SUDDILIVE || SAGARA
ಸಾಗರ ತಹಶೀಲ್ದಾರ್ ವಿರುದ್ಧ ಶಾಸಕರ ಅಸಮಾಧಾನವೋ ಅಥವಾ ಹೊಟ್ಟೆಕಿಚ್ಚೋ?Is the MLA's displeasure with the Sagar Tahsildar a matter of grievance or jealousy?
ಸಾಗರ: ತಾಲೂಕಿನಲ್ಲಿ ನಿರಂತರ ದಾಳಿ ಹಾಗೂ ಕಾರ್ಯಾಚರಣೆ ನಡೆಸುತ್ತಿರುವ ತಹಶೀಲ್ದಾರ್ ಪ್ರತೀಭಾ ಅವರ ಕಾರ್ಯವೈಖರಿ ಕುರಿತು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ನಿನ್ನೆ ಸಾಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರ್ಯಾಚರಣೆ ನಡೆಸುವ ವೇಳೆ ವಿಡಿಯೋ ಮಾಡಿ ಅದನ್ನು ಮಾಧ್ಯಮಗಳಿಗೆ ನೀಡುವ ಮೂಲಕ ಪ್ರಚಾರ ಪಡೆಯುವ ಕ್ರಮವನ್ನು ತಕ್ಷಣವೇ ನಿಲ್ಲಿಸುವಂತೆ ಅಧಿಕಾರಿಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸೂಚಿಸಿದ್ದಾರೆ.
“ಪ್ರಚಾರ ಮೊದಲು ಅಲ್ಲ, ಕೆಲಸ ಮೊದಲು. ಕಾರ್ಯಾಚರಣೆಗಳ ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡುವುದನ್ನು ನಿಲ್ಲಿಸಿ. ಪ್ರಚಾರದ ಧಾಟಿ ಬಿಟ್ಟು ನಿಯಮಾನುಸಾರ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಿ” ಎಂದು ಅಧಿಕಾರಿಗಳಿಗೆ ಸೂಚಿಸಿರುವುದು ಸಭೆಯಲ್ಲಿ ಗಮನ ಸೆಳೆಯಿತು.
ತಹಶೀಲ್ದಾರ್ ಅವರ ನಿರಂತರ ದಾಳಿ ಹಾಗೂ ಕಾರ್ಯಾಚರಣೆಗಳ ಕುರಿತು ಶಾಸಕರಿಂದಲೇ ಇಂತಹ ಸೂಚನೆ ಬಂದಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ತಹಶೀಲ್ದಾರ್ ಅವರ ಕಾರ್ಯಾಚರಣೆಗಳ ಪ್ರಚಾರದ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಅಸಮಾಧಾನಗೊಂಡಿದ್ದಾರೆಯೇ ಎಂಬ ಅನುಮಾನವೂ ಇದೀಗ ಮೂಡಿದೆ.
ಇದೇ ವೇಳೆ ತಾಲೂಕು ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು 15 ದಿನಗಳ ಗಡುವು ನೀಡಿದ್ದಾರೆ.
ತಾಲೂಕು ಆಡಳಿತದಲ್ಲಿ ಸುಧಾರಣೆ ತರಬೇಕು, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಹಾಗೂ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೆಡಿಪಿ ಸಭೆಯಲ್ಲಿ ಆಡಳಿತದ ಕಾರ್ಯವೈಖರಿ ಕುರಿತು ಶಾಸಕರು ನೇರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವುದು ಇದೀಗ ಸಾಗರ ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.
