ವಿಜಯೇಂದ್ರ ವಿರುದ್ಧ ಬೇಳೂರು ವಾಗ್ದಾಳಿ-Belur launches a verbal attack on Vijayendra

SUDDILIVE || THIRTHAHALLI

ವಿಜಯೇಂದ್ರ ವಿರುದ್ಧ ಬೇಳೂರು ವಾಗ್ದಾಳಿ-Belur launches a verbal attack on Vijayendra 

Beluru, lanches

 
 

ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಹೊಸನಗರ ಹಾಗೂ ಸಾಗರದಲ್ಲಿ ಹೋರಾಟ ನಡೆಸಿದ ಬಳಿಕ ಇದೀಗ ತೀರ್ಥಹಳ್ಳಿಯಲ್ಲೂ ಬೃಹತ್ ಪಾದಯಾತ್ರೆ ನಡೆಸಲಾಗಿದೆ. ಸಹಕಾರಿ ಕ್ಷೇತ್ರದ ನೇತೃತ್ವದಲ್ಲಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪಾದಯಾತ್ರೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿನ ರೈತರು ಹಾಗೂ ಜನಸಾಮಾನ್ಯರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

"ಈಗಾಗಲೇ ಶರಾವತಿ ಸಂತ್ರಸ್ತರು ಸೇರಿದಂತೆ ಇಲ್ಲಿನ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮ್ಮಲ್ಲಿರುವ ಅಲ್ಪಸ್ವಲ್ಪ ಭೂಮಿಯಲ್ಲಿ ಜೀವನ ನಡೆಸುತ್ತಿರುವ ರೈತರಿಗೆ ಕಸ್ತೂರಿ ರಂಗನ್ ವರದಿ ಮತ್ತೊಂದು ಸಂಕಷ್ಟ ತಂದೊಡ್ಡಲಿದೆ. ಗ್ರಾಮಗಳಲ್ಲಿ ಶಾಲೆ, ಮನೆ, ಆಸ್ಪತ್ರೆ, ದೇವಸ್ಥಾನ ಸೇರಿದಂತೆ ಜನಜೀವನಕ್ಕೆ ಅಗತ್ಯವಾದ ಎಲ್ಲ ವ್ಯವಸ್ಥೆಗಳಿದ್ದರೂ ಅವುಗಳ ಮೇಲೂ ವರದಿ ಪರಿಣಾಮ ಬೀರುವ ಆತಂಕವಿದೆ" ಎಂದು ಬೇಳೂರು ಹೇಳಿದರು.

ಕಸ್ತೂರಿ ರಂಗನ್ ವರದಿ ಕುರಿತು ರೈತರ ಪರವಾಗಿ ಸಮರ್ಪಕವಾಗಿ ಧ್ವನಿ ಎತ್ತುವ ಕೆಲಸವಾಗಿಲ್ಲ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆದ ಚರ್ಚೆಗಳಲ್ಲಿ ಬಿಜೆಪಿ ಸಂಸದರು ಸಮರ್ಪಕವಾಗಿ ಭಾಗವಹಿಸಿಲ್ಲ ಎಂದು ಟೀಕಿಸಿದರು.

"ಏಳು ಕರಡು ಅಧಿಸೂಚನೆಗಳು ಬಂದಿದ್ದರೂ ಬಿಜೆಪಿ ಸಂಸದರು ಈ ವಿಚಾರವನ್ನು ಪ್ರಸ್ತಾಪಿಸಿ ಚರ್ಚೆಗೆ ತೆಗೆದುಕೊಂಡಿಲ್ಲ. ಸಭೆಗಳಿಗೆ ಕರೆದರೂ ಒಬ್ಬರೂ ಭಾಗವಹಿಸಿಲ್ಲ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ" ಎಂದು ಬೇಳೂರು ಹೇಳಿದರು.

ವಿಶೇಷ ಅಧಿವೇಶನದಲ್ಲಿ ಚರ್ಚೆ

ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಯನ್ನು ರದ್ದುಪಡಿಸುವಂತೆ ಮುಖ್ಯಮಂತ್ರಿ ಅವರಿಗೂ ಮನವಿ ಮಾಡಿರುವುದಾಗಿ ತಿಳಿಸಿದ ಬೇಳೂರು, ಸೆಪ್ಟೆಂಬರ್ 21, 22 ಮತ್ತು 23ರಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಈ ವಿಚಾರವನ್ನು ಮುಕ್ತವಾಗಿ ಚರ್ಚಿಸಿ ಕರಡು ಅಧಿಸೂಚನೆ ರದ್ದುಪಡಿಸುವ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

"ಕರಡು ಅಧಿಸೂಚನೆ ರದ್ದಾಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ರೈತರ ಹಿತದೃಷ್ಟಿಯಿಂದ ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ" ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ, ಜಿಲ್ಲೆಯ ಜನರು ಕಸ್ತೂರಿ ರಂಗನ್ ವರದಿ ಕುರಿತು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ವೆಬ್‌ಸೈಟ್ ಮೂಲಕ ಅವಕಾಶ ಕಲ್ಪಿಸಿರುವುದಾಗಿ ಬೇಳೂರು ತಿಳಿಸಿದರು.

