SUDDILIVE || SHIVAMOGGA
ಶಿವಮೊಗ್ಗ ಹೊರವಲಯದಲ್ಲಿ ಭತ್ತ ತುಂಬಿದ್ದ ಕ್ಯಾಂಟರ್ ಪಲ್ಟಿ: ಚಾಲಕ, ಕ್ಲೀನರ್‌ಗೆ ಗಾಯ-Paddy-laden Canter overturns on the outskirts of Shivamogga; driver and cleaner injured
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಭತ್ತ ತುಂಬಿದ್ದ ಕ್ಯಾಂಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಶಿವಮೊಗ್ಗ ಹೊರವಲಯದ ಮತ್ತೂರು ರಸ್ತೆಯ ಇಂದ್ರಾನಗರದ ಮಳಲಿಕೊಪ್ಪ ಬಳಿ ನಡೆದಿದೆ.
ಮತ್ತೂರು ರಸ್ತೆಯಲ್ಲಿ ಸಾಗುತ್ತಿದ್ದ ಕ್ಯಾಂಟರ್ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿಬಿದ್ದಿದೆ. ಕ್ಯಾಂಟರ್‌ನಲ್ಲಿ ತುಂಬಿದ್ದ ನೂರಾರು ಭತ್ತದ ಚೀಲಗಳು ರಸ್ತೆಗೆ ಬಿದ್ದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಅಪಘಾತದ ರಭಸಕ್ಕೆ ಚಾಲಕ ಹಾಗೂ ಕ್ಲೀನರ್ ವಾಹನದೊಳಗೆ ಸಿಲುಕಿಕೊಂಡಿದ್ದರು. ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ, ಇಬ್ಬರನ್ನೂ ಕ್ಯಾಂಟರ್‌ನಿಂದ ಹೊರತೆಗೆದಿದ್ದಾರೆ. ಬಳಿಕ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದನೆಂಬ ಶಂಕೆ ಸ್ಥಳೀಯರಿಂದ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದಿಂದ ವಿದ್ಯುತ್ ಕಂಬಕ್ಕೂ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Paddy-laden Canter overturns on the outskirts of Shivamogga; driver and cleaner injured
