SUDDILIVE || SHIVAMOGGA
ಪೀಸ್ ಕಮಿಟಿ ಸಭೆಗೆ ನನ್ನನ್ನು ಯಾಕೆ ಕರೆದಿಲ್ಲ? ಡಿಸಿ ಸಾಹೇಬ್ರೇ, ಯಾವ ಲಿಸ್ಟ್‌ನಲ್ಲಿ ಇಟ್ಟಿದ್ದೀರಿ?: ಶಾಸಕ ಚೆನ್ನಬಸಪ್ಪ-"Why haven't I been invited to the peace committee meeting? DC Sir, on which list have you placed me?" — MLA Chennabasappa
ಶಿವಮೊಗ್ಗ: ಇತ್ತೀಚೆಗೆ ನಡೆದ ಈದ್ ಮಿಲಾದ್ ಹಬ್ಬದ ಪೀಸ್ ಕಮಿಟಿ ಸಭೆಗೆ ತಮ್ಮನ್ನು ಏಕೆ ಆಹ್ವಾನಿಸಲಿಲ್ಲ ಎಂಬ ಪ್ರಶ್ನೆಯನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಜಿಲ್ಲಾಡಳಿತದ ಶಾಂತಿ ಸಭೆಯಲ್ಲಿ ಹಾಸ್ಯಮಿಶ್ರಿತವಾಗಿ ಕೇಳುವ ಮೂಲಕ ಗಮನಸೆಳೆದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಗೌರಿ-ಗಣೇಶೋತ್ಸವ ಹಾಗೂ ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, “ಈದ್ ಮಿಲಾದ್ ಪೀಸ್ ಕಮಿಟಿ ಮೀಟಿಂಗ್ ಮಾಡಿದ್ದೀರಿ. ಆದರೆ ನನ್ನನ್ನು ಯಾಕೆ ಕರೆದಿಲ್ಲ ಎಂಬುದು ನನಗೆ ಇನ್ನೂ ಗೊತ್ತಾಗಿಲ್ಲ. ಇಲಾಖೆಯಲ್ಲಿ ನಮ್ಮನ್ನು ಯಾವ ಲಿಸ್ಟ್‌ನಲ್ಲಿ ಇಟ್ಟಿದ್ದೀರಿ ಅಂತ ಗೊತ್ತಿಲ್ಲ. ಅಲ್ಲವೇ ಡಿಸಿ ಸಾಹೇಬ್ರೇ?” ಎಂದು ನಗುತ್ತಲೇ ಪ್ರಶ್ನಿಸಿದರು.
ಇದಕ್ಕೆ ಸಭೆಯಲ್ಲಿದ್ದ ಕಾಂಗ್ರೆಸ್ ಮುಖಂಡರೊಬ್ಬರು, “ಚೆನ್ನಿ ಅವರು ಬದಲಾಗಿದ್ದಾರೆ” ಎಂದು ಹೇಳಿದ್ದು ಗಮನಸೆಳೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, “ಕೆಲವರಿಗೆ ಗೊತ್ತು, ಎಲ್ಲಿ ಕೀ ಕೊಡಬೇಕು ಅಂತ. ಅದಕ್ಕೇ ಜಿಲ್ಲಾಡಳಿತ ಇವತ್ತು ನನ್ನನ್ನ ಕರೆದಿದೆ” ಎಂದು ಹಾಸ್ಯಚಟಾಕಿ ಹಾರಿಸಿದರು. ಈ ವೇಳೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಭೆಯಲ್ಲಿದ್ದವರು ನಗುವ ಮೂಲಕ ವಾತಾವರಣವನ್ನು ಹಗುರಗೊಳಿಸಿದರು.
‘ಶಾಂತಿ ಸಮಿತಿಗೆ ಸೇರುವ ಮುನ್ನವೇ ಸಮಸ್ಯೆ ತಡೆಯಬೇಕು’
ಶಾಂತಿ ಸಭೆಯ ಉದ್ದೇಶ ಕೇವಲ ಗಲಾಟೆ ನಡೆದ ಬಳಿಕ ಸಭೆ ಸೇರುವುದಲ್ಲ, ಯಾವುದೇ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿರಬೇಕು ಎಂದು ಶಾಸಕ ಚನ್ನಬಸಪ್ಪ ಹೇಳಿದರು.
“ಶಾಂತಿ ಸಮಿತಿ ಸೇರುವುದಕ್ಕಿಂತ ಮುಂಚೆಯೇ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ನನ್ನ ಅವಶ್ಯಕತೆ. ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಪರಿಸ್ಥಿತಿಗೆ ಅನುಗುಣವಾಗಿ ಯಾವ ಸಂದರ್ಭದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಯೋಚಿಸುವ ವ್ಯವಸ್ಥೆ ರೂಪಿಸಬೇಕು” ಎಂದು ಸಲಹೆ ನೀಡಿದರು.
