SUDDILIVE || BHADRAVATHI
ಭದ್ರಾವತಿ: ಪದ್ಮ ನಿಲಯ ಹೋಟೆಲ್‌ಗೆ ಆಹಾರ ಸುರಕ್ಷತಾ ಅಧಿಕಾರಿಗಳ ಭೇಟಿ; ಸ್ವಚ್ಛತೆ ಕಾಪಾಡಲು ಒಂದು ವಾರ ಗಡುವು- Bhadravati: Food safety officials visit Padma Nilaya hotel; one week deadline to maintain cleanliness
ಭದ್ರಾವತಿ: ನಗರದ ಬಿ.ಎಚ್. ರಸ್ತೆಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಪದ್ಮ ನಿಲಯ ಹೋಟೆಲ್‌ಗೆ ಉಪವಿಭಾಗಾಧಿಕಾರಿ (ಎಸಿ) ಡಾ. ಮೈತ್ರಿ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಆಹಾರ ಸುರಕ್ಷತೆ ಹಾಗೂ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಹೋಟೆಲ್‌ನಲ್ಲಿ ಕೆಲವೊಂದು ಲೋಪಗಳು ಕಂಡುಬಂದಿದ್ದು, ಅವುಗಳನ್ನು ಸರಿಪಡಿಸಿಕೊಳ್ಳಲು ಒಂದು ವಾರದ ಗಡುವು ನೀಡಿ ಎಚ್ಚರಿಕೆ ನೀಡಲಾಗಿದೆ.
ಪರಿಶೀಲನೆ ವೇಳೆ ಕೊಳೆತ ಹಣ್ಣುಗಳು ಹಾಗೂ ಅವಧಿ ಮುಗಿದಿರುವ ಕೆಲವು ತಿನಿಸು ಮತ್ತು ಆಹಾರ ಪದಾರ್ಥಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ. ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸುವುದು, ಹಣ್ಣುಗಳನ್ನು ಅಗತ್ಯವಿದ್ದಲ್ಲಿ ರೆಫ್ರಿಜರೇಟರ್‌ನಲ್ಲಿ ಇಡುವುದು ಸೇರಿದಂತೆ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದಲ್ಲದೆ, ಹೋಟೆಲ್‌ನಲ್ಲಿ ಎಫ್‌ಎಸ್‌ಎಸ್‌ಎಐ (FSSAI) ಪ್ರಮಾಣಪತ್ರ ಹಾಗೂ ಅಗತ್ಯ ಪರವಾನಗಿ ಪತ್ರಗಳನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸದಿರುವುದು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಪರವಾನಗಿ ಪಡೆದಿದ್ದರೆ ಅದನ್ನು ಸೂಕ್ತ ರೀತಿಯಲ್ಲಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ. ಪರವಾನಗಿ ಹೊಂದಿಲ್ಲದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಹೋಟೆಲ್ ಸಿಬ್ಬಂದಿ ಆಹಾರ ತಯಾರಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಹೈಜೀನ್ ಕ್ರಮಗಳಲ್ಲಿಯೂ ಲೋಪಗಳು ಕಂಡುಬಂದಿವೆ ಎಂದು ಎಸಿ ಡಾ. ಮೈತ್ರಿ ತಿಳಿಸಿದ್ದಾರೆ. ಸಿಬ್ಬಂದಿ ಕ್ಯಾಪ್, ಮಾಸ್ಕ್, ಗ್ಲೌಸ್ ಹಾಗೂ ಗೌನ್ ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಬಳಸಬೇಕು. ಕೈ ತೊಳೆಯಲು ಸೂಕ್ತ ವ್ಯವಸ್ಥೆ ಇರಬೇಕು ಹಾಗೂ ಆಹಾರ ತಯಾರಿಕಾ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸೂಚಿಸಲಾಗಿದೆ.
