ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ: ಮೆರವಣಿಗೆಯಲ್ಲಿ ಮೊಳಗಿದ ಗಣಪತಿ ಬಪ್ಪ ಮೋರೆಯಾ ಘೋಷಣೆ- Hindu Mahasabha Ganapati installation at Bhimeshwara Temple: Ganapati Bappa Moreya slogan rang out during the procession

SUDDILIVE || SHIVAMOGGA

ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ: ಮೆರವಣಿಗೆಯಲ್ಲಿ ಮೊಳಗಿದ ಗಣಪತಿ ಬಪ್ಪ ಮೋರೆಯಾ ಘೋಷಣೆ- Hindu Mahasabha Ganapati installation at Bhimeshwara Temple: Ganapati Bappa Moreya slogan rang out during the procession   

ಶಿವಮೊಗ್ಗ: ನಗರದ ಕೋಟೆ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ನಡೆಯುವ ಐತಿಹಾಸಿಕ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಸೋಮವಾರ (ಸೆ.14) ಮಧ್ಯಾಹ್ನ 12.30ಕ್ಕೆ ನೆರವೇರಿತು.

ಇದಕ್ಕೂ ಮುನ್ನ ನಗರದ ಕುಂಬಾರ ನಂಜುಡಪ್ಪ ಅವರ ಮನೆಯಲ್ಲಿ ಬೆಳಿಗ್ಗೆ 11.20ರ ಸುಮಾರಿಗೆ ವಿಶೇಷ ಪೂಜೆ ನೆರವೇರಿಸಿ ಗಣಪತಿ ಮೂರ್ತಿಯನ್ನು ಮೆರವಣಿಗೆಯ ಮೂಲಕ ಭೀಮೇಶ್ವರ ದೇವಸ್ಥಾನದತ್ತ ಕರೆತರಲಾಯಿತು. ರಾಮಣ್ಣ ಶ್ರೇಷ್ಠಿ ಪಾರ್ಕ್ ಮೂಲಕ ಕೋಟೆ ಮಾರಿಕಾಂಬ ದೇವಸ್ಥಾನದ ರಸ್ತೆಯಾಗಿ ಸಾಗಿದ ಮೆರವಣಿಗೆಯಲ್ಲಿ ಭಕ್ತರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಮೆರವಣಿಗೆಯುದ್ದಕ್ಕೂ ಮಂಗಳವಾದ್ಯಗಳ ಸದ್ದು ಮೊಳಗಿದ್ದು, “ಗಣಪತಿ ಬಪ್ಪ ಮೋರೆಯಾ”, “ಭಾರತ್ ಮಾತಾಕಿ ಜೈ” ಸೇರಿದಂತೆ ವಿವಿಧ ಘೋಷಣೆಗಳು ಕೇಳಿಬಂದವು. ವಿಶೇಷವಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಮೆರವಣಿಗೆಯಲ್ಲಿ ಭಾಗವಹಿಸಿ ಗಣಪತಿ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದು ಗಮನ ಸೆಳೆಯಿತು.

Bhimeshwara, temple

ವರ್ಷಗಳಿಂದ ನಡೆದು ಬಂದ ಸಂಪ್ರದಾಯ

ಹಿಂದೂ ಮಹಾಮಂಡಳಿಯ ಅಧ್ಯಕ್ಷ ಶರಾಫ್ ಶ್ರೀಧರ್ ರಾವ್ ಮಾತನಾಡಿ, ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಾಗೂ ಪ್ರತಿಷ್ಠಾಪನೆಯ ಹಿಂದೆ ಹಲವು ವರ್ಷಗಳ ಹೋರಾಟ ಮತ್ತು ಏಳುಬೀಳುಗಳ ಇತಿಹಾಸವಿದೆ ಎಂದು ಸ್ಮರಿಸಿದರು.

ಹಿಂದೆ ಗಣಪತಿ ಮೆರವಣಿಗೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿರಲಿಲ್ಲ. ಮಹಿಳೆಯರ ಭಾಗವಹಿಸುವಿಕೆಯೂ ಕಡಿಮೆಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುತ್ತಿದ್ದಾರೆ. ಯಾರನ್ನೂ ಒತ್ತಾಯಪೂರ್ವಕವಾಗಿ ಕರೆತರುವ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದರು.

ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮ ಇನ್ನಷ್ಟು ಶಾಂತಿಯುತವಾಗಿ ನಡೆಯಲು ಸಾಧ್ಯವಾಗುತ್ತಿದೆ. ಮಹಿಳಾ ಶಕ್ತಿ ಹೆಚ್ಚಾದಷ್ಟು ಕಾರ್ಯಕ್ರಮಗಳು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆಯುತ್ತವೆ ಎಂಬುದು ತಮ್ಮ ನಂಬಿಕೆ ಎಂದು ಶ್ರೀಧರ್ ರಾವ್ ಹೇಳಿದರು.

ಶರಾಫ್ ಶ್ರೀಧರ್, ಹಿಂದೂ ಮಹಾಸಭಾ ಗಣಪತಿ ಮಂಡಳಿಯ ಅಧ್ಯಕ್ಷರು

ಹಿಂದಿನ ದಿನಗಳ ಸವಾಲುಗಳ ನೆನಪು

ಹಿಂದಿನ ದಿನಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಹಾಗೂ ಮೆರವಣಿಗೆ ನಡೆಸಲು ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗಿತ್ತು ಎಂದು ಅವರು ನೆನಪಿಸಿಕೊಂಡರು.

ಗಣಪತಿ ಮೂರ್ತಿಯನ್ನು ತಯಾರಿಸುವ ಕುಂಬಾರರ ಮನೆಯಿಂದ ಹೊರಗೆ ತರಲು ಕೂಡ ತೊಂದರೆ ಎದುರಾದ ಸಂದರ್ಭಗಳಿದ್ದವು. ಆ ಸಂದರ್ಭದಲ್ಲಿ ಸಮಿತಿಯವರು ನಿರಂತರವಾಗಿ ಪ್ರಯತ್ನಿಸಿ ಗಣಪತಿ ಪ್ರತಿಷ್ಠಾಪನೆಗೆ ವ್ಯವಸ್ಥೆ ಮಾಡಿದ್ದರು ಎಂದು ಅವರು ವಿವರಿಸಿದರು.

ಒಂದು ಹಂತದಲ್ಲಿ ದೇವಸ್ಥಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ದೊರೆಯದ ಕಾರಣ ಪರ್ಯಾಯ ಸ್ಥಳದಲ್ಲಿ ಪ್ರತಿಷ್ಠಾಪನೆ ನಡೆಸಬೇಕಾಯಿತು. ನಂತರದ ವರ್ಷಗಳಲ್ಲಿ ಕೋಟೆ ಪೊಲೀಸ್ ಠಾಣೆ ಎದುರುಗಡೆಯೂ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಬಳಿಕ ದೇವಸ್ಥಾನದಲ್ಲಿಯೇ ಪ್ರತಿಷ್ಠಾಪನೆ ಮಾಡುವ ವ್ಯವಸ್ಥೆ ಮುಂದುವರಿಯಿತು ಎಂದು ಅವರು ಹೇಳಿದರು.

ಮೆರವಣಿಗೆ ನಡೆಸುವ ಸಂದರ್ಭದಲ್ಲೂ ವಿವಿಧ ಕಡೆಗಳಲ್ಲಿ ಪೊಲೀಸ್ ವಾಹನಗಳನ್ನು ನಿಲ್ಲಿಸಿ ಮೆರವಣಿಗೆಗೆ ಅಡ್ಡಿಪಡಿಸಿದ ಘಟನೆಗಳನ್ನು ಶ್ರೀಧರ್ ರಾವ್ ಸ್ಮರಿಸಿದರು. ಹಲವು ಕಾನೂನು ಹೋರಾಟಗಳು ಹಾಗೂ ಮಾತುಕತೆಗಳ ಬಳಿಕ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

77ನೇ ವಯಸ್ಸಿನಲ್ಲೂ ಗಣಪತಿ ಸೇವೆಯಲ್ಲಿ

ತಮ್ಮ ಬಾಲ್ಯದ ದಿನಗಳಿಂದಲೇ ಹಿಂದೂ ಮಹಾಸಭಾ ಗಣಪತಿಯೊಂದಿಗೆ ತಮ್ಮ ನಂಟು ಇದೆ ಎಂದು ಶ್ರೀಧರ್ ರಾವ್ ಹೇಳಿದರು.

