SUDDILIVE || SHIVAMOGGA
ಕಸ್ತೂರಿರಂಗನ್ ವರದಿ ವಿರೋಧಿಸಿ ಹಾಲಲಕ್ಕವಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ; ರೈತರ ಹಕ್ಕು ರಕ್ಷಣೆಗೆ ಆಗ್ರಹ- BJP protests in Halalakkavalli against the Kasturirangan report; demands protection of farmers' rights
ಶಿವಮೊಗ್ಗ: ಕಸ್ತೂರಿರಂಗನ್ ವರದಿ ವಿರೋಧಿಸಿ ಮಲೆನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುತ್ತಿವೆ. ಸೆಪ್ಟೆಂಬರ್ 1ರಿಂದ ಆರಂಭಗೊಂಡಿರುವ ವರದಿ ವಿರೋಧಿ ಹೋರಾಟಕ್ಕೆ ಇಂದು 10ನೇ ದಿನವಾಗಿದ್ದು, ಸಾಗರ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ ಹಾಗೂ ಶಿವಮೊಗ್ಗ ಗ್ರಾಮಾಂತರ ಭಾಗಗಳಲ್ಲಿ ವಿವಿಧ ಹಂತಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ಇದರ ಭಾಗವಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹಾಲಲಕ್ಕವಳ್ಳಿಯಲ್ಲಿ ಬಿಜೆಪಿ ವತಿಯಿಂದ ಕಸ್ತೂರಿರಂಗನ್ ವರದಿ ವಿರೋಧಿಸಿ ಪ್ರತಿಭಟನೆ ನಡೆಯಿತು. ಹಾಲಲಕ್ಕವಳ್ಳಿಯ ವಿನಾಯಕ ದೇವಸ್ಥಾನದಲ್ಲಿ ದೇವರಿಗೆ, ಗೋವಿಗೆ ಹಾಗೂ ನೇಗಿಲಿಗೆ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಪಾದಯಾತ್ರೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಮಾತನಾಡಿ, ಕಸ್ತೂರಿರಂಗನ್ ವರದಿ ಜಾರಿಯಾದರೆ ಮಲೆನಾಡಿನ ರೈತರು ಹಾಗೂ ಗ್ರಾಮೀಣ ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಅರಣ್ಯ ಕಾಯ್ದೆ, ಹುಲಿ ಸಂರಕ್ಷಿತ ಪ್ರದೇಶ, ಆನೆ ಕಾರಿಡಾರ್ ಹಾಗೂ ಪರಿಸರ ಸೂಕ್ಷ್ಮ ವಲಯ ಸೇರಿದಂತೆ ಹಲವು ನಿಯಮಗಳಿಂದ ಸ್ಥಳೀಯರ ಚಟುವಟಿಕೆಗಳಿಗೆ ನಿರ್ಬಂಧಗಳಿವೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಕಾನೂನಿನ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
“ಈ ಕಾನೂನು ರೂಪಿಸುವಾಗ ಇಲ್ಲಿನ ಜನರ ಅಭಿಪ್ರಾಯಗಳನ್ನು ಪರಿಗಣಿಸಲಾಗಿದೆಯೇ? ಇಲ್ಲಿನ ಜನಜೀವನದ ವಾಸ್ತವ ಪರಿಸ್ಥಿತಿ ಕಾನೂನು ರೂಪಿಸುವವರ ಗಮನಕ್ಕೆ ಬಂದಿಲ್ಲ ಎಂಬ ಭಾವನೆ ನಮಗಿದೆ” ಎಂದು ಹರಿಕೃಷ್ಣ ಹೇಳಿದರು.
