SUDDILIVE || SHIVAMOGGA
ಶೇಷಾದ್ರಿಪುರಂ ರೈಲ್ವೆ ಫ್ಲೈಓವರ್ ಮೇಲೆ ಭೀಕರ ಸರಣಿ ಅಪಘಾತ: ಇಬ್ಬರಿಗೆ ತೀವ್ರ ಗಾಯ-Horrific series of accidents on Seshadripuram railway flyover: Two seriously injured
ಶಿವಮೊಗ್ಗ: ನಗರದ ಶೇಷಾದ್ರಿಪುರಂ ರೈಲ್ವೆ ಫ್ಲೈಓವರ್ ಮೇಲೆ ಶುಕ್ರವಾರ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಆಟೋ, ಕಾರು ಹಾಗೂ ಬುಲೆಟ್ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಆಟೋ ಚಾಲಕ ಫ್ಲೈಓವರ್‌ನ ಪಿಲ್ಲರ್ ಮೇಲಕ್ಕೆ ಎಸೆಯಲ್ಪಟ್ಟು ಸಿಲುಕಿಕೊಂಡಿದ್ದರೆ, ಬೈಕ್ ಸವಾರನ ಕಾಲಿಗೆ ಗಂಭೀರವಾಗಿ ಗಾಯವಾಗಿದೆ.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹೊನ್ನಾಳಿ ರಸ್ತೆಯ ಮಾರ್ಗವಾಗಿ ರಾಗಿಗುಡ್ಡದ ಕಡೆಗೆ ವಾಹನಗಳು ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದ ಬೈಕ್ ಹಾಗೂ ಆಟೋವನ್ನು ಹಿಂದಿಕ್ಕಲು ಕಾರು ಮುಂದಾದ ಸಂದರ್ಭದಲ್ಲಿ ಸರಣಿ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಆಟೋ ಚಾಲಕ ಭಾಸ್ಕರ್ (40) ಅವರು ವಾಹನದಿಂದ ಎಸೆಯಲ್ಪಟ್ಟು ಫ್ಲೈಓವರ್‌ನ ಪಿಲ್ಲರ್ ಮೇಲ್ಭಾಗದಲ್ಲಿ ಸಿಲುಕಿಕೊಂಡಿದ್ದರು. ಘಟನೆ ಕಂಡು ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಪಿಲ್ಲರ್ ಮೇಲೆ ಸಿಲುಕಿದ್ದ ಭಾಸ್ಕರ್ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಿ ಆಸ್ಪತ್ರೆಗೆ ಕಳುಹಿಸಲು ಸಾರ್ವಜನಿಕರು ನೆರವಾದರು.
ಇದೇ ವೇಳೆ ಬುಲೆಟ್ ಬೈಕ್ ಸವಾರ ನಹೀಮ್ (35) ಅವರ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಅಪಘಾತದಲ್ಲಿ ಅವರ ಕಾಲು ಮುರಿದಿದೆ ಎನ್ನಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಇಬ್ಬರು ಗಾಯಾಳುಗಳನ್ನು ತಕ್ಷಣವೇ ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಕೆಲಕಾಲ ಫ್ಲೈಓವರ್ ಮೇಲಿನ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಸಂಪೂರ್ಣ ಸ್ಥಗಿತಗೊಂಡ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.
ವಿಷಯ ತಿಳಿಯುತ್ತಿದ್ದಂತೆ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ, ವಾಹನ ಸಂಚಾರವನ್ನು ಸುಗಮಗೊಳಿಸುವ ಕಾರ್ಯ ಕೈಗೊಂಡರು.
ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಫ್ಲೈಓವರ್ ಮೇಲಿನ ವೇಗದ ಸಂಚಾರ, ಹಿಂದಿಕ್ಕುವ ವೇಳೆ ಚಾಲಕರ ನಿಯಂತ್ರಣ ತಪ್ಪಿರುವುದು ಸೇರಿದಂತೆ ವಿವಿಧ ಅಂಶಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
