SUDDILIVE || SHIVAMOGGA
ಶಿವಮೊಗ್ಗ ಕಸ್ತೂರಬಾ ರಸ್ತೆಯಲ್ಲಿ ವ್ಯಾಪಾರಿ ಮೇಲೆ ಹಲ್ಲೆ, ಜೀವ ಬೆದರಿಕೆ: ಪ್ರಕರಣ ದಾಖಲು-Case registered: Merchant assaulted and threatened with death on Kasturba Road, Shivamogga
ಶಿವಮೊಗ್ಗ: ನಗರದ ಗಾಂಧಿ ಬಜಾರ್‌ನ ಕಸ್ತೂರಬಾ ರಸ್ತೆಯಲ್ಲಿ ಅಂಗಡಿ ವಿಚಾರವಾಗಿ ಉಂಟಾದ ವೈಮನಸ್ಸು ವಿಕೋಪಕ್ಕೆ ತಿರುಗಿ, ಚಪ್ಪಲಿ ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 5ರಂದು ಸಂಜೆ ಸುಮಾರು 4.30ರ ವೇಳೆಯಲ್ಲಿ ಘಟನೆ ನಡೆದಿದೆ. ಕಸ್ತೂರಬಾ ರಸ್ತೆಯಲ್ಲಿ ಕಳೆದ ಹಲವು ವರ್ಷಗಳಿಂದ ಚಪ್ಪಲಿ ವ್ಯಾಪಾರ ನಡೆಸುತ್ತಿರುವ ಅಲಿ ಅನ್ಸರ್ ಅಂಜು ಕಂದತಿಲ್ ಎಂಬುವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಬಳಿಕ ಗಾಯಗೊಂಡ ಅವರು ಸಹರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ದೂರಿನ ಪ್ರಕಾರ, ಅಲಿ ಅನ್ಸರ್ ಅವರ ಅಂಗಡಿಯ ಬಲಭಾಗದಲ್ಲಿ ಅಬ್ದುಲ್ ಖಾದರ್ ಎಂಬವರು ವ್ಯಾಪಾರ ನಡೆಸುತ್ತಿದ್ದಾರೆ. ಅಂಗಡಿಯ ಮುಂಭಾಗಕ್ಕೆ ಸ್ಕೂಟಿ ಹಾಗೂ ಬೋರ್ಡ್‌ಗಳನ್ನು ಅಡ್ಡವಾಗಿ ನಿಲ್ಲಿಸುವ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದೆ.
ಸೆಪ್ಟೆಂಬರ್ 5ರಂದು ಸಂಜೆ ಅಲಿ ಅನ್ಸರ್ ಅವರು ತಮ್ಮ ಅಂಗಡಿಯ ಮುಂಭಾಗದಲ್ಲಿ ಸ್ಕೂಟಿ ನಿಲ್ಲಿಸಲು ಜಾಗ ನೋಡುತ್ತಿದ್ದಾಗ, ಅಬ್ದುಲ್ ಖಾದರ್ ಅವರ ಸ್ಕೂಟಿ ಅಂಗಡಿಗೆ ಅಡ್ಡವಾಗಿ ನಿಂತಿತ್ತು. ಸ್ಕೂಟಿಯನ್ನು ತೆರವುಗೊಳಿಸುವಂತೆ ಅಲಿ ಅನ್ಸರ್ ಕೇಳಿದಾಗ ಮಾತಿನ ಚಕಮಕಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ಖಾದರ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಸ್ಕೂಟಿಯನ್ನು ತೆಗೆಯುತ್ತಿದ್ದಾಗ, ಅಂಗಡಿಯ ಕಡೆಗೆ ಸ್ಕೂಟಿ ನಿಲ್ಲಿಸುವಂತೆ ಅಲಿ ಅನ್ಸರ್ ಹೇಳಿದ ಸಂದರ್ಭದಲ್ಲಿ ಏಕಾಏಕಿ ಅವರನ್ನು ಅಡ್ಡಗಟ್ಟಿ ಕೈಗಳಿಂದ ಮುಷ್ಟಿ ಮಾಡಿ ಎಡಕಣ್ಣಿನ ಸಮೀಪ ಹಾಗೂ ಮುಖಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ, “ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳದಲ್ಲಿದ್ದ ನವಾಜ್ ಹಾಗೂ ಸಲಾಂ ಅವರು ಜಗಳ ಬಿಡಿಸಿದರು ಎನ್ನಲಾಗಿದೆ. ಹಲ್ಲೆಯಿಂದ ನೋವು ಉಂಟಾದ ಹಿನ್ನೆಲೆಯಲ್ಲಿ ಅಲಿ ಅನ್ಸರ್ ಅವರನ್ನು ಸಹರಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ದೂರಿನ ಆಧಾರದ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 310/2026ರಂತೆ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 126(2), 352, 115(2) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Case registered: Merchant assaulted and threatened with death on Kasturba Road, Shivamogga