ಸಭೆಯೊಳಗೆ ಕುಳಿತಿರುವವರ ಮನಸ್ಥಿತಿ ಮತ್ತು ಹೊರಗಡೆ ಇರುವವರ ಮನಸ್ಥಿತಿ ವಿಭಿನ್ನವಾಗಿರುತ್ತದೆ. ಇದನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಠಾಣಾ ಮಟ್ಟದಲ್ಲಿ ಸಾರ್ವಜನಿಕರಿಗೆ ಅನಗತ್ಯ ಕಿರಿಕಿರಿ ಆಗದಂತೆ ನೋಡಿಕೊಂಡರೆ ಬಹುತೇಕ ಸಮಸ್ಯೆಗಳು ಉದ್ಭವಿಸುವುದೇ ಇಲ್ಲ ಎಂದು ಹೇಳಿದರು.
ಗಣೇಶೋತ್ಸವವನ್ನು ವೈಭವದಿಂದ ಆಚರಿಸೋಣ
ಶಿವಮೊಗ್ಗದಲ್ಲಿ ಕಳೆದ ಕೆಲವು ವರ್ಷಗಳಿಂದ ವಿವಿಧ ಧರ್ಮಗಳ ಹಬ್ಬಗಳು ಶಾಂತಿಯುತವಾಗಿ ನಡೆಯುತ್ತಿವೆ. ಇದೇ ವಾತಾವರಣ ಮುಂದುವರಿಯಬೇಕು. ಗಣೇಶೋತ್ಸವ ಕೂಡ ಅದ್ಧೂರಿಯಾಗಿ ಹಾಗೂ ಯಾವುದೇ ಗೊಂದಲವಿಲ್ಲದೆ ನಡೆಯಬೇಕು ಎಂದು ಶಾಸಕರು ಹೇಳಿದರು.
“ಹಿಂದೆ ಗಣಪತಿ ಉತ್ಸವಕ್ಕೆ ‘ಗಲಾಟೆ ಗಣಪತಿ’ ಎಂಬ ಹೆಸರು ಬಂದಿದ್ದ ಸಂದರ್ಭಗಳೂ ಇದ್ದವು. ಅಂತಹ ಪರಿಸ್ಥಿತಿ ಮತ್ತೆ ಬರಬಾರದು. ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶೋತ್ಸವ ಆರಂಭವಾದ ಉದ್ದೇಶವೇ ಜನರನ್ನು ಒಗ್ಗೂಡಿಸುವುದು. ಅದೇ ಆಶಯದಲ್ಲಿ ಇಂದಿನ ಉತ್ಸವಗಳು ನಡೆಯಬೇಕು” ಎಂದರು.
ಯಾವುದೇ ಧರ್ಮದ ಆಚರಣೆಗಳಿಗೂ ತಮ್ಮ ವಿರೋಧವಿಲ್ಲ. ಎಲ್ಲರೂ ತಮ್ಮ ಧಾರ್ಮಿಕ ಆಚರಣೆಗಳನ್ನು ಶಾಂತಿಯುತವಾಗಿ ನಡೆಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.
ಫ್ಲೆಕ್ಸ್ ಹಾಗೂ ಅನುಮತಿ ವಿಚಾರ ಪ್ರಸ್ತಾಪ
ಧಾರ್ಮಿಕ ಉತ್ಸವಗಳ ಸಂದರ್ಭದಲ್ಲಿ ಫ್ಲೆಕ್ಸ್ ಅಳವಡಿಸಲು ಸಂಬಂಧಿಸಿದ ನಿಯಮಗಳು ಹಾಗೂ ಶುಲ್ಕದ ವಿಚಾರವನ್ನೂ ಶಾಸಕ ಚನ್ನಬಸಪ್ಪ ಪ್ರಸ್ತಾಪಿಸಿದರು.
“ಫ್ಲೆಕ್ಸ್‌ಗೆ ನಿಯಮ ಇರಬಾರದು ಎಂದು ಹೇಳುತ್ತಿಲ್ಲ. ಆದರೆ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಅನುಮತಿಗಾಗಿ ಹೆಚ್ಚಿನ ಹಣ ವಸೂಲಿ ಮಾಡುವ ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕು. ₹100 ಅಥವಾ ₹150ರಷ್ಟು ಕನಿಷ್ಠ ಶುಲ್ಕವಿದ್ದರೆ ಜನರು ಅಧಿಕೃತವಾಗಿ ಅನುಮತಿ ಪಡೆಯುತ್ತಾರೆ. ₹2,000, ₹3,000, ₹8,000 ಹೀಗೆ ಶುಲ್ಕ ವಿಧಿಸಿದರೆ ಕೆಲವರು ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸುವ ಸಾಧ್ಯತೆ ಇದೆ” ಎಂದು ಹೇಳಿದರು.