ಮಲೆನಾಡಿನ ಜನರು ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಮರೆತಿಲ್ಲ. ಕಾಡುಪ್ರಾಣಿಗಳಿಂದ ತೊಂದರೆ ಎದುರಾದರೂ ಅವುಗಳನ್ನು ಕೊಲ್ಲುವ ಕೆಲಸಕ್ಕೆ ಜನರು ಮುಂದಾಗಿಲ್ಲ. ಕಾಡುಪ್ರಾಣಿಗಳ ದಾಳಿಯಿಂದ ಹಲವು ಜೀವಗಳು ಬಲಿಯಾಗಿದ್ದರೂ ಸರ್ಕಾರದಿಂದ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಅವರು ಆರೋಪಿಸಿದರು.
ಹಾಲಲಕ್ಕವಳ್ಳಿ ಗ್ರಾಮಸ್ಥರ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಹರಿಕೃಷ್ಣ, ಮುಳುಗಡೆಯಾದ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಿ ಇಲ್ಲಿ ನೆಲೆಸುವಂತೆ ಮಾಡಿದ್ದು ಸರ್ಕಾರವೇ. ಹೀಗಿರುವಾಗ ಅವರಿಗೆ ಅಗತ್ಯ ಹಕ್ಕುಪತ್ರ, ಪೋಡು ಹಾಗೂ ಇತರ ಹಕ್ಕುಗಳನ್ನು ನೀಡುವುದು ಸರ್ಕಾರದ ಜವಾಬ್ದಾರಿ ಎಂದರು.
“ಹಳೆಯ ಕಾನೂನುಗಳಲ್ಲಿರುವ ಸಮಸ್ಯೆಗಳನ್ನು ಮೊದಲು ಬಗೆಹರಿಸಿ, ರೈತರಿಗೆ ಅವರ ಹಕ್ಕುಗಳನ್ನು ನೀಡಿ. ನಂತರ ಹೊಸ ಕಾನೂನಿನ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು. ರೈತರ ಮೇಲೆ ಒಂದರ ಮೇಲೊಂದು ಕಾನೂನುಗಳನ್ನು ಹೇರಬಾರದು” ಎಂದು ಒತ್ತಾಯಿಸಿದರು.
ರೈತರ ತಾಳ್ಮೆಗೂ ಒಂದು ಮಿತಿ ಇದೆ. ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ ಅವರು, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಕಸ್ತೂರಿರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು.
ಈ ಭಾಗದ ರೈತರ ಹಕ್ಕುಗಳನ್ನು ರಕ್ಷಿಸುವುದು, ಈಗಿರುವ ಕಾನೂನುಗಳಲ್ಲಿನ ಸಮಸ್ಯೆಗಳನ್ನು ತಿದ್ದುಪಡಿ ಮಾಡುವುದು ಹಾಗೂ ರೈತರಿಗೆ ಬದುಕಿನ ದಾರಿ ಕಲ್ಪಿಸುವ ಕ್ರಮಗಳನ್ನು ಕೈಗೊಂಡ ಬಳಿಕವೇ ಹೊಸ ನಿಯಮಗಳ ಜಾರಿಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಹಾಲಲಕ್ಕವಳ್ಳಿ ಗಾಜನೂರು ಜಲಾಶಯದ ಸಂತ್ರಸ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶವಾಗಿರುವುದರಿಂದ ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಇಲ್ಲಿನ ಜನರಲ್ಲಿಯೂ ಆತಂಕ ಮತ್ತು ವಿರೋಧ ವ್ಯಕ್ತವಾಗುತ್ತಿದೆ. ಇಂದು ಹಾಗೂ ನಾಳೆ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆಗಳು ಮುಂದುವರಿಯಲಿವೆ.
ಪ್ರತಿಭಟನೆಯಲ್ಲಿ ನವೀನ್ ಹೆದ್ದೂರು, ಶಾಂತ ಸುರೇಂದ್ರ, ಕುಮಾರ್, ಶಿವನಂಜಯ್ಯ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಸ್ಥಳೀಯ ರೈತರು ಪಾಲ್ಗೊಂಡಿದ್ದರು.