ವಿಜಯೇಂದ್ರ ವಿರುದ್ಧ ಬೇಳೂರು ವಾಗ್ದಾಳಿ

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪಾದಯಾತ್ರೆ ಟೀಕೆಗೆ ಪ್ರತಿಕ್ರಿಯಿಸಿದ ಬೇಳೂರು, ಅದು ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು  ವಿಜಯೇಂದ್ರ ಒದ್ದಾಡುತ್ತಿದ್ದಾರೆ. ಅವರ ಅಪ್ಪ ಸಿಎಂ ಆಗಿದ್ದಾಗ ರೈತರ ಸಾಲ ಮನ್ನ ಮಾಡಿ ಎಂದರೆ ನೋಟು ಪ್ರಿಂಟ್ ಮಾಡಲ್ಲ ಎಂದಿದ್ದರು . ಆಗೇನಾಗಿತ್ತು. ಎಂದು ವಾಗ್ದಾಳಿ ನಡೆಸಿದರು.

ಬಾವಿ ಜಟಾಪಟಿ

ಸಾಗರದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿರುವ ಬಾವಿಯನ್ನ ಹರಾಜು ಮುಖಾಂತರ ಪಡೆದು ಮುಚ್ಚಲಾಗಿದೆ. ಇದನ್ನ ಮಾಧ್ಯಮದವರು ಪ್ರಶ್ನಿಸಿದಕ್ಕೆ ಬಾವಿ ಹರಾಜಿನಲ್ಲಿ ಪಡೆದವರು ಮುಚ್ಚುತ್ತಾರೋ ತೆಗೆಯುತ್ತಾರೋ ಗುತ್ತಿಗೆದಾರರು ನಿರ್ಧರಿಸುತ್ತಾರೆ. ಇವರಿಗೆ ಏಕೆ? ರಾಜಕಾರಣ ಮಾಡುವಲ್ಲಿ ಮಾಡಲಿ. ಮಾಡಲು ಯಾವುದೂ ವಿಷಯವಿಲ್ಲದ ಕಾರಣ ಮಾಜಿ ಶಾಸಕರು ಬಾವಿ ಹಿಡಿದುಕೊಂಡು ಬಂದಿದ್ದಾರೆ ಎಂದರು.  

ಬಾವಿಯಲ್ಲಿ ಇಬ್ಬರು ವ್ಯಕ್ತಿಗಳು ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬಾವಿ ಮುಚ್ಚುವಂತೆ ಸ್ಥಳೀಯರೇ ಮನವಿ ಮಾಡಿದ್ದರು. ರೈತರಿಗಾಗಿ ತಾನು ಮತ್ತೊಂದು ಬಾವಿ ಮಾಡಿಸಿಕೊಟ್ಟಿರುವುದಾಗಿ ಬೇಳೂರು ಹೇಳಿದರು.

"ಚುನಾವಣೆ ಹತ್ತಿರ ಬರುತ್ತಿರುವುದರಿಂದ ‘ನಾನು ಇದ್ದೇನೆ’ ಎಂಬುದನ್ನು ತೋರಿಸಿಕೊಳ್ಳಲು ವಿಜಯೇಂದ್ರ ಬಾವಿ ವಿಚಾರವನ್ನು ಹಿಡಿದುಕೊಂಡು ಬಂದಿದ್ದಾರೆ" ಎಂದು ಬೇಳೂರು ವ್ಯಂಗ್ಯವಾಡಿದರು.

ಕಸ್ತೂರಿ ರಂಗನ್ ವರದಿ ರದ್ದತಿಗಾಗಿ ತೀರ್ಥಹಳ್ಳಿಯಲ್ಲಿ ನಡೆದ ಪಾದಯಾತ್ರೆಯೊಂದಿಗೆ ಮಲೆನಾಡಿನಲ್ಲಿ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ವಿಶೇಷ ಅಧಿವೇಶನದಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

Belur launches a verbal attack on Vijayendra   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close