ಶಿವಮೊಗ್ಗದಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ: 20 ವಿಸರ್ಜನಾ ಸ್ಥಳ, 35 ವಾಟರ್ ಟ್ಯಾಂಕ್ ವ್ಯವಸ್ಥೆ-Preparations for Ganeshotsava in Shivamogga: 20 immersion sites and 35 water tanks arranged

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ: 20 ವಿಸರ್ಜನಾ ಸ್ಥಳ, 35 ವಾಟರ್ ಟ್ಯಾಂಕ್ ವ್ಯವಸ್ಥೆ-Preparations for Ganeshotsava in Shivamogga: 20 immersion sites and 35 water tanks arranged
Ganeshotsava, peacemeeting



ಶಿವಮೊಗ್ಗ: ಹಿಂದೂ ಸಂಘಟನಾ ಮಹಾಮಂಡಳಿಯ 82ನೇ ವರ್ಷದ ಗಣೇಶೋತ್ಸವದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭವನದಲ್ಲಿ ಮುನ್ನೆಚ್ಚರಿಕಾ ಶಾಂತಿ ಸಭೆ ನಡೆಯಿತು. ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ನಡೆಸುವ ಕುರಿತು ಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಚರ್ಚಿಸಿದರು.

ಹಿಂದೂ ಸಂಘಟನಾ ಮಹಾಮಂಡಳಿಯ ನಿರ್ದೇಶಕ ರಾಜು ಮಾತನಾಡಿ, ಸೆಪ್ಟೆಂಬರ್ 14ರ ಸೋಮವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸೆಪ್ಟೆಂಬರ್ 25ರ ಶುಕ್ರವಾರ ಅನಂತ ಚತುರ್ದಶಿಯಂದು ವಿಸರ್ಜನೆ ನಡೆಯಲಿದೆ ಎಂದು ತಿಳಿಸಿದರು.

ಇತ್ತೀಚೆಗೆ ಈದ್ ಮಿಲಾದ್ ಹಬ್ಬ ಶಾಂತಿಯುತವಾಗಿ ನಡೆದಂತೆ ಗಣೇಶೋತ್ಸವವೂ ಶಾಂತಿಯುತವಾಗಿ ನಡೆಯಬೇಕು. ಶಿವಮೊಗ್ಗದಲ್ಲಿ ಶಾಂತಿ ಕಾಪಾಡುವುದು ಕೇವಲ ಪೊಲೀಸ್ ಹಾಗೂ ಜಿಲ್ಲಾಡಳಿತದ ಹೊಣೆಗಾರಿಕೆಯಲ್ಲ. ಪ್ರತಿಯೊಬ್ಬ ಮುಖಂಡರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ರಸ್ತೆ, ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಮನವಿ

ಗಣೇಶೋತ್ಸವದ ಸಂದರ್ಭದಲ್ಲಿ ಮೆಸ್ಕಾಂ ವತಿಯಿಂದ ವಿದ್ಯುತ್ ಅಭಾವ ಅಥವಾ ಪವರ್ ಕಟ್ ಉಂಟಾಗುವ ಸಾಧ್ಯತೆ ಕುರಿತು ಮಾಹಿತಿ ನೀಡಲಾಗಿದೆ. ಹೀಗಾಗಿ ಹಬ್ಬದ ಆಚರಣೆಗೆ ತೊಂದರೆಯಾಗದಂತೆ ಪರ್ಯಾಯ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಗಣೇಶ ಮೂರ್ತಿಗಳ ವಿಸರ್ಜನೆ ಸಾಗುವ ಪ್ರಮುಖ ರಸ್ತೆಗಳಲ್ಲಿ, ವಿಶೇಷವಾಗಿ ಕೋಟೆ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕು. ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು. ರಸ್ತೆಗೆ ಅಡ್ಡಿಯಾಗಿರುವ ಮರದ ಕೊಂಬೆಗಳನ್ನು ಅಗತ್ಯವಿರುವಷ್ಟು ಮಾತ್ರ ಟ್ರಿಮ್ ಮಾಡಬೇಕು, ಮರಗಳನ್ನು ಕಡಿಯಬಾರದು ಎಂದು ಆಗ್ರಹಿಸಿದರು.

ಪ್ರತಿವರ್ಷ ಮಹಾನಗರ ಪಾಲಿಕೆ ವತಿಯಿಂದ ದೀಪಾಲಂಕಾರ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಈಜುಗಾರರ ವ್ಯವಸ್ಥೆ ಸೇರಿದಂತೆ ನೀಡುತ್ತಿರುವ ಸಹಕಾರಕ್ಕೆ ಅವರು ಧನ್ಯವಾದ ಸಲ್ಲಿಸಿದರು.