ಈ ಕುರಿತು ಸುದ್ದಿಲೈವ್ ಜೊತೆ ಮಾತನಾಡಿದ ಎಸಿ ಡಾ. ಮೈತ್ರಿ, ಪದ್ಮ ನಿಲಯ ಹೋಟೆಲ್‌ಗೆ ಮಾತ್ರ ಈ ಬಾರಿ ಭೇಟಿ ನೀಡಲಾಗಿದ್ದು, ಸಮಯದ ಅಭಾವದಿಂದ ಇತರ ಹೋಟೆಲ್‌ಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಮುಂದಿನ ವಾರ ಇತರ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಹೋಟೆಲ್‌ಗೆ ಈ ಹಿಂದೆಯೇ ನೀಡಲಾಗಿದ್ದ ಆಹಾರ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಪರಿಶೀಲನೆ ವೇಳೆ ಕಂಡುಬಂದ ಹಿನ್ನೆಲೆಯಲ್ಲಿ, ಅವುಗಳನ್ನು ಅನುಸರಿಸಲು ಮತ್ತೊಂದು ವಾರದ ಕಾಲಾವಕಾಶ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಲೋಪಗಳನ್ನು ಸರಿಪಡಿಸದಿದ್ದರೆ ಮುಂದಿನ ಹಂತದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪರವಾನಗಿ ವಿಚಾರವಾಗಿ ಮಾತನಾಡಿದ ಅವರು, ಹೋಟೆಲ್‌ಗೆ ಪರವಾನಗಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಮುಂದಿನ ಪರಿಶೀಲನೆಯಲ್ಲಿ ಖಚಿತಪಡಿಸಿಕೊಳ್ಳಲಾಗುವುದು. ಪರವಾನಗಿ ಇದ್ದರೂ ಅದನ್ನು ಪ್ರದರ್ಶಿಸದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಪರವಾನಗಿ ಪಡೆಯದೇ ಹೋಟೆಲ್ ನಡೆಸುತ್ತಿರುವುದು ಕಂಡುಬಂದರೆ ಸಂಸ್ಥೆಯನ್ನು ಸೀಜ್ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಹಿಂದಿನ ದಾಳಿಗಳ ಪರಿಶೀಲನೆ
ಈ ಹಿಂದೆ ಆಹಾರ ಸುರಕ್ಷತೆ ಸಂಬಂಧಿಸಿದಂತೆ ಅರ್ಪಣ್ ಶಾಪರ್ಸ್ ಸೇರಿದಂತೆ ಕೆಲವು ಸ್ಥಳಗಳಲ್ಲಿ ನಡೆಸಿದ್ದ ಪರಿಶೀಲನೆಗಳ ಕುರಿತು ಕೇಳಿದಾಗ, ಅಧಿಕಾರಿಗಳು ನೀಡಿದ್ದ ಮಾರ್ಗಸೂಚಿಗಳ ಆಧಾರದ ಮೇಲೆ ಆರ್‌ಎಸ್‌ಒ ಹಾಗೂ ಎಫ್‌ಎಸ್‌ಒಗಳು ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ಎಸಿ ಡಾ. ಮೈತ್ರಿ ತಿಳಿಸಿದರು.
ಅಲ್ಲಿ ಸೂಚಿಸಲಾಗಿದ್ದ ಬಹುತೇಕ ರೆಕ್ಟಿಫಿಕೇಷನ್‌ಗಳು ಪೂರ್ಣಗೊಂಡಿರುವುದರಿಂದ ಸದ್ಯ ಯಾವುದೇ ಹೆಚ್ಚುವರಿ ಕ್ರಮ ಕೈಗೊಳ್ಳುವ ಅಗತ್ಯ ಕಂಡುಬಂದಿಲ್ಲ ಎಂದು ಅವರು ಹೇಳಿದರು.
ಈ ಹಿಂದೆ ಸಂಗ್ರಹಿಸಲಾಗಿದ್ದ ಆಹಾರ ಮಾದರಿಗಳ ಪರೀಕ್ಷಾ ವರದಿಗಳು ಇನ್ನೂ ನಿರೀಕ್ಷೆಯಲ್ಲಿವೆ. ವರದಿಗಳು ಬಂದ ನಂತರ ಅವುಗಳಲ್ಲಿ ಗಮನಾರ್ಹ ಅಂಶಗಳು ಕಂಡುಬಂದರೆ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭದ್ರಾವತಿಯಲ್ಲಿ ಹೋಟೆಲ್‌ಗಳು ಹಾಗೂ ಆಹಾರ ಮಾರಾಟ ಮಳಿಗೆಗಳಲ್ಲಿ ಆಹಾರ ಸುರಕ್ಷತೆ, ಸ್ವಚ್ಛತೆ ಮತ್ತು ಪರವಾನಗಿ ನಿಯಮಗಳ ಪಾಲನೆ ಕುರಿತು ಅಧಿಕಾರಿಗಳ ಪರಿಶೀಲನೆ ಮುಂದುವರಿಯುವ ಸಾಧ್ಯತೆ ಇದೆ.
Bhadravati: Food safety officials visit Padma Nilaya hotel; one week deadline to maintain cleanliness
