ಮಹಿಳಾ ಠಾಣೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಭದ್ರಾವತಿಯ ಅತ್ಯಾಚಾರ ಪ್ರಕರಣದ ಆರೋಪಿ ಪರಾರಿ: ಕುಟುಂಬಸ್ಥರಿಂದಲೂ ಕರ್ತವ್ಯಕ್ಕೆ ಅಡ್ಡಿ! Accused in Bhadravathi rape case escapes after assaulting women's police station staff; family members also obstructed official duty

SUDDILIVE || SHIVAMOGGA

ಮಹಿಳಾ ಠಾಣೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಭದ್ರಾವತಿಯ ಅತ್ಯಾಚಾರ ಪ್ರಕರಣದ ಆರೋಪಿ ಪರಾರಿ: ಕುಟುಂಬಸ್ಥರಿಂದಲೂ ಕರ್ತವ್ಯಕ್ಕೆ ಅಡ್ಡಿ! Accused in Bhadravathi rape case escapes after assaulting women's police station staff; family members also obstructed official duty    
Rape, accused


ಶಿವಮೊಗ್ಗ / ಕುಂಸಿ: ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಂಭೀರ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸಿ ಆರೋಪಿ ಪರಾರಿಯಾಗಿರುವ ಘಟನೆ ಆಯನೂರು ಸಮೀಪದ ಹಾರನಹಳ್ಳಿಯಲ್ಲಿ ನಡೆದಿದೆ.

ಎಫ್‌ಐಆರ್‌ನಲ್ಲಿ ದಾಖಲಾಗಿರುವ ಅಧಿಕೃತ ವಿವರಗಳ ಪ್ರಕಾರ, ಪ್ರಕರಣದ ಮುಖ್ಯ ಆರೋಪಿ ದರ್ಶನ್ (23) (ಆಯನೂರು ತಾಂಡ ನಿವಾಸಿ). ಆತನನ್ನು ಬಂಧಿಸಲು ಹೋದ ಶಿವಮೊಗ್ಗ ಮಹಿಳಾ ಠಾಣೆಯ ಹೆಡ್ ಕಾನ್ಸ್‌ಟೇಬಲ್ (CHC 468) ಸಮೀಉಲ್ಲಾ ಅವರ ಮುಖಕ್ಕೆ ಗುದ್ದಿ, ಕಾಲಿನಿಂದ ಒದ್ದು ಆರೋಪಿ ಪರಾರಿಯಾಗಿದ್ದಾನೆ.

ನಡೆದಿದ್ದೇನು? (ಪ್ರಕರಣದ ವಿವರ)

ಶಿವಮೊಗ್ಗದ ಎಸ್ ಆರ್ ಎನ್ ಎಂ ಎಸ್ ಕಾಲೇಜಿನಲ್ಲಿ ಬಿಎಸ್ ಸಿ ಓದುತ್ತಿರುವಾಗ ಯುವತಿಯೋರ್ವಳಿಗೆ ಪರಿಚಯವಾದ ದರ್ಶನ್ ಎಂಬ ಹುಡುಗ ನಂತರ ಪ್ರೀತಿ ಪ್ರೇಮ ಎಂದು ಹೇಳಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವೇಳೆ ತೆಗೆದುಕೊಂಡ ಪೋಟೊ ವಿಡಿಯೋ ಗಳನ್ನ ದರ್ಶನ್ ತೋರಿಸಿ ಬ್ಲಾಕ್ ಮಾಡುತ್ತಿದ್ದ ಎಂದು ಸಹ ದೂರಿನಲ್ಲಿ ಉಲ್ಲೇಖವಾಗಿದೆ. ಇದಕ್ಕಾಗಿ ಹಣದ ಬೇಡಿಕೆಯಿಟ್ಟಿದ್ದ ಎಂಬುದು ಸಹ ತಿಳಿದುಬಂದಿದ್ದು ಈ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ನ ಬಂಧನಕ್ಕೆ ಮಹಿಳಾ ಠಾಣ ಪೋಲೀಸರು ತೆರಳಿದ್ದರು. 

ದಿನಾಂಕ 28/08/2026 ರಂದು ಸಂಜೆ, ಶಿವಮೊಗ್ಗ ಮಹಿಳಾ ಠಾಣೆಯ ಸಿಆರ್ ನಂ: 110/2026 (ಕಲಂ 64(2)(ಎಮ್), 351(2) BNS 2023 ಹಾಗೂ ಕಲಂ 66(ಇ) IT Act) ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ದರ್ಶನ್ ಪತ್ತೆಗೆ ಹೆಡ್ ಕಾನ್ಸ್‌ಟೇಬಲ್ ಸಮೀಉಲ್ಲಾ ಹಾಗೂ ಕಾನ್ಸ್‌ಟೇಬಲ್ (CPC 1117) ಸಂತೋಷ್ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಮಾಹಿತಿಯನ್ನಾಧರಿಸಿ ಆಯನೂರಿನಿಂದ ಹಾರನಹಳ್ಳಿಗೆ ತೆರಳಿದ ಪೊಲೀಸರಿಗೆ ಸಂಜೆ 7:20 ರ ಸುಮಾರಿಗೆ ಹಾರನಹಳ್ಳಿ ಗ್ರಾಮ ಪಂಚಾಯಿತಿ ಬಳಿಯ ತರಕಾರಿ ಅಂಗಡಿ ಎದುರು 'ಟಿಯಾಗೋ' ಕಾರು (KA-14-MB-0178) ಕಂಡುಬಂದಿದೆ. ಕಾರಿನಲ್ಲಿ ಆರೋಪಿ ದರ್ಶನ್ ಹಾಗೂ ಆತನ ತಂದೆ ರಾಜನಾಯ್ಕ, ತಾಯಿ ಹಾಲಿಬಾಯಿ ಮತ್ತು ಅಕ್ಕ ರಮ್ಯಾ ಇದ್ದರು.