ಗಣೇಶೋತ್ಸವದ ಸಂದರ್ಭದಲ್ಲಷ್ಟೇ ಫ್ಲೆಕ್ಸಿ, ಬ್ಯಾನರ್‌ಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವೂ ಸಭೆಯಲ್ಲಿ ಕೇಳಿಬಂತು. ರಾಜಕೀಯ ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ಒಂದೇ ರೀತಿಯ ನಿಯಮ ಅನ್ವಯವಾಗುವಂತೆ ಸೂಕ್ತ ಸಿಸ್ಟಂ ಅಥವಾ ಪಾಲಿಸಿ ರೂಪಿಸಬೇಕು ಎಂದು ರಾಜು ಮನವಿ ಮಾಡಿದರು.

20 ವಿಸರ್ಜನಾ ಸ್ಥಳ, 35 ವಾಟರ್ ಟ್ಯಾಂಕ್

ಮಾಯಣ್ಣ ಗೌಡ ಮಾತನಾಡಿ, ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 20 ಸ್ಥಳಗಳನ್ನು ಗುರುತಿಸಲಾಗಿದೆ. ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 35 ವಾಟರ್ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸ್ವಚ್ಛತೆ ಹಾಗೂ ಮೂಲಸೌಕರ್ಯ ನಿರ್ವಹಣೆಗೆ ವಿಶೇಷ ತಂಡ ರಚಿಸಲಾಗಿದ್ದು, ಗಣೇಶೋತ್ಸವದ ಅನುಮತಿಗಾಗಿ ಏಕಗವಾಕ್ಷಿ ಕೇಂದ್ರ ಹಾಗೂ ಮಾಹಿತಿ ಕೇಂದ್ರ ಸ್ಥಾಪಿಸಲಾಗುವುದು. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಬಳಿಕ 10ರಿಂದ 15 ನಿಮಿಷಗಳಲ್ಲಿ ಅನುಮತಿ ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು. ಆಡಳಿತವನ್ನು ಜನಸ್ನೇಹಿಯಾಗಿ ನಡೆಸಲಾಗುವುದು ಎಂದು ಹೇಳಿದರು.

ಡಿಜೆ ಬದಲು ಸ್ಥಳೀಯ ಕಲಾ ತಂಡಗಳಿಗೆ ಅವಕಾಶ: ಎಸ್‌ಪಿ

ಎಸ್‌ಪಿ ನಿಖಿಲ್.ಬಿ ಮಾತನಾಡಿ, ಈ ಹಿಂದೆ ಗಣೇಶೋತ್ಸವವನ್ನು ಪ್ರೇಕ್ಷಕರಾಗಿ ಬಂದು ನೋಡುತ್ತಿದ್ದೆ. ಇದೀಗ ಪೊಲೀಸ್ ಇಲಾಖೆಯ ಮೂಲಕ ಗಣೇಶೋತ್ಸವದ ವ್ಯವಸ್ಥೆ ಮಾಡುವ ಅವಕಾಶ ದೊರೆತಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿ ಹಬ್ಬವನ್ನು ಸುಗಮವಾಗಿ ನಡೆಸಲಾಗುವುದು. ಗಣೇಶೋತ್ಸವದ ಸಂದರ್ಭದಲ್ಲಿ ಎಲ್ಲ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಡಿಜೆ ಬದಲಿಗೆ ಸ್ಥಳೀಯ ಕಲಾ ತಂಡಗಳಿಗೆ ಅವಕಾಶ ನೀಡಬೇಕು. ಗಣೇಶೋತ್ಸವ ಸಮಿತಿಗಳು ಸಮಾಜಮುಖಿ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಯಾವುದೇ ಸಣ್ಣ ಘಟನೆ ನಡೆದರೂ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.

ನಗರದಲ್ಲಿ ಈಗಾಗಲೇ ಸುಮಾರು 500 ಸಿಸಿ ಕ್ಯಾಮೆರಾಗಳಿದ್ದು, ಮತ್ತಷ್ಟು 150 ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದರು.

ಲೋಡ್‌ಶೆಡ್ಡಿಂಗ್ ಮಾಡದಂತೆ ಶಾಸಕ ಚೆನ್ನಬಸಪ್ಪ ಒತ್ತಾಯ

ಶಾಸಕ ಎಸ್.ಎನ್. ಚೆನ್ನಬಸಪ್ಪ ಮಾತನಾಡಿ, ಗಣೇಶೋತ್ಸವದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಮುನ್ನೆಚ್ಚರಿಕಾ ಶಾಂತಿ ಸಭೆ ಉತ್ತಮ ಬೆಳವಣಿಗೆ ಎಂದರು. ಜಿಲ್ಲಾಡಳಿತದ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹಿಂದಿನ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಭದ್ರತಾ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.

