SUDDILIVE || THIRTHAHALLI
ಕಸ್ತೂರಿ ರಂಗನ್ ಹೋರಾಟದಲ್ಲಿ ಒಗ್ಗಟ್ಟಿಗೆ ಕರೆ: ‘ಚಿಲ್ಲರೆ ರಾಜಕಾರಣ’ದ ಬಗ್ಗೆ ಮಂಜುನಾಥ ಗೌಡ ತೀಕ್ಷ್ಣ ಪ್ರತಿಕ್ರಿಯೆ- Call for unity in the Kasturirangan agitation: Manjunatha Gowda’s sharp reaction to ‘petty politics’
ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ವಿರೋಧಿಸಿ ತೀರ್ಥಹಳ್ಳಿಯಲ್ಲಿ 8 ಕಿ.ಮೀ. ಪಾದಯಾತ್ರೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರಿ ಧುರೀಣ ಆರ್.ಎಂ. ಮಂಜುನಾಥ ಗೌಡ, ‘ಚಿಲ್ಲರೆ ರಾಜಕಾರಣಿಗಳು ಯಾರು?’ ಎಂಬ ಮಾಧ್ಯಮದವರ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
‘ಚಿಲ್ಲರೆ ರಾಜಕಾರಣ ಯಾರು ಮಾಡುತ್ತಿದ್ದಾರೆ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನೋಟ್ ಯಾರು, ಚಿಲ್ಲರೆ ಯಾರು ಅಂತ ಹುಡುಕೋದು ಬೇಡ. ನಾನು ಯಾರಿಗೆ ಹೇಳಿದ್ದೀನೋ ಅವರಿಗೆ ಅದು ಅರ್ಥ ಆಗುತ್ತದೆ” ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಒಗ್ಗಟ್ಟು ಅಗತ್ಯ ಎಂದು ಪ್ರತಿಪಾದಿಸಿದ ಮಂಜುನಾಥ ಗೌಡ, ಒಬ್ಬರು ಹೋರಾಟ ಮಾಡಲಿ, ಹತ್ತು ಜನ ಮಾಡಲಿ ಅಥವಾ ಸಾವಿರ ಜನ ಹೋರಾಟ ಮಾಡಲಿ—ಹೋರಾಟದ ಉದ್ದೇಶ ಒಂದೇ ಆಗಿದ್ದರೆ ಎಲ್ಲರಿಗೂ ತಮ್ಮ ಬೆಂಬಲವಿದೆ ಎಂದರು.
“ಯಾವ ಪಕ್ಷ, ಯಾವ ಸಂಘಟನೆಗಳು ಭಾಗಿಯಾಗುತ್ತವೆಯೋ ಅವರೆಲ್ಲರಿಗೂ ನಮ್ಮ ಸಂಪೂರ್ಣ ಬೆಂಬಲ ಇದೆ. ಸಂಘಟನೆಗಳನ್ನು ಒಡೆಯುವುದು ಬೇಡ” ಎಂದು ಮನವಿ ಮಾಡಿದರು.
ಕಸ್ತೂರಿ ರಂಗನ್ ವರದಿ ವಿರುದ್ಧ ಜನರ ಪರವಾಗಿ ಹೋರಾಟ ನಡೆಸಲು ವ್ಯವಸ್ಥೆ ಹಾಗೂ ಸಂಘಟನೆಯನ್ನು ರೂಪಿಸಲಾಗಿದೆ. ವರದಿ ವಿರೋಧಿಸಿ ಯಾರು ಹೋರಾಟ ಮಾಡುತ್ತಾರೋ, ಯಾರು ಆಕ್ಷೇಪಣೆ ಸಲ್ಲಿಸುತ್ತಾರೋ ಅವರಿಗೆಲ್ಲ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.
ಕೇಂದ್ರ ಸರ್ಕಾರಕ್ಕೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಕರೆ
ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯ ಬಗ್ಗೆಯೂ ಮಂಜುನಾಥ ಗೌಡ ಮಾಹಿತಿ ನೀಡಿದರು.
ಆ್ಯಪ್‌ನಲ್ಲಿ ಇಂಗ್ಲಿಷ್‌ನಲ್ಲಿ ನೀಡಲಾಗಿರುವ ಆಕ್ಷೇಪಣೆ ಫಾರಂನಲ್ಲಿ ಹೆಸರು, ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ, ಗ್ರಾಮ, ತಾಲೂಕು ಹಾಗೂ ಜಿಲ್ಲೆ ಸೇರಿದಂತೆ ಅಗತ್ಯ ಮಾಹಿತಿಯನ್ನು ನಮೂದಿಸಿ ಆಕ್ಷೇಪಣೆ ಸಲ್ಲಿಸಬಹುದು. ಈ ಆಕ್ಷೇಪಣೆ ನೇರವಾಗಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಗೆ ತಲುಪಲಿದೆ ಎಂದು ಹೇಳಿದರು.
ಆಕ್ಷೇಪಣೆ ಸಲ್ಲಿಸಿದ ಬಳಿಕ ನೀಡಿರುವ ಇ-ಮೇಲ್ ವಿಳಾಸಕ್ಕೆ ತಕ್ಷಣ ಎಂಡಾರ್ಸ್‌ಮೆಂಟ್ ಬರುವ ವ್ಯವಸ್ಥೆಯೂ ಇದೆ ಎಂದು ಅವರು ವಿವರಿಸಿದರು.
“ಸುಮಾರು ಒಂದು ಸಾವಿರ ಸಂಘ-ಸಂಸ್ಥೆಗಳ ಮೂಲಕ ಲಕ್ಷಾಂತರ ಜನರ ಪರವಾಗಿ ಆಕ್ಷೇಪಣೆ ಸಲ್ಲಿಸುವ ಕೆಲಸವನ್ನು ಸೆಪ್ಟೆಂಬರ್ 25ರವರೆಗೆ ಮಾಡುತ್ತೇವೆ. ಬೇರೆ ಬೇರೆ ಸಂಘಟನೆಗಳೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು” ಎಂದು ಮಂಜುನಾಥ ಗೌಡ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಧ್ಯಮದವರು “ಹಾಗಾದರೆ ಸಂಘಟನೆಗಳನ್ನು ಒಡೆಯಲು ಪ್ರಯತ್ನಿಸುತ್ತಿರುವವರು ಯಾರು? ಚಿಲ್ಲರೆ ರಾಜಕಾರಣ ಮಾಡುತ್ತಿರುವವರು ಯಾರು?” ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಮಂಜುನಾಥ ಗೌಡ ನೀಡಿದ ಪ್ರತಿಕ್ರಿಯೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