ಪೊಲೀಸರು ತಮ್ಮ ಗುರುತು ನೀಡಿ, ಎಫ್‌ಐಆರ್ ಪ್ರತಿಯನ್ನು ತೋರಿಸಿ ದರ್ಶನ್‌ನನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ, ಕಾರಿನಲ್ಲಿದ್ದ ಕುಟುಂಬಸ್ಥರು ಜೋರಾಗಿ ಕೂಗಾಡಿ ಗಲಾಟೆ ಆರಂಭಿಸಿ ಬಂಧನಕ್ಕೆ ಅಡ್ಡಿಪಡಿಸಿದ್ದಾರೆ.

ಪಿಎಸ್‌ಐ ಸಮ್ಮುಖದಲ್ಲೇ ಹಲ್ಲೆ ನಡೆಸಿ ಪರಾರಿ!

ಸ್ಥಳದಲ್ಲಿದ್ದ ಕುಂಸಿ ಠಾಣೆಯ ಗಸ್ತು ಸಿಬ್ಬಂದಿ ಶಶಿಧರ್ ಅವರು ಮಾಹಿತಿ ನೀಡಿದ ತಕ್ಷಣ, ಕುಂಸಿ ಠಾಣಾ ಪಿಎಸ್‌ಐ ಪಾರ್ವತಿಬಾಯಿ ಅವರು ಇಲಾಖಾ ವಾಹನದಲ್ಲಿ ಸ್ಥಳಕ್ಕೆ ಆಗಮಿಸಿ, ತನಿಖೆಗೆ ಸಹಕರಿಸುವಂತೆ ಆರೋಪಿಗೆ ತಿಳಿಹೇಳಿದ್ದಾರೆ.

ಆದರೆ, ಆರೋಪಿ ದರ್ಶನ್‌ನನ್ನು ಇಲಾಖಾ ವಾಹನಕ್ಕೆ ಹತ್ತಿಸುತ್ತಿದ್ದಂತೆಯೇ ಆತ ಏಕಾಏಕಿ ಹೆಡ್ ಕಾನ್ಸ್‌ಟೇಬಲ್ ಸಮೀಉಲ್ಲಾ ಅವರ ಮುಖಕ್ಕೆ ಕೈಯಿಂದ ಗುದ್ದಿ, ಕಾಲಿನಿಂದ ಒದ್ದು ಕೆಳಗೆ ಬೀಳಿಸಿ ಪರಾರಿಯಾಗಿದ್ದಾನೆ. ಈ ವೇಳೆ ಆತನನ್ನು ಬೆನ್ನಟ್ಟಲು ಯತ್ನಿಸಿದ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಸಂತೋಷ್ ಅವರನ್ನು ಆರೋಪಿಯ ತಂದೆ ರಾಜನಾಯ್ಕ, ತಾಯಿ ಹಾಲಿಬಾಯಿ ಹಾಗೂ ಅಕ್ಕ ರಮ್ಯಾ ಹಿಡಿದು ತಳ್ಳಿ, ಬೀಳಿಸಿ ಕರ್ತವ್ಯಕ್ಕೆ ತೀವ್ರ ಅಡ್ಡಿಪಡಿಸಿದ್ದಾರೆ.

ಆಸ್ಪತ್ರೆಗೆ ದಾಖಲು – ನಾಲ್ವರ ವಿರುದ್ಧ ದೂರು

ಘಟನೆಯಲ್ಲಿ ಗಾಯಗೊಂಡ ಹೆಡ್ ಕಾನ್ಸ್‌ಟೇಬಲ್ ಸಮೀಉಲ್ಲಾ ಹಾಗೂ ಸಂತೋಷ್ ಅವರು ಆಯನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಳಿಕ ಕುಂಸಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 183/2026 ರ ಅಡಿಯಲ್ಲಿ ಮುಖ್ಯ ಆರೋಪಿ ದರ್ಶನ್ (A1), ಆತನ ತಂದೆ ರಾಜನಾಯ್ಕ (A2), ತಾಯಿ ಹಾಲಿಬಾಯಿ (A3) ಹಾಗೂ ಅಕ್ಕ ರಮ್ಯಾ (A4) ಅವರ ವಿರುದ್ಧ ಬಿಎನ್‌ಎಸ್ (BNS) ಕಾಯ್ದೆಯ ಕಲಂ 262, 263(b), 132, 121(1) r/w 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಸ್ತುತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಂಡಿರುವ ಆರೋಪಿ ದರ್ಶನ್ ಹಾಗೂ ಆತನಿಗೆ ಸಾಥ್ ನೀಡಿದ ಕುಟುಂಬಸ್ಥರ ಬಂಧನಕ್ಕಾಗಿ ಕುಂಸಿ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Accused in Bhadravathi rape case escapes after assaulting women's police station staff; family members also obstructed official duty    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close