ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ: ಬಿ.ವೈ.ರಾಘವೇಂದ್ರ- Rapid revolution in the railway sector in a short period of time: B.Y. Raghavendra

 SUDDILIVE || SHIVAMOGGA

ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ: ಬಿ.ವೈ.ರಾಘವೇಂದ್ರ- Rapid revolution in the railway sector in a short period of time: B.Y. Raghavendra  
Shivamogga, railway


ಶಿವಮೊಗ್ಗ:
ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಲ್ಲಿ ರೈಲ್ವೇ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಹಲವು ಹೊಸ ರೈಲು ಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ ಸಮೀಪದ ಹಾರನಹಳ್ಳಿ ರೈಲು ನಿಲ್ದಾಣದಲ್ಲಿ ₹1.88 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿರುವ ಪ್ಲಾಟ್‌ಫಾರ್ಮ್ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹಾರನಹಳ್ಳಿ ರೈಲು ನಿಲ್ದಾಣದಲ್ಲಿರುವ ಪ್ರಸ್ತುತ 250 ಮೀಟರ್ ಉದ್ದದ ಪ್ಲಾಟ್‌ಫಾರ್ಮ್ ಅನ್ನು ಒಂದು ಮೀಟರ್ ಎತ್ತರಿಸುವುದರ ಜೊತೆಗೆ ಅಗಲವನ್ನೂ ಒಂದು ಮೀಟರ್ ವಿಸ್ತರಿಸಲಾಗುವುದು. ಕಾಮಗಾರಿ ಪೂರ್ಣಗೊಂಡ ಬಳಿಕ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಹಾರನಹಳ್ಳಿಯಲ್ಲಿ ನಿಲುಗಡೆ ಹಾಗೂ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕೋಟೆಗಂಗೂರು ಕೋಚಿಂಗ್ ಡಿಪೋ ಶೀಘ್ರ ಲೋಕಾರ್ಪಣೆ

ಕೋಟೆಗಂಗೂರು ರೈಲ್ವೇ ಕೋಚಿಂಗ್ ಡಿಪೋ ಮುಂದಿನ ಎರಡು ತಿಂಗಳಲ್ಲಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದ್ದು, ಇದು ರಾಜ್ಯದ ಪ್ರಮುಖ ನಾಲ್ಕು ರೈಲ್ವೇ ಡಿಪೋಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಲಿದೆ ಎಂದು ರಾಘವೇಂದ್ರ ಹೇಳಿದರು.

ಡಿಪೋ ಅಧಿಕೃತವಾಗಿ ಕಾರ್ಯಾರಂಭ ಮಾಡಿದ ಬಳಿಕ ದೇಶದ ಪ್ರಮುಖ ನಗರಗಳಿಗೆ ಶಿವಮೊಗ್ಗದಿಂದ ಹೊಸ ರೈಲು ಸಂಪರ್ಕಗಳು ಆರಂಭವಾಗುವ ಸಾಧ್ಯತೆಯಿದೆ. ವಂದೇ ಭಾರತ್ ರೈಲು ಸೇರಿದಂತೆ ತಿರುಪತಿ, ಕೇರಳದ ಎರ್ನಾಕುಲಂ, ಬಿಹಾರ, ಜಾರ್ಖಂಡ್, ಚಂಡೀಗಢ ಹಾಗೂ ಗುವಾಹಟಿಯಂತಹ ನಗರಗಳಿಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಗಳಿವೆ ಎಂದು ಅವರು ಹೇಳಿದರು.

ಶಿವಮೊಗ್ಗ–ಶಿಕಾರಿಪುರ–ರಾಣೇಬೆನ್ನೂರು ರೈಲು ಮಾರ್ಗ ಪೂರ್ಣಗೊಂಡ ಬಳಿಕ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೆ ರೈಲು ಸಂಪರ್ಕ ಮತ್ತಷ್ಟು ಸುಗಮವಾಗಲಿದೆ ಎಂದರು.

ಶಿವಮೊಗ್ಗದಲ್ಲಿ ಪ್ರತಿದಿನ 28ಕ್ಕೂ ಹೆಚ್ಚು ರೈಲುಗಳ ಸಂಚಾರ
Shivamogga, railway

ಹಿಂದೆ ದಶಕಗಳ ಹಿಂದೆ ಕೆಲವೇ ರೈಲುಗಳು ಸಂಚರಿಸುತ್ತಿದ್ದ ಶಿವಮೊಗ್ಗದ ರೈಲು ಮಾರ್ಗದಲ್ಲಿ ಇದೀಗ ಪ್ರತಿದಿನ 28ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿವೆ. ಸಾರ್ವಜನಿಕರು ರೈಲು ಸಂಪರ್ಕದ ಈ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಸಂಸದರು ಮನವಿ ಮಾಡಿದರು.

ಪ್ರಸ್ತುತ ವಾರದಲ್ಲಿ ಮೂರು ಬಾರಿ ಹಾಗೂ ವಾರದಲ್ಲಿ ಒಂದು ಬಾರಿ ರೈಲುಗಳ ನಿರ್ವಹಣಾ ಕಾರ್ಯ ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ನಿರ್ವಹಣಾ ಕಾರ್ಯವನ್ನು ಕೋಟೆಗಂಗೂರು ಕೋಚಿಂಗ್ ಡಿಪೋಗೆ ಸ್ಥಳಾಂತರಿಸಲಾಗುವುದು. ಶಿವಮೊಗ್ಗ ನಗರದ ಗೂಡ್ಸ್ ಶೆಡ್‌ನ್ನೂ ಕೋಟೆಗಂಗೂರಿಗೆ ಸ್ಥಳಾಂತರಿಸುವ ಯೋಜನೆ ಇದೆ ಎಂದು ತಿಳಿಸಿದರು.

