SUDDILIVE || SHIVAMOGGA
ಆಹಾರ ಸುರಕ್ಷತಾ ನಿಯಮ ಪಾಲನೆಗೆ 15 ದಿನಗಳ ಗಡುವು: ಫುಡ್ ಕೋರ್ಟ್‌ಗಳಲ್ಲಿ ಎಸಿ ಡಾ.ಮೈತ್ರಿ ಸಂಚಲನ-15-day deadline to comply with food safety norms: Dr. Maitri conducts surprise inspections at food courts.
ಶಿವಮೊಗ್ಗ: ನಗರದ ಫುಡ್ ಕೋರ್ಟ್‌ಗಳಲ್ಲಿ ಆಹಾರ ಸುರಕ್ಷತಾ ಕ್ರಮಗಳ ಪಾಲನೆ ಕುರಿತು ಎಸಿ ಡಾ.ಮೈತ್ರಿ ತಪಾಸಣೆ ನಡೆಸಿ ಸಂಚಲನ ಮೂಡಿಸಿದ್ದಾರೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಮೊದಲು ಎಚ್ಚರಿಕೆ ನೀಡಿ, ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ.
ಫುಡ್ ಕೋರ್ಟ್‌ನಲ್ಲಿರುವ ವೆಜಿಟೇರಿಯನ್ ಹಾಗೂ ನಾನ್‌ವೆಜ್ ವಿಭಾಗಗಳಲ್ಲಿನ ಅಂಗಡಿಗಳಿಗೆ ಎಸಿ ಡಾ.ಮೈತ್ರಿ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಆಹಾರ ತಯಾರಿಕೆ ಮತ್ತು ಮಾರಾಟದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಸರ್ಕಾರ ಹಾಗೂ ಆಹಾರ ಸುರಕ್ಷತಾ ಇಲಾಖೆಯಿಂದ ನೀಡಲಾಗಿರುವ ಮಾರ್ಗಸೂಚಿಗಳನ್ನು ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಮುಖ್ಯವಾಗಿ ಪರಿಶೀಲಿಸಿದರು. ಮೊನ್ನೆ ಭಾನುವಾರ ಹೋಟೆಲ್, ಬೇಕರಿ ಹಾಗೂ ನಿರಾಶ್ರಿತರ ವಸತಿ ನಿಲಯಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದ ಉಪವಿಭಾಗಾಧಿಕಾರಿಗಳು ಇಂದು ದಿಡೀರ್ ಫುಡ್ ಕೋರ್ಟ್ ಗೆ ಭೇಟಿ ನೀಡಿ ತಪಾಸಣೆ ನಡೆಸಿರುವುದು ವ್ಯಾಪರಸ್ಥರಲ್ಲಿ ಸಂಚಲನ ಮೂಡಿಸಿದೆ.
ನೋಟಿಸ್ ನೀಡಿಲ್ಲ, ಮೊದಲು ಎಚ್ಚರಿಕೆ
ಈ ಕುರಿತು ಸುದ್ದಿಲೈವ್ ಗೆ ಮಾಹಿತಿ ನೀಡಿರುವ ಎಸಿ ಡಾ.ಮೈತ್ರಿ ಅವರು, ತಪಾಸಣೆ ವೇಳೆ ನಿಯಮಗಳ ಪಾಲನೆಯಲ್ಲಿ ಕೆಲವು ಕೊರತೆಗಳು ಕಂಡುಬಂದಿದ್ದರೂ, ತಕ್ಷಣ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂಗಡಿ ಮಾಲೀಕರಿಗೆ ಸ್ಥಳದಲ್ಲೇ ಅಗತ್ಯ ಸೂಚನೆ ಹಾಗೂ ಎಚ್ಚರಿಕೆ ನೀಡಲಾಗಿದೆ.
