SUDDILIVE || BANGALORE
ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪ್ರಕಟ-SC/ST Newspaper Editors' Association State-Level Endowment Award Announced
ಬೆಂಗಳೂರು: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘವು 2025ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದೆ. ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಶೋಷಿತರು ಹಾಗೂ ಹಿಂದುಳಿದ ಸಮುದಾಯಗಳ ಪರವಾಗಿ ಸೇವೆ ಸಲ್ಲಿಸಿದ ಹಿರಿಯ ಹಾಗೂ ಉದಯೋನ್ಮುಖ ಪತ್ರಕರ್ತರು, ಹೋರಾಟಗಾರರು ಮತ್ತು ದಲಿತ ಸಂವೇದನೆಯುಳ್ಳ ವೃತ್ತಿಪರರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಸಂಘವು ಕಳೆದ 26 ವರ್ಷಗಳಿಂದ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಲಿತರ ಮಾಲಿಕತ್ವ ಅಥವಾ ಸಂಪಾದಕತ್ವದ ಪತ್ರಿಕೆಗಳ ಹಿತ ಕಾಯುವ ಜತೆಗೆ, ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಸಹಭಾಗಿತ್ವವನ್ನು ಬಲಪಡಿಸುವ ಹಾಗೂ ದಲಿತ ಪತ್ರಕರ್ತರ ಬೌದ್ಧಿಕ ಉನ್ನತೀಕರಣಕ್ಕೆ ಸಂಬಂಧಿಸಿದ ವಿವಿಧ ರಚನಾತ್ಮಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್, ದಲಿತ ಚಳವಳಿಯ ಪ್ರಮುಖ ನಾಯಕರಾದ ಪ್ರೊ. ಬಿ. ಕೃಷ್ಣಪ್ಪ, ದಲಿತರ ಸ್ವಾಭಿಮಾನ ಮತ್ತು ಹಕ್ಕುಗಳಿಗಾಗಿ ರಾಜಕೀಯ ಶಕ್ತಿಯನ್ನು ಧಾರೆ ಎರೆದ ಮಾಜಿ ಸಚಿವರಾದ ಬಿ. ಬಸವಲಿಂಗಪ್ಪ ಹಾಗೂ ಮಾಜಿ ಸಚಿವ ಬಿ. ರಾಚಯ್ಯ ಅವರ ಹೆಸರಿನಲ್ಲಿ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ.
ನಾಲ್ವರಿಗೆ ರಾಜ್ಯಮಟ್ಟದ ದತ್ತಿ ಪ್ರಶಸ್ತಿ
2025ನೇ ಸಾಲಿನ ಪ್ರಶಸ್ತಿಗಳಲ್ಲಿ ತಲಾ 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತದೆ.
- ಡಾ. ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ: ಕೆ. ದೀಪಕ್, ಸಂಪಾದಕರು, ‘ವಿಜಯ ಕಾಲ’ ಕನ್ನಡ ದಿನಪತ್ರಿಕೆ, ಮೈಸೂರು ಹಾಗೂ ಪ್ರಗತಿಪರ ಚಿಂತಕರು.
- ಪ್ರೊ. ಬಿ. ಕೃಷ್ಣಪ್ಪ ದತ್ತಿ ಪ್ರಶಸ್ತಿ: ಗುರುಪ್ರಸಾದ್ ಕೆರಗೋಡು, ರಾಜ್ಯ ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಂಡ್ಯ.
- ಬಿ. ರಾಚಯ್ಯ ದತ್ತಿ ಪ್ರಶಸ್ತಿ: ಬದ್ರುದ್ದೀನ್ ಕೆ., ಆಯುಕ್ತರು, ಮಾಹಿತಿ ಆಯೋಗ, ಬೆಂಗಳೂರು ಹಾಗೂ ಹಿರಿಯ ಪತ್ರಕರ್ತರು.
- ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿ: ಯತಿರಾಜ್ ಬಿ.ಸಿ. (ಯತಿರಾಜ್ ಬ್ಯಾಲಹಳ್ಳಿ), ಪತ್ರಕರ್ತರು, ಬೆಂಗಳೂರು.
ಐವರು ಸಂಪಾದಕರಿಗೆ ಗೌರವ ಪ್ರಶಸ್ತಿ
ಪತ್ರಿಕೆಗಳನ್ನು ನಡೆಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಾಧಕ ಸಂಪಾದಕರನ್ನು ಗುರುತಿಸಿ ಸಂಘದ ವತಿಯಿಂದ ಗೌರವ ಪ್ರಶಸ್ತಿಗಳನ್ನು ಸಹ ಘೋಷಿಸಲಾಗಿದೆ. ಪ್ರಶಸ್ತಿ ಫಲಕ ಹಾಗೂ ಗೌರವ ಸ್ಮರಣಿಕೆಯನ್ನು ನೀಡಲಾಗುತ್ತದೆ.
- ಚಂದ್ರಣ್ಣ – ಸಂಪಾದಕರು, ‘ಕರ್ನಾಟಕ ಎಕ್ಸ್‌ಪ್ರೆಸ್’, ದಾವಣಗೆರೆ.
- ದೇವೇಂದ್ರಪ್ಪ ಕಪ್ಪನೂರು – ಸಂಪಾದಕರು, ‘ಬುದ್ಧಲೋಕ’, ಗುಲ್ಬರ್ಗಾ.
- ಬಿ. ಓ. ಕರಿಯಮ್ಮ – ಸಂಪಾದಕರು, ‘ಜಗಳೂರು ವಾಯ್ಸ್’, ದಾವಣಗೆರೆ.
- ಸುಭಾಷ್ ಹೊದ್ಲೂರು – ಸಂಪಾದಕರು, ‘ಸುದಿನ’ ಕನ್ನಡ ದಿನಪತ್ರಿಕೆ, ಬಾಗಲಕೋಟೆ.
- ಅನೂಪ್ ಕುಮಾರ್ – ಕಾರ್ಯನಿರ್ವಾಹಕ ಸಂಪಾದಕರು, ‘ಬಳ್ಳಾರಿ ಬೆಳಗಾಯಿತು’, ಬಳ್ಳಾರಿ.
ಸೆ.17ರಂದು ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 17ರಂದು ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಸರ್ಕಾರಿ ನೌಕರರ ಸಂಘದ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಚೆಲುವರಾಜು ಹಾಗೂ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ತಿಳಿಸಿದ್ದಾರೆ.
