SUDDILIVE || SHIVAMOGGA
ತುಂಗಾ ನದಿಯಲ್ಲಿ ಯುವಕ ನಾಪತ್ತೆ: ಪುಟ್ಟಪ್ಪನ ಕ್ಯಾಂಪ್ ಬಳಿ ತೀವ್ರ ಶೋಧ- Youth goes missing in Tunga River: Intensive search underway near Puttappa's camp
ಶಿವಮೊಗ್ಗ: ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪುಟ್ಟಪ್ಪನ ಕ್ಯಾಂಪ್ ಬಳಿ ತುಂಗಾ ನದಿಯಲ್ಲಿ ಯುವಕನೋರ್ವ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹಾಗೂ ಸ್ಥಳೀಯರು ತೀವ್ರ ಶೋಧ ನಡೆಸುತ್ತಿದ್ದಾರೆ.
ನಾಪತ್ತೆಯಾದ ಯುವಕನನ್ನು ಫೈಜಾನ್ ಎಂದು ಗುರುತಿಸಲಾಗಿದೆ. ಫೈಜಾನ್ ಸೇರಿದಂತೆ ಇಬ್ಬರು ಯುವಕರು ತುಂಗಾ ನದಿಯ ದಡಕ್ಕೆ ತೆರಳಿ ಈಜಲು ನೀರಿಗೆ ಇಳಿದಿದ್ದರು ಎನ್ನಲಾಗಿದೆ. ಈ ವೇಳೆ ಮತ್ತೋರ್ವ ಯುವಕ ಯಾಸಿನ್ ಅರಾಫತ್ (25) ಸುರಕ್ಷಿತವಾಗಿ ವಾಪಸ್ ಬಂದಿದ್ದು, ಫೈಜಾನ್ ನಾಪತ್ತೆಯಾಗಿದ್ದಾನೆ.
ಘಟನೆ ಬಳಿಕ ಸ್ಥಳೀಯರು ಹಾಗೂ ಸಂಬಂಧಪಟ್ಟ ಸಿಬ್ಬಂದಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ನದಿಯ ನೀರಿನ ಹರಿವು ಮತ್ತು ಆಳದ ಹಿನ್ನೆಲೆಯಲ್ಲಿ ಶೋಧ ಕಾರ್ಯಕ್ಕೆ ಸವಾಲು ಎದುರಾಗಿದೆ. ಹಾಗಾಗಿ ಈಜು ತಜ್ಞ ಈಶ್ವರ್ ಮಲ್ಪೆ ಸಹ ಸ್ಥಳಕ್ಜೆ ಭೇಟಿ ನೀಡಿ ತೀವ್ರಶೋಧ ನಡೆಸುತ್ತಿದ್ದಾರೆ.
ಸ್ಥಳೀಯವಾಗಿ ಲಭ್ಯವಾದ ಮಾಹಿತಿಯ ಪ್ರಕಾರ, ಯುವಕರು ಪಾರ್ಟಿ ನಡೆಸುತ್ತಿದ್ದ ಬಳಿಕ ನೀರಿಗೆ ಇಳಿದಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಅವರು ಯಾವ ಕಾರಣಕ್ಕಾಗಿ ಅಲ್ಲಿ ಸೇರಿದ್ದರು, ಪಾರ್ಟಿ ನಡೆದಿತ್ತೇ ಹಾಗೂ ಘಟನೆಗೂ ಮುನ್ನ ನಿಖರವಾಗಿ ಏನಾಯಿತು ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
ಘಟನೆ ಸಂಬಂಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ಫೈಜಾನ್ ನಾಪತ್ತೆ ಕುರಿತು ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿ ನಾಪತ್ತೆಯಾದ ಯುವಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ನದಿಯ ದಡದಲ್ಲಿ ಯುವಕನ ಕುಟುಂಬಸ್ಥರು ಹಾಗೂ ಸ್ಥಳೀಯರು ಆತಂಕದಿಂದ ಕಾಯುತ್ತಿದ್ದು, ರಾತ್ರಿಯ ವೇಳೆಯೂ ಶೋಧ ಕಾರ್ಯ ಮುಂದುವರಿದಿದೆ.
Youth goes missing in Tunga River: Intensive search underway near Puttappa's camp
