದು ಮಧು ಬಂಗಾರಪ್ಪ ಉತ್ತರಿಸಿದರು.

ಕಸ್ತೂರಿ ರಂಗನ್ ವರದಿ ವಿರುದ್ಧ ಕಾಂಗ್ರೆಸ್ ಪಾದಯಾತ್ರೆ

ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ಧ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.

“ಕೇಂದ್ರ ಸರ್ಕಾರ ಪದೇಪದೇ ಕರ್ನಾಟಕದ ಮೇಲೆ ಕಸ್ತೂರಿ ರಂಗನ್ ವರದಿಯನ್ನು ಹೇರಲು ಮುಂದಾಗುತ್ತಿದೆ. ಇದನ್ನು ಖಂಡಿಸಿ ಇಂದು ಪಾದಯಾತ್ರೆ ನಡೆಯುತ್ತಿದೆ. ನಾನು ಇಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ತೀರ್ಥಹಳ್ಳಿಗೆ ತೆರಳುತ್ತೇನೆ” ಎಂದರು.

ಶರಾವತಿ ಸಂತ್ರಸ್ತರ ಸಮಸ್ಯೆಗೂ ಕಸ್ತೂರಿ ರಂಗನ್ ವರದಿಗೂ ಸಂಬಂಧ

ಶರಾವತಿ ಸಂತ್ರಸ್ತರ ಸಮಸ್ಯೆ ಹಾಗೂ ಕಸ್ತೂರಿ ರಂಗನ್ ವರದಿ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮಧು ಬಂಗಾರಪ್ಪ ಹೇಳಿದರು.

“ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಹಂತ ಹಂತವಾಗಿ ಪರಿಹರಿಸುವ ಕೆಲಸ ನಡೆಯುತ್ತಿದೆ. ಒಂದು ಕಡೆ ಕಸ್ತೂರಿ ರಂಗನ್ ವರದಿ ಸಮಸ್ಯೆ ಎದುರಾದರೆ, ಮತ್ತೊಂದು ಕಡೆ ಶರಾವತಿ ಸಂತ್ರಸ್ತರ ಸಮಸ್ಯೆಯೂ ಇದೆ. ಎರಡನ್ನೂ ವ್ಯವಸ್ಥಿತವಾಗಿ ಬಗೆಹರಿಸಬೇಕಿದೆ” ಎಂದರು.

ತಮ್ಮ ತಂದೆ ಬಂಗಾರಪ್ಪ ಅವರ ಕಾಲದಲ್ಲಿ ವಿದ್ಯುತ್ ಸೇರಿದಂತೆ ಜನಪರ ಕಾರ್ಯಕ್ರಮಗಳಿಂದ ಶಿವಮೊಗ್ಗ ಜಿಲ್ಲೆಯ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗಿದೆ ಎಂದು ಸಚಿವರು ಹೇಳಿದರು.

ಬಿಜೆಪಿಯ ಪಾದಯಾತ್ರೆ ವಿರುದ್ಧ ವಾಗ್ದಾಳಿ

ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯನ್ನೂ ಸಚಿವರು ತೀವ್ರವಾಗಿ ಟೀಕಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ತಮ್ಮನ್ನ ತಾವು ಮೋದಿ ಎಂದು ತಿಳಿದಿದ್ದಾರೆ. ತಮ್ಮ ಭಾಷಣದ ವೈಖರಿಯನ್ನೇ ಬದಲಾಯಿಸಿದ್ದಾರೆ. ಆದರೆ ಜನರ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ನಾಗೇಂದ್ರ ರಾಜೀನಾಮೆ ಮೊದಲಿಗೂ ನಂತರದ ಬೆಳವಣಿಗೆಯಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತಿದೆ ಎಂದು ದೂರಿದರು. 

“ಬಿಜೆಪಿಯವರು ನಡೆಸುತ್ತಿರುವ ಪಾದಯಾತ್ರೆಯಲ್ಲಿ ಕಸ್ತೂರಿ ರಂಗನ್ ವರದಿ ಅಥವಾ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದೆಯೇ? ವೈಯಕ್ತಿಕವಾಗಿ ಜನಪ್ರತಿನಿಧಿಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವುದೇ ಹೆಚ್ಚಾಗಿದೆ” ಎಂದು ಆರೋಪಿಸಿದರು.

ವಿರೋಧ ಪಕ್ಷವಾಗಿ ಬಿಜೆಪಿ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಮಧು ಬಂಗಾರಪ್ಪ ಟೀಕಿಸಿದರು. ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಜನರ ಸಮಸ್ಯೆಗಳನ್ನು ಪ್ರಶ್ನಿಸುವುದು ವಿರೋಧ ಪಕ್ಷದ ಪ್ರಮುಖ ಕರ್ತವ್ಯವಾಗಿದ್ದು, ಅದನ್ನು ಬಿಜೆಪಿ ಮರೆತಿದೆ ಎಂದು ಹೇಳಿದರು.

