ಶಿವಮೊಗ್ಗದಲ್ಲಿ ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ರಸ್ತೆ, ಚಾನೆಲ್ ಪಕ್ಕದ ಒತ್ತುವರಿ ತೆರವು -Major operation by traffic police in Shivamogga: Encroachments along roads and channels cleared.

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ರಸ್ತೆ, ಚಾನೆಲ್ ಪಕ್ಕದ ಒತ್ತುವರಿ ತೆರವು -Major operation by traffic police in Shivamogga: Encroachments along roads and channels cleared.
Traffic, police

Traffic, police


ಶಿವಮೊಗ್ಗ: ನಗರದ ಪ್ರಮುಖ ರಸ್ತೆ ಹಾಗೂ ಚಾನೆಲ್ ಪ್ರದೇಶಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದ್ದ ಕೊಟ್ಟಿಗೆಗಳು, ರ‍್ಯಾಂಪ್‌ಗಳು, ಕಬ್ಬಿಣದ ಸಾಮಗ್ರಿಗಳು ಸೇರಿದಂತೆ ವಿವಿಧ ರೀತಿಯ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸಂಚಾರ ಪೊಲೀಸರು ನಡೆಸಿದ್ದಾರೆ.

ನಗರದ ಲಕ್ಷ್ಮಿ ಟಾಕೀಸ್‌ನಿಂದ ಜೈಲ್ ಸರ್ಕಲ್‌ವರೆಗೆ ಜೈಲ್ ರಸ್ತೆಯಲ್ಲಿ ಹಾಗೂ ನಿರ್ಮಲ ನರ್ಸಿಂಗ್ ಹೋಮ್‌ ಬಳಿಯಿಂದ ಶರಾವತಿ ನಗರದ 60 ಅಡಿ ರಸ್ತೆಯವರೆಗಿನ ಶರಾವತಿ ಚಾನೆಲ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಟ್ರಾಫಿಕ್ ಸಿಪಿಐ ದೇವರಾಜ್ ತಿಳಿಸಿದ್ದಾರೆ.

ಶರಾವತಿ ಚಾನೆಲ್ ಪಕ್ಕದಲ್ಲಿ ಕೆಲವರು ಜಾನುವಾರುಗಳನ್ನು ಕಟ್ಟಲು ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡಿದ್ದರು. ಜಾನುವಾರುಗಳನ್ನು ಸಮರ್ಪಕವಾಗಿ ಕೊಟ್ಟಿಗೆಯಲ್ಲಿ ಕಟ್ಟದೆ ರಸ್ತೆಯಂಚಿನಲ್ಲಿ ಬಿಡುತ್ತಿದ್ದರಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಜಾನುವಾರುಗಳ ಓಡಾಟದಿಂದ ಸಗಣಿ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಬೀಳುತ್ತಿದ್ದು, ಶಾಲಾ ಮಕ್ಕಳ ಬಟ್ಟೆಗೂ ಅಂಟಿಕೊಳ್ಳುವಂತಹ ಪರಿಸ್ಥಿತಿ ಇತ್ತು ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಚಾನೆಲ್ ಪಕ್ಕದಲ್ಲಿದ್ದ ಕೊಟ್ಟಿಗೆಗಳನ್ನು ತೆರವುಗೊಳಿಸಿ, ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಹಲವು ವರ್ಷಗಳಿಂದ ಇದ್ದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಿಪಿಐ ದೇವರಾಜ್ ತಿಳಿಸಿದ್ದಾರೆ.

ಇದೇ ವೇಳೆ ಜೈಲ್ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದ ರ‍್ಯಾಂಪ್‌ಗಳು ಹಾಗೂ ಅಡ್ಡಿಪಡಿಸುತ್ತಿದ್ದ ಫಲಕಗಳನ್ನು ತೆರವುಗೊಳಿಸಲಾಗಿದೆ. ರಸ್ತೆ ಬದಿಯಲ್ಲಿದ್ದ ಕೆಇಬಿ ಹಾಗೂ ಬಿಎಸ್‌ಎನ್‌ಎಲ್ ಕಂಬಗಳಿಂದ ಉಂಟಾಗುತ್ತಿದ್ದ ಅಡಚಣೆಯನ್ನೂ ಸರಿಪಡಿಸಿ ಸಂಚಾರಕ್ಕೆ ಅನುಕೂಲವಾಗುವಂತೆ ಸ್ಥಳವನ್ನು ತೆರವುಗೊಳಿಸಲಾಗಿದೆ.

ಶರಾವತಿ ಚಾನೆಲ್‌ ಪಕ್ಕದಲ್ಲಿ ಗುಜರಿ ಸಾಮಗ್ರಿ, ಕಬ್ಬಿಣದ ವಸ್ತುಗಳನ್ನು ಇಟ್ಟುಕೊಂಡಿದ್ದ ಸ್ಥಳಗಳಲ್ಲಿಯೂ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಕೊಟ್ಟಿಗೆಗಳ ಒಳಭಾಗದಲ್ಲಿ ಹೆಚ್ಚು ವಸ್ತುಗಳನ್ನು ತುಂಬಿ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿದ್ದ ಸ್ಥಳಗಳನ್ನೂ ತೆರವುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತೆರವುಗೊಳಿಸಿದ ಪ್ರದೇಶವನ್ನು ನೀರಿನಿಂದ ಸ್ವಚ್ಛಗೊಳಿಸುವ ಕಾರ್ಯವನ್ನೂ ಕೈಗೊಳ್ಳಲಾಗಿದೆ. ಸಾರ್ವಜನಿಕರಿಂದ ಈ ಪ್ರದೇಶದ ಕುರಿತು ಹಲವು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಿಪಿಐ ದೇವರಾಜ್ ಹೇಳಿದ್ದಾರೆ.

ತೆರವುಗೊಳಿಸಿರುವ ಜಾಗದಲ್ಲಿ ಮತ್ತೆ ಒತ್ತುವರಿ ಮಾಡಿಕೊಳ್ಳದಂತೆ ಮುಂದಿನ ದಿನಗಳಲ್ಲಿಯೂ ನಿಗಾ ವಹಿಸಲಾಗುವುದು. ನಿಯಮ ಉಲ್ಲಂಘಿಸಿ ಮತ್ತೆ ಕೊಟ್ಟಿಗೆ ಅಥವಾ ಇತರೆ ನಿರ್ಮಾಣಗಳನ್ನು ಮಾಡಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಚಾನೆಲ್‌ ಪಕ್ಕದ ಪ್ರದೇಶವನ್ನು ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗುವಂತೆ ಸ್ವಚ್ಛವಾಗಿ ಮತ್ತು ಅಡೆತಡೆರಹಿತವಾಗಿ ಇರಿಸುವ ಉದ್ದೇಶದಿಂದ ಟ್ರಾಫಿಕ್ ಪೊಲೀಸರ ಈ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.

Major operation by traffic police in Shivamogga: Encroachments along roads and channels cleared

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close