ಗಣೇಶೋತ್ಸವವು ದೇಶ ಕಟ್ಟುವ ಉದ್ದೇಶದಿಂದ ರೂಪುಗೊಂಡ ಆಚರಣೆಯಾಗಿದ್ದು, ಯಾರನ್ನೂ ಗುರಿಯಾಗಿಸಿಕೊಂಡ ಆಚರಣೆಯಲ್ಲ. ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಅನಗತ್ಯ ಹಣ ವಸೂಲಿ ಮಾಡಬಾರದು. ಸಾಧ್ಯವಾದಷ್ಟು ಶುಲ್ಕ ಕಡಿಮೆ ಮಾಡಬೇಕು ಎಂದು ಹೇಳಿದರು.

ಗಣೇಶೋತ್ಸವದ ಸಂದರ್ಭದಲ್ಲಿ ಲೋಡ್‌ಶೆಡ್ಡಿಂಗ್ ಮಾಡಬಾರದು. ಶಿವಮೊಗ್ಗ ನಗರ ಕತ್ತಲೆಯಾಗದಂತೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಲೈಸೆನ್ಸ್ ಪಡೆಯುವುದು ಅಗತ್ಯವಾದರೂ ಅದಕ್ಕಾಗಿ ಹೆಚ್ಚಿನ ಹಣ ಕಟ್ಟಿಸಿಕೊಳ್ಳಬಾರದು. ಹಬ್ಬದ ಸಂದರ್ಭದಲ್ಲಿ ಕಟ್ಟುಪಾಡುಗಳು ಇರಬೇಕು, ಆದರೆ ಅವು ಯಾವಾಗ ಮತ್ತು ಹೇಗೆ ಅನ್ವಯಿಸಬೇಕು ಎಂಬುದನ್ನು ಚಿಂತಿಸಿ ನಿರ್ಧರಿಸಬೇಕು ಎಂದರು.

ಪ್ರತಿ ವಿಚಾರಕ್ಕೂ ಪ್ರತ್ಯೇಕ ಪರವಾನಗಿ ಪಡೆಯುವ ಬದಲು ಮಾಹಿತಿ ಪತ್ರ ಸಲ್ಲಿಸುವ ವ್ಯವಸ್ಥೆ ಜಾರಿಗೆ ತರಬೇಕು. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಇಲಾಖೆಗಳು ಹಾಗೂ ಗಣೇಶೋತ್ಸವ ಸಂಘಟನೆಗಳು ಪರಸ್ಪರ ಸಹಕಾರದಿಂದ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕ ಚೆನ್ನಬಸಪ್ಪ ಹೇಳಿದರು.

ನ್ಯೂಮಂಡ್ಲಿ, ಗೋಪಾಲ, ವಿನೋಬನಗರದಲ್ಲಿ ಮಾಹಿತಿ ಕೇಂದ್ರ

ಜಿಲ್ಲಾಧಿಕಾರಿ ಮಾತನಾಡಿ, ಸಭೆಯಲ್ಲಿ ಪ್ರಸ್ತಾಪಿಸಲಾದ ಆಡಳಿತ ವ್ಯವಸ್ಥೆಯ ನ್ಯೂನತೆಗಳನ್ನು ಮುಕ್ತವಾಗಿ ಸ್ವೀಕರಿಸಿ ಅವುಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಗಣೇಶೋತ್ಸವದ ಅನುಮತಿ ಪ್ರಕ್ರಿಯೆಯನ್ನು ಸರಳಗೊಳಿಸಲು ಸಿಂಗಲ್ ವಿಂಡೋ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ನ್ಯೂಮಂಡ್ಲಿ, ಗೋಪಾಲ ಹಾಗೂ ವಿನೋಬನಗರದಲ್ಲಿ ಗಣೇಶೋತ್ಸವ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ. ಗಣೇಶೋತ್ಸವ ಸಮಿತಿಗಳು ಈ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯುತ್ ಸಂಪರ್ಕ ಪಡೆಯಲು ಮೆಸ್ಕಾಂನಿಂದ ಅಗತ್ಯ ಪರವಾನಗಿ ಪಡೆಯುವುದು ಕಡ್ಡಾಯ. ಧಾರ್ಮಿಕ ಭಾವನೆಗಳ ಜತೆಗೆ ಪರಿಸರ ಸಂರಕ್ಷಣೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಪ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸುವಾಗ ನಿಯಮಗಳನ್ನು ಪಾಲಿಸುವುದರ ಜೊತೆಗೆ ಪರಿಸರದ ಬಗ್ಗೆಯೂ ಜಾಗೃತಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಒಟ್ಟಾರೆ, ಗಣೇಶೋತ್ಸವದ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ, ಭದ್ರತೆ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದರ ಜೊತೆಗೆ ಅನುಮತಿ ಪ್ರಕ್ರಿಯೆಯನ್ನು ಸರಳಗೊಳಿಸುವುದು ಸಭೆಯ ಪ್ರಮುಖ ಚರ್ಚೆಯ ವಿಷಯವಾಗಿತ್ತು.

Preparations for Ganeshotsava in Shivamogga: 20 immersion sites and 35 water tanks arranged

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close