15 ದಿನಗಳೊಳಗೆ ಕಂಡುಬಂದಿರುವ ಕೊರತೆಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ನಿಗದಿತ ಅವಧಿಯೊಳಗೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ಹಂತದಲ್ಲಿ ಶಿಸ್ತುಕ್ರಮಕ್ಕೆ ಆದೇಶಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೈಜೀನ್ ಕೊರತೆ ಪತ್ತೆ
ತಪಾಸಣೆ ವೇಳೆ ಕೆಲವು ಅಂಗಡಿಗಳಲ್ಲಿ ಸ್ವಚ್ಛತೆ ಮತ್ತು ಹೈಜೀನ್ ನಿರ್ವಹಣೆಯಲ್ಲಿ ಕೊರತೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಮಹಾನಗರ ಪಾಲಿಕೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಆಹಾರ ತಯಾರಿಕೆ ಮತ್ತು ಮಾರಾಟ ಮಾಡುವ ಸಿಬ್ಬಂದಿ ಕಡ್ಡಾಯವಾಗಿ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಅಗತ್ಯವಿರುವ ಸಂದರ್ಭಗಳಲ್ಲಿ ಕ್ಯಾಪ್, ಮಾಸ್ಕ್ ಮತ್ತು ಗ್ಲೌಸ್ ಧರಿಸಬೇಕು. ಆಹಾರ ಸುರಕ್ಷತಾ ಇಲಾಖೆಯ ಮಾರ್ಗಸೂಚಿಗಳಂತೆ ಅಡುಗೆ ಹಾಗೂ ಆಹಾರ ನಿರ್ವಹಣೆ ನಡೆಯಬೇಕು ಎಂದು ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ ಎಂದರು.
ಆಹಾರ ಮಾದರಿಗಳ ಸಂಗ್ರಹ
ತಪಾಸಣೆಯ ಸಂದರ್ಭದಲ್ಲಿ ವಿವಿಧ ಆಹಾರ ಪದಾರ್ಥಗಳ ಸ್ಯಾಂಪಲ್‌ಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಸಂಗ್ರಹಿಸಿರುವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಪರೀಕ್ಷಾ ವರದಿ ಆಧರಿಸಿ ಮುಂದಿನ ಕ್ರಮದ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
20ಕ್ಕೂ ಹೆಚ್ಚು ಅಂಗಡಿಗಳ ಪರಿಶೀಲನೆ
ಫುಡ್ ಕೋರ್ಟ್‌ನ ವೆಜಿಟೇರಿಯನ್ ವಿಭಾಗದಲ್ಲಿ ಸುಮಾರು 12ರಿಂದ 15 ಅಂಗಡಿಗಳು ಇದ್ದವು. ಈ ಪೈಕಿ ಕೆಲವು ಅಂಗಡಿಗಳು ತಪಾಸಣೆ ನಡೆದ ಸಂದರ್ಭದಲ್ಲಿ ಅಂಗಡಿಗಳು ಓಪನ್ ಆಗಿರಲಿಲ್ಲ. ನಾನ್‌ವೆಜ್ ವಿಭಾಗದಲ್ಲಿ ಸುಮಾರು ಅಂಗಡಿಗಳು ಇದ್ದು, ಕೆಲವು ಅಂಗಡಿಗಳು ಬಂದ್ ಆಗಿದ್ದವು.
ಒಟ್ಟಾರೆ ಸುಮಾರು 20ರಿಂದ 22 ಅಂಗಡಿಗಳಿರುವ ಫುಡ್ ಕೋರ್ಟ್‌ನಲ್ಲಿ ವೆಜ್ ಮತ್ತು ನಾನ್‌ವೆಜ್ ಎರಡೂ ವಿಭಾಗಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
15 ದಿನಗಳ ಬಳಿಕ ಮತ್ತೆ ತಪಾಸಣೆ
ಅಂಗಡಿ ಮಾಲೀಕರಿಗೆ ನೀಡಿರುವ ಸೂಚನೆಗಳನ್ನು ಪಾಲಿಸಲಾಗಿದೆಯೇ, ಹೈಜೀನ್ ಕ್ರಮಗಳನ್ನು ಸರಿಪಡಿಸಲಾಗಿದೆಯೇ ಹಾಗೂ ಆಹಾರ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು 15 ದಿನಗಳ ಬಳಿಕ ಮತ್ತೊಮ್ಮೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ.
ಆ ಸಂದರ್ಭದಲ್ಲಿ ಸೂಚನೆಗಳನ್ನು ಪಾಲಿಸದಿರುವುದು ಕಂಡುಬಂದರೆ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ತಯಾರಿಕೆ ಮತ್ತು ಮಾರಾಟದಲ್ಲಿ ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಸೂಚಿಸಿರುವುದು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮಹತ್ವದ ಕ್ರಮವಾಗಿದೆ.
15-day deadline to comply with food safety norms: Dr. Maitri conducts surprise inspections at food courts.


