ನ್ಯೂ ಮಂಡ್ಲಿ- ಮದ್ಯದ ಅಮಲಿನಲ್ಲಿ ಅಣ್ಣ-ತಮ್ಮನ ನಡುವೆ ಗಲಾಟೆ; ಗಾಜು ಚುಚ್ಚಿ ಗಾಯಗೊಂಡ ವ್ಯಕ್ತಿ ಸಾವು- Altercation between brothers under the influence of alcohol; man dies after being injured by a shard of glass.

 SUDDILIVE || SHIVAMOGGA

ನ್ಯೂ ಮಂಡ್ಲಿ-ಮದ್ಯದ ಅಮಲಿನಲ್ಲಿ ಅಣ್ಣ-ತಮ್ಮನ ನಡುವೆ ಗಲಾಟೆ; ಗಾಜು ಚುಚ್ಚಿ ಗಾಯಗೊಂಡ ವ್ಯಕ್ತಿ ಸಾವು-  Altercation between brothers under the influence of alcohol; man dies after being injured by a shard of glass. 
New, mandli

ಶಿವಮೊಗ್ಗ: ಮದ್ಯದ ಅಮಲಿನಲ್ಲಿ ಅಣ್ಣ-ತಮ್ಮನ ನಡುವೆ ನಡೆದ ಗಲಾಟೆ ವೇಳೆ ಗಾಜು ಚುಚ್ಚಿ ಗಂಭೀರವಾಗಿ ಗಾಯಗೊಂಡಿದ್ದ 35 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಶಿವಮೊಗ್ಗ ನಗರದ ನ್ಯೂ ಮಂಡ್ಲಿ ಸರ್ಕಲ್‌ ಸಮೀಪ ನಡೆದಿದೆ.

ಮೃತರನ್ನು ಅಮೀರ್ ಬಿನ್ ಮೊಹಮ್ಮದ್ ಅಲಿ (35) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೃತರ ತಾಯಿ ಹಸೀನಾ ನೀಡಿದ ದೂರಿನ ಆಧಾರದ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಸಹೋದರ ಮೊಹಮ್ಮದ್ ರಫೀಕ್ (33) ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 105ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ದಾಖಲೆಯ ಪ್ರಕಾರ, ಸೆಪ್ಟೆಂಬರ್ 5ರಂದು ರಾತ್ರಿ ಸುಮಾರು 8.30ರ ವೇಳೆಗೆ ಮೊಹಮ್ಮದ್ ರಫೀಕ್ ಮದ್ಯಪಾನ ಮಾಡಿಕೊಂಡು ಕೌಸರ್ ಬಾನು ಅವರ ಮನೆಯ ಬಳಿ ತೆರಳಿದ್ದ. ಈ ವೇಳೆ ಮನೆಯ ಸಮೀಪ ಇರಬಾರದು ಎಂದು ಕೌಸರ್ ಬಾನು ಆತನಿಗೆ ತಿಳಿಸಿದ್ದರಿಂದ ಇಬ್ಬರ ನಡುವೆ ಜಗಳ ನಡೆದಿತ್ತು. ಬಳಿಕ ರಫೀಕ್‌ನನ್ನು ದೊಡ್ಡಪೇಟೆ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರು ಬುದ್ಧಿವಾದ ಹೇಳಿ, ಬಸ್ ಚಾರ್ಜ್ ನೀಡಿ ಪತ್ನಿಯ ಬಳಿಗೆ ತೆರಳುವಂತೆ ಕಳುಹಿಸಿದ್ದರು.

ನಂತರ ತನ್ನ ಬಟ್ಟೆಗಳನ್ನು ತೆಗೆದುಕೊಂಡು ಹೋಗಲು ರಫೀಕ್ ರಾತ್ರಿ ಮತ್ತೆ ತಾಯಿ ಹಸೀನಾ ಅವರ ಮನೆಯ ಬಳಿ ಬಂದಿದ್ದಾನೆ. ಈ ವೇಳೆ ಮನೆಯಲ್ಲಿ ಮದ್ಯಪಾನ ಮಾಡಿಕೊಂಡು ಕುಳಿತಿದ್ದ ಅಮೀರ್ ಮತ್ತು ರಫೀಕ್ ನಡುವೆ ಮತ್ತೆ ಗಲಾಟೆ ನಡೆದಿದೆ. ಅಮೀರ್ ತಕ್ಕಡಿಯಿಂದ ರಫೀಕ್‌ಗೆ ಹೊಡೆದಿದ್ದು, ರಫೀಕ್‌ನ ತಲೆಗೆ ಗಾಯವಾಗಿ ರಕ್ತಸ್ರಾವವಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗಲಾಟೆ ಮುಂದುವರಿದ ಸಂದರ್ಭದಲ್ಲಿ ರಫೀಕ್ ಗೋಡೆಯಲ್ಲಿದ್ದ ಕನ್ನಡಿಗೆ ಹೊಡೆದು ಕೆಳಗೆ ಬಿದ್ದಿದ್ದಾನೆ. ಬಳಿಕ ಅಮೀರ್ ಮತ್ತೆ ರಫೀಕ್‌ಗೆ ಹೊಡೆಯಲು ಮುಂದಾದಾಗ, ರಫೀಕ್ ಆತನನ್ನು ದಬ್ಬಿದ ಪರಿಣಾಮ ಗಾಜಿನ ಮೇಲೆ ಬಿದ್ದ ಅಮೀರ್‌ನ ಹೊಟ್ಟೆಗೆ ಗಾಜು ಚುಚ್ಚಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಮೀರ್ ಹೊಟ್ಟೆಯಿಂದ ರಕ್ತಸ್ರಾವವಾಗುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನೂ 108 ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅಮೀರ್ ಚಿಕಿತ್ಸೆ ಫಲಿಸದೆ ಸೆಪ್ಟೆಂಬರ್ 7ರಂದು ಬೆಳಗಿನ ಜಾವ 1.15ರ ಸುಮಾರಿಗೆ ಮೃತಪಟ್ಟಿದ್ದಾರೆ. ಆರಂಭದಲ್ಲಿ ಘಟನೆ ಆಕಸ್ಮಿಕ ಎಂದು ಭಾವಿಸಿ ಯಾವುದೇ ದೂರು ನೀಡಿರಲಿಲ್ಲ. ಬಳಿಕ ಅಮೀರ್ ಮೃತಪಟ್ಟ ಹಿನ್ನೆಲೆಯಲ್ಲಿ ತಾಯಿ ಹಸೀನಾ ಅವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close