“ನನ್ನ ದೊಡ್ಡಪ್ಪ ಜಸ್ಟಿಸ್ ಮಂಜುನಾಥ ರಾವ್ ಅವರು ನನ್ನನ್ನು ಚಿಕ್ಕವನಿದ್ದಾಗ ಗಣಪತಿ ಮೆರವಣಿಗೆ ನೋಡಲು ಕರೆದುಕೊಂಡು ಬರುತ್ತಿದ್ದರು. ಐದನೇ ವರ್ಷದಿಂದಲೇ ನಾನು ಈ ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ. ಇದೀಗ ನನಗೆ 77 ವರ್ಷ. ಇಷ್ಟು ವರ್ಷಗಳಾದರೂ ಗಣಪತಿ ಸೇವೆಯಲ್ಲಿ ಮುಂದುವರಿಯುತ್ತಿರುವುದು ಸಂತೋಷದ ವಿಚಾರ” ಎಂದು ಅವರು ಹೇಳಿದರು.

ಗಣಪತಿ ಉತ್ಸವದ ಸಂದರ್ಭದಲ್ಲಿ ಪ್ರತಿದಿನ ಹೋಮ-ಹವನ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವಿಸರ್ಜನೆಗೆ ಮುನ್ನ ಹಿಂದೂ ಸಮಾಜಕ್ಕಾಗಿ ಪ್ರಾಣತ್ಯಾಗ ಮಾಡಿದವರ ಸ್ಮರಣೆ ಹಾಗೂ ವಿವಿಧ ಸೇವೆ ಸಲ್ಲಿಸಿದವರನ್ನು ಸ್ಮರಿಸುವ ಕಾರ್ಯಕ್ರಮವೂ ನಡೆಯಲಿದೆ ಎಂದು ಅವರು ತಿಳಿಸಿದರು.

ಸಾರ್ವಜನಿಕರು, ಸಂಘ ಸಂಸ್ಥೆಗಳಿಗೆ ಅಭಿನಂದನೆ

ಗಣಪತಿ ಮೆರವಣಿಗೆ ಹಾಗೂ ಉತ್ಸವ ಯಶಸ್ವಿಯಾಗಲು ಮಾಧ್ಯಮಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಶ್ರೀಧರ್ ರಾವ್ ಹೇಳಿದರು.

ಪತ್ರಿಕೆ, ಟಿವಿ, ಯೂಟ್ಯೂಬ್ ಸೇರಿದಂತೆ ವಿವಿಧ ಮಾಧ್ಯಮಗಳು ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ನೀಡುತ್ತಿವೆ. ಸರ್ಕಾರ, ಪೊಲೀಸ್ ಇಲಾಖೆ, ಆಡಳಿತಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು ನೀರು, ಮಜ್ಜಿಗೆ, ಪಾನಕ ಹಾಗೂ ಲಘು ಉಪಾಹಾರ ವಿತರಿಸುವ ಮೂಲಕ ಭಕ್ತರಿಗೆ ನೆರವಾಗುತ್ತಿದ್ದಾರೆ. ಇದೇ ರೀತಿಯ ಸಹಕಾರವನ್ನು ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದರು.

11 ದಿನಗಳ ಕಾಲ ವಿವಿಧ ಕಾರ್ಯಕ್ರಮ

ಇದೇ ವೇಳೆ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಹಿಂದೂ ಮಹಾಸಭಾ ಗಣಪತಿಗೆ 11 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸೆಪ್ಟೆಂಬರ್ 25ರಂದು ಅನಂತ ಚತುರ್ದಶಿಯಂದು 11ನೇ ದಿನದ ರಾಜಬೀದಿ ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಶಿವಮೊಗ್ಗ ನಗರವೇ ಕೇಸರಿಮಯವಾಗಲಿದೆ ಎಂದು ಅವರು ಹೇಳಿದರು.

ಗಣಪತಿ ಉತ್ಸವವು ಶಾಂತಿ, ಸೌಹಾರ್ದತೆ ಹಾಗೂ ಭಕ್ತಿಭಾವದಿಂದ ನಡೆಯಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಭೀಮೇಶ್ವರ ದೇವಸ್ಥಾನದಲ್ಲಿ ಗಣಪತಿ ಪ್ರತಿಷ್ಠಾಪನೆಯೊಂದಿಗೆ ಶಿವಮೊಗ್ಗದ ಪ್ರಮುಖ ಗಣೇಶೋತ್ಸವಗಳಲ್ಲಿ ಒಂದಾಗಿರುವ ಹಿಂದೂ ಮಹಾಸಭಾ ಗಣಪತಿ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ಮುಂದಿನ 11 ದಿನಗಳ ಕಾಲ ನಗರದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Hindu Mahasabha Ganapati installation at Bhimeshwara Temple: Ganapati Bappa Moreya slogan rang out during the procession

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close