SUDDILIVE || SHIVAMOGGA
ಸಾಮಾಜಿಕ ಜಾಲತಾಣದ ನೆರವಿನಿಂದ ಮಾತು ಬಾರದ 14 ವರ್ಷದ ಬಾಲಕಿ ಪೋಷಕರ ಮಡಿಲಿಗೆ-Non-verbal 14-year-old girl reunited with parents with the help of social media
ಶಿವಮೊಗ್ಗ: ಮಾತು ಬಾರದ 14 ವರ್ಷದ ಬಾಲಕಿಯೊಬ್ಬಳನ್ನು ತ್ವರಿತ ಕಾರ್ಯಾಚರಣೆ ನಡೆಸಿ ಪೋಷಕರ ಮಡಿಲಿಗೆ ಸೇರಿಸುವಲ್ಲಿ ಕುಂಸಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮದಲ್ಲಿ ಬಸ್‌ನಿಂದ ಬಾಲಕಿಯೊಬ್ಬಳು ಇಳಿದು, ಆಕೆಯೊಂದಿಗೆ ಯಾರೂ ಇಲ್ಲದೆ ಒಬ್ಬಳೇ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಪಡೆದ ಕೂಡಲೇ ಕುಂಸಿ ಪೊಲೀಸ್ ಠಾಣೆಯ ಎಎಸ್ಐ ಕೃಷ್ಣಮೂರ್ತಿ ಹಾಗೂ ಎಎಸ್ಐ ಲೀಲಾವತಿ ಅವರು ಸ್ಥಳಕ್ಕೆ ತೆರಳಿ ಬಾಲಕಿಯನ್ನು ವಿಚಾರಿಸಿದ್ದಾರೆ.
ಬಾಲಕಿಗೆ ಮಾತು ಬಾರದ ಹಿನ್ನೆಲೆಯಲ್ಲಿ ಆಕೆಯ ಹೆಸರು, ವಿಳಾಸ ಹಾಗೂ ಪೋಷಕರ ಕುರಿತು ಮಾಹಿತಿ ಪಡೆಯುವುದು ಪೊಲೀಸರಿಗೆ ಸವಾಲಾಗಿತ್ತು. ಬಾಲಕಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆಕೆಯನ್ನು ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಸುರಕ್ಷಿತವಾಗಿ ಇರಿಸಲಾಯಿತು.
ನಂತರ ಬಾಲಕಿಯ ಪೋಷಕರನ್ನು ಪತ್ತೆಹಚ್ಚಲು ಪೊಲೀಸರು ತ್ವರಿತ ಕಾರ್ಯಾಚರಣೆ ಕೈಗೊಂಡರು. ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬಾಲಕಿಯ ಗುರುತು ಹಾಗೂ ಪೋಷಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಈ ವೇಳೆ ಬಾಲಕಿಯು ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಿಂದ ನಾಲ್ಕು ದಿನಗಳ ಹಿಂದೆ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ಆಕೆಯ ಪೋಷಕರನ್ನು ಸಂಪರ್ಕಿಸಿದ ಪೊಲೀಸರು, ಬಾಲಕಿಯು ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ನೀಡಿದರು. ಬಳಿಕ ಪೋಷಕರು ಆಗಮಿಸಿ ತಮ್ಮ ಮಗುವನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯ ಸಹಕಾರ, ಕುಂಸಿ ಪೊಲೀಸರ ತ್ವರಿತ ಕಾರ್ಯಾಚರಣೆ ಹಾಗೂ ಸಾಮಾಜಿಕ ಮಾಧ್ಯಮಗಳ ಪರಿಣಾಮಕಾರಿ ಬಳಕೆಯಿಂದ ಕೆಲವೇ ಗಂಟೆಗಳಲ್ಲಿ ಬಾಲಕಿಯ ಪೋಷಕರನ್ನು ಪತ್ತೆಹಚ್ಚಲು ಸಾಧ್ಯವಾಗಿದ್ದು, ಬಾಲಕಿಯನ್ನು ಸುರಕ್ಷಿತವಾಗಿ ಕುಟುಂಬದೊಂದಿಗೆ ಸೇರಿಸಲಾಗಿದೆ.
ಈ ಕಾರ್ಯಾಚರಣೆಗೆ ಸಹಕರಿಸಿದ ಎಲ್ಲರಿಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಹೃದಯಪೂರ್ವಕ ಧನ್ಯವಾದ ಹಾಗೂ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ.
