SUDDILIVE || SHIVAMOGGA || BANGLORE
ವಾಲ್ಮೀಕಿ ನಿಗಮದ ನೌಕರ ದಿ. ಚಂದ್ರಶೇಖರನ್ ಕುಟುಂಬಕ್ಕೆ ಪಿಎಫ್ ಹಣ ಪಾವತಿಯಲ್ಲಿ ವಿಳಂಬ: ಇಲಾಖೆ ಸ್ಪಷ್ಟನೆ-Delay in PF payment to the family of the late Chandrashekharan, a Valmiki Nigam employee: Department issues clarification
ಬೆಂಗಳೂರು, ಸೆ.1: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕರಾಗಿದ್ದ ದಿವಂಗತ ಚಂದ್ರಶೇಖರನ್ ಅವರ ಕುಟುಂಬಕ್ಕೆ ನೀಡಬೇಕಾದ ಸೌಲಭ್ಯಗಳ ಪೈಕಿ ₹3.05 ಲಕ್ಷ ಪಿಎಫ್ ಮೊತ್ತ ಮಾತ್ರ ಬಾಕಿ ಇದ್ದು, ಉಳಿದ ಎಲ್ಲಾ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.
ಮೈಸೂರಿನ ಪೇಪರ್ ಮಿಲ್ಸ್‌ನಿಂದ ಚಂದ್ರಶೇಖರನ್ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ವಿಲೀನಗೊಳಿಸಲಾಗಿತ್ತು. ಅವರ ನಿಧನದ ನಂತರ ಕುಟುಂಬಕ್ಕೆ ದೊರೆಯಬೇಕಾದ ವಿವಿಧ ಶಾಸನಬದ್ಧ ಹಾಗೂ ಇತರೆ ಸೌಲಭ್ಯಗಳ ಪಾವತಿ ಕುರಿತು ವಿಳಂಬವಾಗಿರುವ ಬಗ್ಗೆ ಚರ್ಚೆ ನಡೆದ ಹಿನ್ನೆಲೆಯಲ್ಲಿ ಇಲಾಖೆ ಈ ಸ್ಪಷ್ಟನೆ ನೀಡಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯ ನಿರ್ದೇಶನದಂತೆ ನಿಗಮದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ನೌಕರರ ಶಾಸನಬದ್ಧ ಕಡಿತಗಳ ಮೊತ್ತವನ್ನು ಸಂಬಂಧಿತ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆಯಲ್ಲಿಯೂ ವಿಳಂಬ ಉಂಟಾಗಿತ್ತು ಎಂದು ಇಲಾಖೆ ತಿಳಿಸಿದೆ.
ನಂತರ ನೌಕರರ ಶಾಸನಬದ್ಧ ಕಡಿತಗಳ ಮೊತ್ತವನ್ನು ಜಮಾ ಮಾಡಲು ಅಗತ್ಯವಾದ ಬ್ಯಾಂಕ್ ಖಾತೆ ತೆರೆಯಲು ಅನುಮತಿ ನೀಡಲಾಗಿದ್ದು, 2026ರ ಜುಲೈ 22ರಂದು ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ.
ಇದೀಗ ದಿವಂಗತ ಚಂದ್ರಶೇಖರನ್ ಅವರ ಕುಟುಂಬಕ್ಕೆ ಬಾಕಿ ಇರುವ ₹3.05 ಲಕ್ಷ ಪಿಎಫ್ ಮೊತ್ತವನ್ನು ಶೀಘ್ರದಲ್ಲೇ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೀಗಾಗಿ ಪಿಎಫ್ ಹಣ ಪಾವತಿಯಾಗದೆ ಕುಟುಂಬಕ್ಕೆ ಯಾವುದೇ ಸೌಲಭ್ಯ ನೀಡಿಲ್ಲ ಎಂಬ ರೀತಿಯ ಮಾಹಿತಿಯು ಸರಿಯಲ್ಲ. ಪಿಎಫ್ ಮೊತ್ತ ಹೊರತುಪಡಿಸಿ ಉಳಿದ ಎಲ್ಲಾ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