ತಾಳಗುಪ್ಪ, ಸಾಗರ ಹಾಗೂ ಶಿವಮೊಗ್ಗ ರೈಲು ನಿಲ್ದಾಣಗಳನ್ನು ಸುಮಾರು ₹100 ಕೋಟಿ ವೆಚ್ಚದಲ್ಲಿ ಉನ್ನತೀಕರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಹೊಸ ರೈಲು ಮಾರ್ಗಗಳ ಅಭಿವೃದ್ಧಿಗೆ ಒತ್ತು

ರೈಲು ಸಂಪರ್ಕವಿಲ್ಲದ ಸೊರಬ ಹಾಗೂ ತೀರ್ಥಹಳ್ಳಿ ತಾಲೂಕುಗಳಿಗೂ ಮುಂದಿನ ದಿನಗಳಲ್ಲಿ ರೈಲು ಸಂಪರ್ಕ ಕಲ್ಪಿಸಲು ಗಮನಹರಿಸಲಾಗುವುದು ಎಂದು ರಾಘವೇಂದ್ರ ಹೇಳಿದರು.

ಶಿವಮೊಗ್ಗದಿಂದ ಹೊಸ ರೈಲು ಮಾರ್ಗಗಳಿಗೆ ಮಂಜೂರಾತಿ ದೊರೆತಿದ್ದು, ಅಂತಿಮ ಸ್ಥಳ ಸಮೀಕ್ಷೆ ಸೇರಿದಂತೆ ವಿವಿಧ ಹಂತಗಳ ಪ್ರಕ್ರಿಯೆ ನಡೆಯುತ್ತಿದೆ. ಭದ್ರಾವತಿ–ಚಿಕ್ಕಜಾಜೂರು, ಶಿವಮೊಗ್ಗ–ಶೃಂಗೇರಿ–ಮಂಗಳೂರು, ಶಿವಮೊಗ್ಗ–ಬೀರೂರು ದ್ವಿಪಥ ರೈಲು ಮಾರ್ಗ, ತಾಳಗುಪ್ಪ–ಸಿರ್ಸಿ–ಹುಬ್ಬಳ್ಳಿ ಹಾಗೂ ತಾಳಗುಪ್ಪ–ಹೊನ್ನಾವರ ಹೊಸ ರೈಲು ಮಾರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಭಾಗದ ಜನರ ನಿರೀಕ್ಷೆಯಂತೆ ರೈಲ್ವೇ ಮೇಲ್ಸೇತುವೆ ಹಾಗೂ ವಿಠಗೊಂಡನಕೊಪ್ಪ–ಹಾರನಹಳ್ಳಿ ರಸ್ತೆ ಸಂಪರ್ಕ ಸೇರಿದಂತೆ ವಿವಿಧ ಕಾಮಗಾರಿಗಳಿಗೂ ಗಮನಹರಿಸಲಾಗುವುದು ಎಂದರು.

ಶಿವಮೊಗ್ಗ ತಾಲೂಕಿನ ಏತ ನೀರಾವರಿ ಯೋಜನೆಗಳಿಗೆ ₹28 ಕೋಟಿ ಅನುದಾನ ಮಂಜೂರು ಮಾಡುವಂತೆ ರಾಜ್ಯದ ನೀರಾವರಿ ಸಚಿವರಿಗೆ ಮನವಿ ಮಾಡಲಾಗಿದ್ದು, ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

ಜಿಲ್ಲೆಯ ಅಭಿವೃದ್ಧಿಗೆ ಕೈಗೊಳ್ಳಲಾಗುತ್ತಿರುವ ವಿವಿಧ ಯೋಜನೆಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಹಕಾರವನ್ನು ಸ್ಮರಿಸುವುದಾಗಿ ಬಿ.ವೈ.ರಾಘವೇಂದ್ರ ತಿಳಿಸಿದರು.

ರೈಲ್ವೇ ಅಭಿವೃದ್ಧಿಗೆ ಸಂಸದರ ಕೊಡುಗೆ: ಧನಂಜಯ ಸರ್ಜಿ

ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಶಿವಮೊಗ್ಗ ಜಿಲ್ಲೆಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಹೊಸ ರೈಲು ಸಂಪರ್ಕಗಳಿಂದ ಜನಸಾಮಾನ್ಯರಿಗೆ ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸಲು ಅನುಕೂಲವಾಗಿದೆ ಎಂದು ಹೇಳಿದರು.

ರೈಲ್ವೇ ಅಭಿವೃದ್ಧಿ ಕಾಮಗಾರಿಗಳ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಯತ್ನವಿದ್ದು, ಅವರು ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ, ಕೆ.ಜಿ.ಕುಮಾರಸ್ವಾಮಿ, ಜಗದೀಶ್ ಸೇರಿದಂತೆ ಅನೇಕ ಗಣ್ಯರು, ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Rapid revolution in the railway sector in a short period of time: B.Y. Raghavendra  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close