ತೀರ್ಥಹಳ್ಳಿಯಲ್ಲಿ ಗ್ರಾಮಗಳ ಸಂಖ್ಯೆ ಹೆಚ್ಚಳ

ಕಸ್ತೂರಿ ರಂಗನ್ ವರದಿಯ ಪರಿಣಾಮ ತೀರ್ಥಹಳ್ಳಿ ತಾಲೂಕಿನಲ್ಲಿ ಹಿಂದೆ ಇದ್ದ ಗ್ರಾಮಗಳ ಸಂಖ್ಯೆಗೆ ಹೋಲಿಸಿದರೆ ಇದೀಗ ಹೆಚ್ಚಳವಾಗಿದೆ ಎಂದು ಸಚಿವರು ಹೇಳಿದರು.

“ಮುಂಚೆ ತೀರ್ಥಹಳ್ಳಿಯಲ್ಲಿ 139 ಗ್ರಾಮಗಳು ಇದ್ದವು. ಹೊಸ ವರದಿಯಲ್ಲಿ 154 ಗ್ರಾಮಗಳಿಗೆ ಹೆಚ್ಚಿಸಲಾಗಿದೆ. ಇದು ನಮ್ಮ ಜನರ ಬದುಕಿನ ಮೇಲೆ ಪರಿಣಾಮ ಬೀರುವ ವಿಚಾರ. ಇದರ ಬಗ್ಗೆ ಬಿಜೆಪಿಯವರು ಮೊದಲು ಅರಿತುಕೊಳ್ಳಬೇಕು” ಎಂದು ಮಧು ಬಂಗಾರಪ್ಪ ಹೇಳಿದರು.

ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಪಶ್ಚಿಮಘಟ್ಟದ ಸಾವಿರಾರು ಗ್ರಾಮಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ನೂರಾರು ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತವೆ ಎಂದು ಅವರು ವಿವರಿಸಿದರು.

ಕೇಂದ್ರಕ್ಕೆ ಸಮಗ್ರ ವರದಿ ಕಳುಹಿಸಲು ಸಿದ್ಧತೆ

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರದ ಮಟ್ಟದಲ್ಲಿ ಸಮಗ್ರ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವ್ಯವಸ್ಥಿತ ವರದಿ ಸಲ್ಲಿಸುವ ಕೆಲಸ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿಚಾರದಲ್ಲಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ವರದಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

“ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಾದ ವರದಿಯನ್ನು ವ್ಯವಸ್ಥಿತವಾಗಿ ಕಳುಹಿಸದಿದ್ದರೆ, ನಮ್ಮ ಜನರಿಗೆ ನಾವೇ ಅನ್ಯಾಯ ಮಾಡಿದಂತಾಗುತ್ತದೆ. ಹಾಗಾಗಿ ಹಂತ ಹಂತವಾಗಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದಕ್ಕೆ ಫಲಿತಾಂಶ ನೀಡುತ್ತೇವೆ” ಎಂದು ಮಧು ಬಂಗಾರಪ್ಪ ಭರವಸೆ ನೀಡಿದರು.

ಶಿಕ್ಷಣ ಇಲಾಖೆಯಲ್ಲೂ ಮಹತ್ವದ ಯೋಜನೆಗಳ ಘೋಷಣೆ

ಇದೇ ವೇಳೆ ತಮ್ಮ ಶಿಕ್ಷಣ ಇಲಾಖೆ ಕುರಿತು ಮಾತನಾಡಿದ ಸಚಿವರು, ಕರ್ನಾಟಕ ಪಬ್ಲಿಕ್ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವುದು ತಮ್ಮ ಪ್ರಮುಖ ಗುರಿಯಾಗಿದೆ ಎಂದರು.

ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವಿನಿಂದ 500 ಶಾಲೆಗಳಿಗೆ ಸುಮಾರು ₹2,500 ಕೋಟಿ ವೆಚ್ಚದ ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ, ಗಣಿ ಪರಿಣಾಮಿತ ಪ್ರದೇಶಗಳು ಹಾಗೂ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿಯೂ ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಒಂದು ಕರ್ನಾಟಕ ಪಬ್ಲಿಕ್ ಶಾಲೆಗೆ ಸ್ಥಳೀಯ ಮೂಲಸೌಕರ್ಯವನ್ನು ಆಧರಿಸಿ ಸುಮಾರು ₹3 ಕೋಟಿಯಿಂದ ₹9.35 ಕೋಟಿವರೆಗೆ ವೆಚ್ಚವಾಗುವ ಸಾಧ್ಯತೆ ಇದೆ. ಶಾಲೆಗಳಲ್ಲಿ ಕೊಠಡಿಗಳು, ಕಂಪ್ಯೂಟರ್ ವ್ಯವಸ್ಥೆ, ಪ್ರಯೋಗಾಲಯ, ಆಟದ ಮೈದಾನ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಮಾನವಾಗಿ ಒದಗಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

“ಕರ್ನಾಟಕ ಪಬ್ಲಿಕ್ ಶಾಲೆಗಳ ಯೋಜನೆ ನಮ್ಮ ಇಲಾಖೆಯ ಫ್ಲ್ಯಾಗ್‌ಶಿಪ್ ಯೋಜನೆಯಾಗಲಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ರಾಜ್ಯ ಮಟ್ಟದಲ್ಲಿ ಸಂಪೂರ್ಣ ಮಾಹಿತಿ ನೀಡುತ್ತೇವೆ” ಎಂದು ಮಧು ಬಂಗಾರಪ್ಪ ತಿಳಿಸಿದರು.

Has the Thirthahalli padayatra gone off track? Minister Madhu Bangarappa gives a sharp reply to a media question

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close