SUDDILIVE || SHIVAMOGGA
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ-Groundbreaking ceremony for various works under the Legislators' Local Area Development Scheme.
ಶಿವಮೊಗ್ಗ: ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ಶಿವಮೊಗ್ಗ ನಗರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಹಾಗೂ ಡಿ.ಎಸ್. ಅರುಣ್ ಅವರು ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಸಸ್ಯಾಹಾರಿ ಫುಡ್ ಕೋರ್ಟ್ ಸಮಗ್ರ ನವೀಕರಣ
ನಗರದ ಹೃದಯ ಭಾಗದಲ್ಲಿರುವ ಸಸ್ಯಾಹಾರಿ ಫುಡ್ ಕೋರ್ಟ್‌ನ ಸಮಗ್ರ ನವೀಕರಣ ಕಾಮಗಾರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಶೇಷ ಅನುದಾನ ಕಲ್ಪಿಸಲಾಗಿದೆ. ಪ್ರತಿದಿನ ಸಾವಿರಾರು ಸಾರ್ವಜನಿಕರು ಹಾಗೂ ಪ್ರವಾಸಿಗರು ಭೇಟಿ ನೀಡುವ ಈ ಫುಡ್ ಕೋರ್ಟ್‌ನ್ನು ಮತ್ತಷ್ಟು ಶುಚಿ, ಸುಸಜ್ಜಿತ ಹಾಗೂ ಆಧುನಿಕಗೊಳಿಸುವ ಉದ್ದೇಶದಿಂದ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಸಾರ್ವಜನಿಕರಿಗೆ ಉತ್ತಮ ವಾತಾವರಣದಲ್ಲಿ ಆಹಾರ ಸೇವಿಸಲು ಅನುಕೂಲವಾಗುವಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಹೈಟೆಕ್ ಮಾದರಿಯಲ್ಲಿ ಫುಡ್ ಕೋರ್ಟ್‌ನ್ನು ರೂಪಿಸುವ ಉದ್ದೇಶ ಹೊಂದಲಾಗಿದೆ.
ಯೋಗ–ಧ್ಯಾನ ಮಂದಿರ ನಿರ್ಮಾಣಕ್ಕೆ ಚಾಲನೆ
ಇದೇ ವೇಳೆ ನಗರದ ವಾಜಪೇಯಿ ಬಡಾವಣೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಿರ್ಮಿಸಲಾಗುತ್ತಿರುವ ನೂತನ ‘ಯೋಗ ಹಾಗೂ ಧ್ಯಾನ ಮಂದಿರ’ಕ್ಕೂ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಇಂದಿನ ಒತ್ತಡದ ಜೀವನಶೈಲಿಯಲ್ಲಿ ಸಾರ್ವಜನಿಕರಿಗೆ ಮಾನಸಿಕ ನೆಮ್ಮದಿ, ಆಧ್ಯಾತ್ಮಿಕ ಚಿಂತನೆ ಹಾಗೂ ಆರೋಗ್ಯಕರ ಜೀವನಶೈಲಿಗೆ ಅಗತ್ಯವಾದ ಯೋಗಾಭ್ಯಾಸಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದು ಈ ಮಂದಿರದ ಪ್ರಮುಖ ಉದ್ದೇಶವಾಗಿದೆ.
ಯೋಗ ಮತ್ತು ಧ್ಯಾನದ ಮೂಲಕ ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯ, ಶಾಂತಿ ಹಾಗೂ ಸಕಾರಾತ್ಮಕ ಚಿಂತನೆ ಬೆಳೆಸಲು ಈ ಕೇಂದ್ರ ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.
ಪ್ರಮುಖರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಮಾಜಿ ಸುಡಾ ಅಧ್ಯಕ್ಷ ನಾಗರಾಜ್, ಜ್ಞಾನೇಶ್ವರ್, ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ, ಸಸ್ಯಾಹಾರಿ ಫುಡ್ ಕೋರ್ಟ್ ಅಧ್ಯಕ್ಷ ರಮೇಶ್, ಪ್ರಮುಖರಾದ ನಾರಾಯಣ, ಧರ್ಮರಾಜ್, ಸಂಜೀವಣ್ಣ, ನವುಲೆ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಅನುಸೂಯಕ್ಕ, ರಾಜಯೋಗಿನಿ ಸ್ನೇಹಕ್ಕ, ವಂದನಕ್ಕ ಸೇರಿದಂತೆ ಸಂಸ್ಥೆಯ ಪ್ರಮುಖರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
