SUDDILIVE |SHIVAMOGGA
ಅಕ್ರಮ ಕಸಾಯಿಕಾನೆಯನ್ನ ಬಂದ್ ಮಾಡದಿದ್ದರೆ ಕಸಾಯಿಕಾನೆ ಎದುರೆ ಪ್ರತಿಭಟನೆಯ ಎಚ್ಚರಿಕೆ-Warning of protest in front of the slaughterhouse if the illegal slaughterhouse is not shut down
ಶಿವಮೊಗ್ಗ, ಸೆ.2: ಜಿಲ್ಲೆಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಗೋಸಾಗಾಟ, ಗೋಹತ್ಯೆ ಹಾಗೂ ಅಕ್ರಮ ಗೋಮಾಂಸದ ಹೋಟೆಲ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಂಪೂರ್ಣವಾಗಿ ತಡೆಗಟ್ಟುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಲಾಗಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ಕಳೆದ ನಾಲ್ಕು ವರ್ಷಗಳಿಂದ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ಕುರಿತು ಪೊಲೀಸ್ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಲಾಗಿದ್ದು, ಪ್ರಕರಣಗಳೂ ದಾಖಲಾಗಿವೆ ಎಂದು ವೇದಿಕೆ ತಿಳಿಸಿದೆ. ಆದರೆ ಕಳೆದ ಆರು ತಿಂಗಳಿನಿಂದ ಅಕ್ರಮ ಗೋಹತ್ಯೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದೆ.
ಭದ್ರಾವತಿ, ಶಿವಮೊಗ್ಗ ಹಾಗೂ ಶಿಕಾರಿಪುರ ತಾಲೂಕುಗಳ ವಿವಿಧ ಪ್ರದೇಶಗಳಲ್ಲಿ ಅಕ್ರಮ ಗೋವಿನ ಕಸಾಯಿಖಾನೆಗಳು ಹಾಗೂ ಗೋಮಾಂಸದ ಹೋಟೆಲ್‌ಗಳು ನಿರಂತರವಾಗಿ ನಡೆಯುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಭದ್ರಾವತಿ ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅನ್ವರ್ ಕಾಲೋನಿ, ಖಾಜಿ ಮೊಹಲ್ಲಾ, ಸೈಯದ್ ಕಾಲೋನಿ, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗೌಡ್ರಹಳ್ಳಿ, ದೊಣಬಘಟ್ಟ, ತಡಸ, ವೀರಾಪುರ, ತಿಪ್ಲಾಪುರ ಸೇರಿದಂತೆ ಹಲವು ಪ್ರದೇಶಗಳ ಹೆಸರನ್ನು ವೇದಿಕೆ ಪ್ರಸ್ತಾಪಿಸಿದೆ.
ಇದೇ ವೇಳೆ, ಕಾನೂನು ಕ್ರಮ ಕೈಗೊಳ್ಳಬೇಕಾದ ಕೆಲವು ಅಧಿಕಾರಿಗಳು ಅಕ್ರಮ ಚಟುವಟಿಕೆ ನಡೆಸುವವರೊಂದಿಗೆ ಶಾಮೀಲಾಗಿ ಲಂಚ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮನವಿಯಲ್ಲಿ ಮಾಡಲಾಗಿದೆ. ಆದರೆ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ತಡೆಯಲು ಭದ್ರಾವತಿ, ಶಿವಮೊಗ್ಗ ಹಾಗೂ ಶಿಕಾರಿಪುರ ತಾಲೂಕುಗಳ ವ್ಯಾಪ್ತಿಯಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಂಡು ಕಸಾಯಿಖಾನೆಗಳನ್ನು ಬಂದ್ ಮಾಡಿಸಬೇಕು. ಇಲ್ಲವಾದಲ್ಲಿ ಅಕ್ರಮ ಕಸಾಯಿಖಾನೆಗಳ ಮುಂಭಾಗ ಧರಣಿ ನಡೆಸಬೇಕಾಗುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.
ಮಹಾನಗರ ಪಾಲಿಕೆಗೂ ಮನವಿ
ಶಿವಮೊಗ್ಗ ನಗರದಲ್ಲಿ ಅಕ್ರಮ ಗೋಸಾಗಾಟ, ಗೋಹತ್ಯೆ ಹಾಗೂ ಅಕ್ರಮ ಗೋಮಾಂಸದ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೂ ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ.
ಶಿವಮೊಗ್ಗ ನಗರದಲ್ಲಿ ಅಕ್ರಮ ಗೋವಿನ ಕಸಾಯಿಖಾನೆಗಳು ಮತ್ತು ಗೋಮಾಂಸದ ಹೋಟೆಲ್‌ಗಳು ನಡೆಯುತ್ತಿವೆ ಎಂದು ಆರೋಪಿಸಿರುವ ವೇದಿಕೆ, ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡು ಇಂತಹ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಬೇಕು ಹಾಗೂ ಗೋವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಶಿವಕುಮಾರ್ ಎನ್. ಅವರು ಮನವಿಗಳನ್ನು ಸಲ್ಲಿಸಿದ್ದಾರೆ.

