SUDDILIVE || AGUMBE
ಚೆಸ್‌ನಲ್ಲಿ ಭಂಡಿಗಡಿಯ ವಿದ್ಯಾರ್ಥಿನಿಯರ ಐತಿಹಾಸಿಕ ಸಾಧನೆ; ಸತತ 5ನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ- Historical achievement of Bhandigadi students in chess; Selected for the state level for the 5th consecutive time
ಆಗುಂಬೆ: ಮಲೆನಾಡಿನ ಪುಟ್ಟ ಗ್ರಾಮವಾದ ಭಂಡಿಗಡಿಯ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ಕೃತಿಕ ಹಾಗೂ ಕುಮಾರಿ ಮೆಹನಾಜ್ ಅವರು ಚೆಸ್ ಸ್ಪರ್ಧೆಯಲ್ಲಿ ಸತತ ಐದನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಉನ್ನತ ಮಟ್ಟದ ಚೆಸ್ ತರಬೇತಿ ಸೌಲಭ್ಯಗಳು ಸೀಮಿತವಾಗಿದ್ದರೂ, ಸತತ ಪ್ರಯತ್ನ, ಪರಿಶ್ರಮ ಹಾಗೂ ಸೂಕ್ತ ಮಾರ್ಗದರ್ಶನದ ಮೂಲಕ ಈ ವಿದ್ಯಾರ್ಥಿನಿಯರು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಮಲೆನಾಡಿನ ಪುಟ್ಟ ಗ್ರಾಮವಾದ ಭಂಡಿಗಡಿಯಿಂದ ರಾಜ್ಯಮಟ್ಟದವರೆಗೆ ತಲುಪಿರುವ ಇವರ ಸಾಧನೆ ಗ್ರಾಮಕ್ಕೆ ಹೆಮ್ಮೆ ತಂದಿದೆ.
ನಾಗರಾಜ್ ಸರ್‌ರಿಂದ ಚೆಸ್ ಪಯಣಕ್ಕೆ ಅಡಿಪಾಯ
ಭಂಡಿಗಡಿ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಚೆಸ್ ತರಬೇತಿ ಆರಂಭಿಸಿದ ಈ ವಿದ್ಯಾರ್ಥಿನಿಯರು, ಪ್ರಾಥಮಿಕ ಹಂತದಲ್ಲಿಯೇ ಎರಡು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಗ್ರಾಮೀಣ ಮಕ್ಕಳಲ್ಲಿ ಚೆಸ್ ಆಟದ ಆಸಕ್ತಿ ಬೆಳೆಸಿ, ನೂರಾರು ವಿದ್ಯಾರ್ಥಿಗಳನ್ನು ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಸಿದ್ಧಪಡಿಸಿದ ಹೆಗ್ಗಳಿಕೆ ನಾಗರಾಜ್ ಅವರದ್ದು.
ನಂತರ ಪ್ರೌಢಶಾಲೆಯ ಹಂತದಲ್ಲಿ ಇಂಗ್ಲಿಷ್ ಶಿಕ್ಷಕ ಅನಿಲ್ ಅವರ ಮಾರ್ಗದರ್ಶನ ಹಾಗೂ ತರಬೇತಿ ವಿದ್ಯಾರ್ಥಿನಿಯರ ಸಾಧನೆಗೆ ಮತ್ತಷ್ಟು ಬಲ ನೀಡಿತು. ಭಂಡಿಗಡಿಯ ಪ್ರತಿಭಾವಂತ ಚೆಸ್ ಆಟಗಾರ ಆದಿತ್ಯ ಶರ್ಮ ಅವರಿಂದಲೂ ಇವರು ಪ್ರತಿದಿನ ತರಬೇತಿ ಪಡೆಯುತ್ತಿದ್ದಾರೆ. ಜೊತೆಗೆ, ತೀರ್ಥಹಳ್ಳಿಯ ನಿರಂತರ ಚೆಸ್ ತರಬೇತಿ ಕೇಂದ್ರದ ನಾಗರಾಜ್ ಅವರ ಸಲಹೆ ಹಾಗೂ ಪ್ರೋತ್ಸಾಹವೂ ಇವರ ಸಾಧನೆಗೆ ನೆರವಾಗಿದೆ.
ಈ ಎಲ್ಲರ ಮಾರ್ಗದರ್ಶನ, ನಿರಂತರ ಅಭ್ಯಾಸ ಹಾಗೂ ವಿದ್ಯಾರ್ಥಿನಿಯರ ಪರಿಶ್ರಮದ ಫಲವಾಗಿ ಕೃತಿಕ ಮತ್ತು ಮೆಹನಾಜ್ ಸತತ ಐದು ವರ್ಷಗಳಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ವಿಶೇಷವಾಗಿದೆ.
ಪೋಷಕರ ಪ್ರೋತ್ಸಾಹವೇ ಬೆನ್ನೆಲುಬು
ಮಕ್ಕಳ ಚೆಸ್ ಸಾಧನೆಯ ಹಿಂದೆ ಪೋಷಕರ ತ್ಯಾಗ, ಪ್ರೋತ್ಸಾಹ ಹಾಗೂ ಬೆಂಬಲವೂ ಮಹತ್ವದ ಪಾತ್ರ ವಹಿಸಿದೆ. ಮಕ್ಕಳ ಆಸಕ್ತಿಗೆ ಬೆನ್ನೆಲುಬಾಗಿ ನಿಂತು, ಅವರ ಅಭ್ಯಾಸ ಮತ್ತು ಸ್ಪರ್ಧೆಗಳಿಗೆ ಸಹಕಾರ ನೀಡುತ್ತಿರುವ ಪೋಷಕರ ಕೊಡುಗೆ ಶ್ಲಾಘನೀಯವಾಗಿದೆ.
ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡೇ ರಾಜ್ಯಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿರುವ ಈ ಇಬ್ಬರು ವಿದ್ಯಾರ್ಥಿನಿಯರು ಮುಂಬರುವ ಸ್ಪರ್ಧೆಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಮಲೆನಾಡು ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತರಲಿ ಎಂದು ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಹಾರೈಸಿದ್ದಾರೆ.
ಸತತ ಐದು ವರ್ಷಗಳ ರಾಜ್ಯಮಟ್ಟದ ಆಯ್ಕೆಯ ಮೂಲಕ ಸಾಧನೆಯ ಮಾದರಿಯಾಗಿರುವ ಕುಮಾರಿ ಕೃತಿಕ ಹಾಗೂ ಕುಮಾರಿ ಮೆಹನಾಜ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
