SUDDILIVE || HOLALURU
ಹೊಳಲೂರಿನಲ್ಲಿ 4.80 ಕ್ವಿಂಟಾಲ್ ಒಣ ಅಡಿಕೆ ಕಳ್ಳತನ: ಐವರು ಆರೋಪಿಗಳ ಬಂಧನ-Theft of 4.80 quintals of dry arecanut in Holaluru: Five accused arrested
ಶಿವಮೊಗ್ಗ: ಹೊಳಲೂರು ಗ್ರಾಮದ ಗೋಡಾನ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 4 ಕ್ವಿಂಟಾಲ್ 80 ಕೆಜಿ ಒಣ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ ಸೇರಿದಂತೆ ₹5.75 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 23ರಂದು ಬೆಳಗಿನ ಜಾವ ಹೊಳಲೂರು ಗ್ರಾಮದ ಗೋಡಾನ್‌ಗೆ ನುಗ್ಗಿದ್ದ ಕಳ್ಳರು ₹2.50 ಲಕ್ಷ ಮೌಲ್ಯದ ಸುಮಾರು 4 ಕ್ವಿಂಟಾಲ್ 80 ಕೆಜಿ ಒಣ ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 286/2026ರಂತೆ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 305ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಶಿವಮೊಗ್ಗ ಬಿ-ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ ಕಾಂಡಿಕೆ ಮತ್ತು ಸಬ್ ಇನ್ಸ್‌ಪೆಕ್ಟರ್ ನವೀನ್ ಮಠಪತಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ತನಿಖೆ ನಡೆಸಿದ ಪೊಲೀಸ್ ತಂಡವು ಸೆಪ್ಟೆಂಬರ್ 2ರಂದು ಪ್ರಕರಣದ ಆರೋಪಿಗಳಾದ ರಾಹುಲ್ (25), ಜಗನ್ನಾಥ್ ಎಸ್. (23), ಚಂದನ್ ಕೆ. (22), ನವೀನ್ ಅಲಿಯಾಸ್ ಟಿಪ್ಪಿ (20) ಹಾಗೂ ಸುದೀಪ್ ಡಿ. ಅವರನ್ನು ಮಧ್ಯಾಹ್ನ 3.30ರ ಸುಮಾರಿಗೆ ಬಂಧಿಸಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಸುಮಾರು ₹3 ಲಕ್ಷ ಮೌಲ್ಯದ ಮಾರುತಿ ಸುಜುಕಿ ಇಕೋ ಕಾರು, ಸುಮಾರು ₹25 ಸಾವಿರ ಮೌಲ್ಯದ ಹೀರೋ ಹೆಚ್‌ಎಫ್ ಡೀಲಕ್ಸ್ ಬೈಕ್ ಹಾಗೂ ಕಳ್ಳತನವಾಗಿದ್ದ ಸುಮಾರು 4 ಕ್ವಿಂಟಾಲ್ 60 ಕೆಜಿ ಒಣ ಅಡಿಕೆ ವಶಪಡಿಸಿಕೊಳ್ಳಲಾಗಿದೆ.
ಒಟ್ಟು ₹5.75 ಲಕ್ಷ ಮೌಲ್ಯದ ಕಾರು, ಬೈಕ್ ಮತ್ತು ಒಣ ಅಡಿಕೆಯನ್ನು ಪೊಲೀಸರು ಅಮಾನತ್ತುಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
