SUDDILIVE || SHIVAMOGGA
ಶಿವಮೊಗ್ಗ ಹಿಂದೂ ಸಂಘಟನಾ ಮಹಾಮಂಡಳಿಗೆ ಸರಾಫ್ ಶ್ರೀಧರ್ ರಾವ್ ನೂತನ ಅಧ್ಯಕ್ಷ- Saraf Sridhar Rao appointed as the new President of the Shivamogga Hindu Sanghatan.
ಶಿವಮೊಗ್ಗ, ಸೆ.10:ಹಿಂದೂ ಮಹಾಸಭಾದ ಅಂಗಸಂಸ್ಥೆಯಾದ ಶಿವಮೊಗ್ಗದ ಹಿಂದೂ ಸಂಘಟನಾ ಮಹಾಮಂಡಳಿಯ ನೂತನ ಅಧ್ಯಕ್ಷರಾಗಿ ಸರಾಫ್ ಶ್ರೀಧರ್ ರಾವ್ ಹಾಗೂ ಕಾರ್ಯದರ್ಶಿಯಾಗಿ ಎ.ಎನ್. ಸತ್ಯನಾರಾಯಣ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ನಗರದ ಕೋಟೆ ಶ್ರೀಭೀಮೇಶ್ವರ ದೇವಸ್ಥಾನದಲ್ಲಿ ಸೆ.9ರಂದು ಹಿಂದೂ ಸಂಘಟನಾ ಮಹಾಮಂಡಳಿಯ ಸಭೆ ನಡೆಯಿತು. ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಇತ್ತೀಚೆಗೆ ನಿಧನರಾದ ಸಂಸ್ಥೆಯ ಅಧ್ಯಕ್ಷ ಎಂ.ಕೆ. ಸುರೇಶ್ ಕುಮಾರ್ (ಚಾಲುಕ್ಯ ಸೂರಿ) ಅವರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸರಾಫ್ ಶ್ರೀಧರ್ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾಗಿ ಎ.ಎನ್. ಸತ್ಯನಾರಾಯಣ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು.
ಸಭೆಯಲ್ಲಿ ಸಂಸ್ಥೆಯ ಸಹಕಾರ್ಯದರ್ಶಿ ಎಸ್.ಎನ್. ಚನ್ನಬಸಪ್ಪ (ಚೆನ್ನಿ), ಖಜಾಂಚಿ ಎಸ್.ಎಂ. ದತ್ತಾತ್ರೇಯ ರಾವ್, ನಿರ್ದೇಶಕರಾದ ಸರಾಫ್ ಶ್ರೀಪಾದ ರಾವ್, ಹರಿಗೆ ಗೋಪಾಲಸ್ವಾಮಿ, ನಿರಂಜನ್, ರಾಜಶೇಖರ್ ಅಲಸೆ, ಚೇತನ್ ಎಸ್. ಹಾಗೂ ಚಂದ್ರಶೇಖರ್ (ರಾಜು) ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಮುಂಬರುವ 82ನೇ ಗಣೇಶೋತ್ಸವವನ್ನು ಅದ್ದೂರಿಯಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಗಣೇಶೋತ್ಸವದ ಅಂಗವಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳು, ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪದಾಧಿಕಾರಿಗಳು ಸಮಾಲೋಚನೆ ನಡೆಸಿದರು.
ಹಿಂದೂ ಸಂಘಟನಾ ಮಹಾಮಂಡಳಿಯ ಸಂಘಟನಾ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಂಘಟನೆಯ ಕಾರ್ಯಗಳನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಯಿತು.
ಸಂಸ್ಥೆಯ ಪರವಾಗಿ ಸಂಚಾಲಕ ಎಸ್.ಎಂ. ದತ್ತಾತ್ರೇಯ ರಾವ್ ಪ್ರಕಟಣೆ ನೀಡಿದ್ದು, ನೂತನ ಪದಾಧಿಕಾರಿಗಳಿಗೆ ಶುಭಾಶಯಗಳು ವ್ಯಕ್ತವಾಗಿವೆ.