SUDDILIVE || SHIVAMOGGA
ಭೀಮನ ಮಡುವು ಸೇರಿದ 82ನೇ ಹಿಂದೂ ಮಹಾಸಭಾ ಗಣಪತಿ- ಸಂಪನ್ನಗೊಂಡ ರಾಜಬೀದಿ ಉತ್ಸವ-Immersion of HMS Ganesha in Bheemana Maduvu in Shivamogga
ಶಿವಮೊಗ್ಗ: ನಗರದ ಕೋಟೆ ಭೀಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ತುಂಗಾ ನದಿಯ ಭೀಮನ ಮಡುವಿನಲ್ಲಿ ಗಣಪತಿಯನ್ನ ವಿಸರ್ಜಿಸುವ ಮೂಲಕ ಶಿವಮೊಗ್ಗದ 82ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಸಂಪನ್ನಗೊಂಡಿದೆ.
ಅನಂತ ಚತುರ್ದಶಿಯ ಅಂಗವಾಗಿ ಸೆಪ್ಟೆಂಬರ್ 25ರಂದು ಬೆಳಿಗ್ಗೆ ಸುಮಾರು 11.12ಕ್ಕೆ ಕೋಟೆ ಭೀಮೇಶ್ವರ ದೇವಸ್ಥಾನದಿಂದ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಿದರು. ಮಂಗಳವಾದ್ಯಗಳೊಂದಿಗೆ ಆರಂಭಗೊಂಡ ಮೆರವಣಿಗೆಗೆ ಮಾರ್ಗದುದ್ದಕ್ಕೂ ಭಕ್ತರು ಹಾಗೂ ಸಾರ್ವಜನಿಕರು ಸಾಕ್ಷಿಯಾದರು.
ಕೋಟೆ ಭೀಮೇಶ್ವರ ದೇವಸ್ಥಾನದಿಂದ ಹೊರಟ ಗಣಪತಿ ಮೆರವಣಿಗೆ ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಎಸ್.ಎನ್. ವೃತ್ತ, ಎಎ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ಜೈಲ್ ವೃತ್ತ, ವೀರ ಶಿವಮೂರ್ತಿ ವೃತ್ತ, ಮಹಾವೀರ ವೃತ್ತ, ಡಿವಿಎಸ್ ಸರ್ಕಲ್, ಬಿಹೆಚ್ ರಸ್ತೆ ಮೂಲಕ ಸಾಗಿತು.
ನಂತರ ಕೋಟೆ ಮಾರಿಕಾಂಬ ದೇವಸ್ಥಾನದ ರಸ್ತೆ ಮೂಲಕ ಸಾಗಿದ ರಾಜಬೀದಿ ಉತ್ಸವ ಮತ್ತೆ ಕೋಟೆ ಭೀಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ತುಂಗಾ ನದಿಯ ಭೀಮನ ಮಡುವಿನತ್ತ ತೆರಳಿತು. ಮರುದಿನ ಸೆಪ್ಟೆಂಬರ್ 26ರಂದು ಬೆಳಿಗ್ಗೆ ಸುಮಾರು 5.09ಕ್ಕೆ ಗಣಪತಿಯ ಜಲಸ್ಥಂಭನ ನೆರವೇರಿಸುವ ಮೂಲಕ 82ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ಉತ್ಸವಕ್ಕೆ ತೆರೆ ಎಳೆಯಲಾಯಿತು.
ಕಣ್ತುಂಬಿಕೊಂಡ ಭಕ್ತರು
ರಾಜಬೀದಿ ಉತ್ಸವದ ಸಂದರ್ಭದಲ್ಲಿ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಸೇರಿದ್ದರು. ಮೆರವಣಿಗೆಯುದ್ದಕ್ಕೂ ಗಣಪತಿಯ ದರ್ಶನ ಪಡೆದ ಭಕ್ತರು, ಅಂತಿಮವಾಗಿ ಭೀಮನ ಮಡುವು ಸೇರಿದ ಗಣಪತಿ ಮೂರ್ತಿಯನ್ನ ಕಣ್ತುಂಬಿಕೊಂಡರು.
ಗಣಪತಿಯ ವಿಸರ್ಜನೆಯ ವೇಳೆ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಸೇರಿದಂತೆ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು. ಮುಂಜಾನೆ ವೇಳೆಯಲ್ಲಿಯೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಣಪತಿಯನ್ನು ವಿಸರ್ಜಿಸಲಾಯಿತು.
ಸೆಪ್ಟೆಂಬರ್ 25ರಂದು ಬೆಳಿಗ್ಗೆ ಆರಂಭಗೊಂಡ ರಾಜಬೀದಿ ಉತ್ಸವವು ಸುಮಾರು 18 ಗಂಟೆಗಳ ಕಾಲ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಸೆಪ್ಟೆಂಬರ್ 26ರ ಬೆಳಗಿನ ಜಾವ 5-09 ಕ್ಕೆ ಭೀಮನ ಮಡುವಿನಲ್ಲಿ ಗಣಪತಿಯನ್ನ ವಿಲೀನಗೊಳಿಸಲಾಯಿತು.
ಇದರೊಂದಿಗೆ ಶಿವಮೊಗ್ಗ ನಗರದ 82ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ಉತ್ಸವದ ಪ್ರಮುಖ ರಾಜಬೀದಿ ಉತ್ಸವ ಹಾಗೂ ವಿಸರ್ಜನಾ ಕಾರ್ಯಕ್ರಮ ಪೂರ್ಣಗೊಂಡಿದೆ.
