SUDDILIVE || SHIVAMOGGA
ದೊಣ್ಣೆ, ಬಾಟಲಿಯಿಂದ ಹಲ್ಲೆ: ಶಿಕ್ಷಕಿಗೆ ನ್ಯಾಯಾಲಯದಿಂದ ಶಿಕ್ಷೆ- Assault with club and bottle: Court sentences female teacher
ಶಿವಮೊಗ್ಗ, ಸೆ.2: ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ತೆಗೆದು ವ್ಯಕ್ತಿಯೊಬ್ಬರ ಮೇಲೆ ದೊಣ್ಣೆ ಹಾಗೂ ಬಾಟಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷಕಿಗೆ ಶಿವಮೊಗ್ಗದ 1ನೇ ಹೆಚ್ಚುವರಿ ಸಿಜೆ ಮತ್ತು ಸಿಜೆಎಂ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಮಲವಗೊಪ್ಪದ ಶುಗರ್ ಫ್ಯಾಕ್ಟರಿ ಸಮೀಪದ ನಿವಾಸಿ ನಸ್ರೀನಾ ಬಾನು ಶಿಕ್ಷೆಗೆ ಒಳಗಾದ ಆರೋಪಿ.
ಮದುವೆ ವಿಚಾರಕ್ಕೆ ಜಗಳ
ಪ್ರಕರಣದ ವಿವರಗಳ ಪ್ರಕಾರ, ಮಲವಗೊಪ್ಪದ ಶುಗರ್ ಫ್ಯಾಕ್ಟರಿ ಸಮೀಪ ವಾಸವಿರುವ ಸಕ್ರೀಯ ಬಿನ್ ದಾದಾರ್ಪಿ ಅವರ ಕೊನೆಯ ತಂಗಿಯ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ನಸ್ರೀನಾ ಬಾನು ಹಾಗೂ ಮತ್ತೊಬ್ಬ ವ್ಯಕ್ತಿ ಜಗಳ ತೆಗೆದಿದ್ದರು. ಈ ವೇಳೆ ಸಕ್ರೀಯ ಅವರ ಮೇಲೆ ದೊಣ್ಣೆ ಮತ್ತು ಬಾಟಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿತ್ತು.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.473/2020ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಕೈಗೊಂಡ ತನಿಖಾಧಿಕಾರಿ ರಾಮಕುಮಾರ್ ವಿ. ಅವರು ತನಿಖೆ ಪೂರ್ಣಗೊಳಿಸಿ, ಶಿವಮೊಗ್ಗದ 1ನೇ ಹೆಚ್ಚುವರಿ ಸಿಜೆ ಮತ್ತು ಸಿಜೆಎಂ ನ್ಯಾಯಾಲಯಕ್ಕೆ ಸಿ.ಸಿ.1008/2024ರಂತೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತು
ಪ್ರಕರಣದ ವಿಚಾರಣೆ ವೇಳೆ ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಉಭಯ ಪಕ್ಷಗಳ ವಾದ-ಪ್ರತಿವಾದ ಆಲಿಸಿತು. ಬಳಿಕ ನ್ಯಾಯಾಧೀಶರಾದ ಪದ್ಮಾಕರ ವನಕುದ್ರೆ ಅವರು 2026ರ ಆಗಸ್ಟ್ 31ರಂದು ತೀರ್ಪು ಪ್ರಕಟಿಸಿ, ನಸ್ರೀನಾ ಬಾನು ವಿರುದ್ಧ ಐಪಿಸಿ ಕಲಂ 323, 324 ಹಾಗೂ 506ರ ಅಡಿಯಲ್ಲಿ ಹೊರಿಸಲಾದ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದರು.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜನೆಯ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಗೋವಿಂದರಾಜ್ ಎನ್. ಅವರು ವಾದ ಮಂಡಿಸಿದ್ದರು.