ಧಾರ್ಮಿಕ ಕಾರ್ಯಕ್ರಮಗಳನ್ನು ವಾಣಿಜ್ಯೀಕರಣ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ನಿಯಮಗಳು ಇರಲಿ, ಆದರೆ ಅವು ಸಾರ್ವಜನಿಕರಿಗೆ ಹೊರೆಯಾಗದ ರೀತಿಯಲ್ಲಿ ಇರಬೇಕು ಎಂದು ಸಲಹೆ ನೀಡಿದರು.
ಗಣಪತಿ ಸ್ಥಾಪನೆಗೆ ‘ಪರ್ಮಿಷನ್’ ಎಂಬ ಪದ ಬೇಡ
ಗಣಪತಿ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂಬ ರೀತಿಯಲ್ಲಿ ಜನರಲ್ಲಿ ಭಾವನೆ ಮೂಡಿಸುವ ಬದಲು, ಕಾರ್ಯಕ್ರಮದ ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆ ರೂಪಿಸಬೇಕು ಎಂದು ಶಾಸಕ ಚನ್ನಬಸಪ್ಪ ಹೇಳಿದರು.
“ಗಣಪತಿ ಇಡಲು ಪರ್ಮಿಷನ್ ಕೇಳಬೇಕು ಎಂಬ ಹೆಡ್ಡಿಂಗ್‌ನ್ನೇ ತೆಗೆದುಹಾಕಬೇಕು. ಮೈಕ್ ಬಳಸುವುದಕ್ಕೆ ಲೈಸೆನ್ಸ್ ಬೇಕು, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಅನುಮತಿ ಬೇಕು. ಆದರೆ ಗಣಪತಿ ಇಡಲು ಪರ್ಮಿಷನ್ ಬೇಕು ಎಂಬ ಭಾವನೆ ಮೂಡಬಾರದು” ಎಂದು ಹೇಳಿದರು.
ಮಾಹಿತಿ ನೀಡುವುದು ಮತ್ತು ಅನುಮತಿ ಕೇಳುವುದು ಎರಡಕ್ಕೂ ಬಹಳ ವ್ಯತ್ಯಾಸವಿದೆ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣಪತಿ ಉತ್ಸವಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು, ಅಗತ್ಯ ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಠಾಣಾ ಮಟ್ಟದಲ್ಲಿ ಏಕಗವಾಕ್ಷಿ ವ್ಯವಸ್ಥೆಗೆ ಸಲಹೆ
ಶಿವಮೊಗ್ಗ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲೇ ಪೊಲೀಸ್, ಮೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಒಟ್ಟಾಗಿ ಕುಳಿತು ಉತ್ಸವ ಆಯೋಜಕರಿಗೆ ಅಗತ್ಯ ಅನುಮತಿ ಮತ್ತು ಮಾರ್ಗದರ್ಶನ ನೀಡುವ ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು ಎಂದು ಶಾಸಕ ಚನ್ನಬಸಪ್ಪ ಸಲಹೆ ನೀಡಿದರು.
“ನಗರದ ಎಲ್ಲಾ ಭಾಗಗಳೂ ಎಲ್ಲ ಅಧಿಕಾರಿಗಳಿಗೆ ಪರಿಚಯವಿರುವುದಿಲ್ಲ. ಆದರೆ ಠಾಣಾ ವ್ಯಾಪ್ತಿಯ ಅಧಿಕಾರಿಗಳಿಗೆ ತಮ್ಮ ಪ್ರದೇಶದ ಸಂಪೂರ್ಣ ಮಾಹಿತಿ ಇರುತ್ತದೆ. ಹಾಗಾಗಿ ಆಯೋಜಕರು ಒಂದೊಂದು ಕಚೇರಿಗೆ ಅಲೆದಾಡುವ ಬದಲು ಠಾಣಾ ಮಟ್ಟದಲ್ಲೇ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಒಟ್ಟಿಗೆ ಕುಳಿತು ಸಮಸ್ಯೆ ಬಗೆಹರಿಸುವ ವ್ಯವಸ್ಥೆ ಮಾಡಿದರೆ ಹೆಚ್ಚು ಸುಸೂತ್ರವಾಗಿ ನಡೆಯುತ್ತದೆ” ಎಂದರು.
ಮೆಸ್ಕಾಂಗೆ ವಿಶೇಷ ಮನವಿ
ಗಣೇಶೋತ್ಸವದ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡದಂತೆ ಮೆಸ್ಕಾಂ ಅಧಿಕಾರಿಗಳಿಗೆ ಶಾಸಕ ಚನ್ನಬಸಪ್ಪ ವಿಶೇಷ ಮನವಿ ಮಾಡಿದರು.
“ಗಣೇಶೋತ್ಸವದ ಅವಧಿಯಲ್ಲಿ ಕತ್ತಲೆ ಆಗುವಂತೆ ವಿದ್ಯುತ್ ಕಡಿತ ಮಾಡಬೇಡಿ. ಬಹುತೇಕ ಒಂದು ತಿಂಗಳ ಕಾಲ ವಿವಿಧ ಗಣಪತಿ ಉತ್ಸವಗಳು ನಡೆಯುತ್ತವೆ. ರಾಮಣ್ಣಶೆಟ್ಟಿ ಪಾರ್ಕ್ ಗಣಪತಿ, ಬಸವೇಶ್ವರನಗರ ಸೇರಿದಂತೆ ಹಲವು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಹಬ್ಬ ಮುಗಿಯುವವರೆಗೆ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ” ಎಂದು ಹೇಳಿದರು.
ವಿದ್ಯುತ್ ಸುರಕ್ಷತೆಯ ದೃಷ್ಟಿಯಿಂದ ನಿಯಮಗಳು ಅಗತ್ಯ ಎಂಬುದನ್ನು ಒಪ್ಪಿಕೊಂಡ ಅವರು, ಆದರೆ ಸಣ್ಣಪುಟ್ಟ ಉತ್ಸವ ಸಂಘಟನೆಗಳ ಮೇಲೆ ಅತಿಯಾದ ಶುಲ್ಕದ ಹೊರೆ ಹಾಕಬಾರದು ಎಂದು ತಿಳಿಸಿದರು.
‘ಹಣ ವಸೂಲಿ ಮಾಡುವ ಕಡೆ ಗಮನ ಹೋಗಬಾರದು’
“ಮೆಸ್ಕಾಂ ಮತ್ತು ಮಹಾನಗರ ಪಾಲಿಕೆ ಹಣ ವಸೂಲಿ ಮಾಡುವ ಕಡೆ ಹೆಚ್ಚು ಗಮನ ಕೊಡಬಾರದು. ಸ್ವಲ್ಪ ಮೃದು ಧೋರಣೆಯಿಂದ ಕೆಲಸ ಮಾಡಿ. ಸುರಕ್ಷತೆ ಹಾಗೂ ನಿಯಮಗಳ ವಿಚಾರದಲ್ಲಿ ರಾಜಿ ಬೇಡ, ಆದರೆ ಸಾರ್ವಜನಿಕರಿಗೆ ಕಿರಿಕಿರಿ ಆಗದಂತೆ ವ್ಯವಸ್ಥೆ ರೂಪಿಸಿ” ಎಂದು ಶಾಸಕರು ಮನವಿ ಮಾಡಿದರು.
ಶಿವಮೊಗ್ಗದಲ್ಲಿ ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. ಹೊರ ಜಿಲ್ಲೆಗಳಿಂದಲೂ ಜನರು ಗಣಪತಿ ಮೆರವಣಿಗೆ ವೀಕ್ಷಿಸಲು ಆಗಮಿಸುವಂತಹ ಪರಂಪರೆ ಇದೆ. ಹೀಗಾಗಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಈ ಬಾರಿಯ ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ವೈಭವಯುತವಾಗಿ ನಡೆಸಬೇಕು ಎಂದು ಶಾಸಕ ಚನ್ನಬಸಪ್ಪ ಕರೆ ನೀಡಿದರು.
“ನೀವು ನೆಮ್ಮದಿಯಾಗಿದ್ದರೆ ನಾವು ನೆಮ್ಮದಿಯಾಗಿರುತ್ತೇವೆ. ನಮ್ಮ ಬಳಿ ಜನರು ಸಮಸ್ಯೆ ತೆಗೆದುಕೊಂಡು ಬರಬೇಕೆಂಬುದು ನನ್ನ ಉದ್ದೇಶವಲ್ಲ. ಸಮಸ್ಯೆ ಉಂಟಾಗುವ ಮುನ್ನವೇ ಅಧಿಕಾರಿಗಳು ಪರಿಹರಿಸಿದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ” ಎಂದು ಅವರು ಹೇಳಿದರು.
