ದಸರಾ ಮೆರವಣಿಗೆಯಲ್ಲಿ ಜೀವಂತ ಆನೆಗಳ ಬಳಕೆ ನಿಲ್ಲಿಸಲು ಆಗ್ರಹ: ಅರಣ್ಯ ಸಚಿವರಿಗೆ ಮನವಿ-Stop Live Elephants in Dasara Processions: Petition Submitted in Shivamogga

 SUDDILIVE || SHIVAMOGGA

ದಸರಾ ಮೆರವಣಿಗೆಯಲ್ಲಿ ಜೀವಂತ ಆನೆಗಳ ಬಳಕೆ ನಿಲ್ಲಿಸಲು ಆಗ್ರಹ: ಅರಣ್ಯ ಸಚಿವರಿಗೆ ಮನವಿ-Stop Live Elephants in Dasara Processions: Petition Submitted in Shivamogga
Dasra, elephant

ಶಿವಮೊಗ್ಗ: ದಸರಾ ಸೇರಿದಂತೆ ಇತರೆ ಸಾರ್ವಜನಿಕ ಉತ್ಸವಗಳ ಮೆರವಣಿಗೆಯಲ್ಲಿ ವನ್ಯ ಆನೆಗಳನ್ನು ಬಳಸುವುದನ್ನು ಹಂತ ಹಂತವಾಗಿ ಕಡಿಮೆ ಮಾಡಿ, ಅಂತಿಮವಾಗಿ ಜೀವಂತ ಆನೆಗಳ ಬಳಕೆಯಿಲ್ಲದ ಮೆರವಣಿಗೆ ನಡೆಸಲು ರಾಜ್ಯ ಸರ್ಕಾರ ನೀತಿ ರೂಪಿಸಬೇಕು ಎಂದು ಆಗ್ರಹಿಸಿ ಮಲೆನಾಡು ವನ್ಯಜೀವಿ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಶಿವಮೊಗ್ಗ ನಗರ ಪರಿಸರಪ್ರೇಮಿಗಳ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಗಿದೆ.

ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಅವರಿಗೆ ಸಲ್ಲಿಸಿರುವ ಆರು ಪುಟಗಳ ಮನವಿಯನ್ನು ಶಿವಮೊಗ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ ಅವರ ಮೂಲಕ ಸಲ್ಲಿಸಲಾಗಿದೆ.

ಕರ್ನಾಟಕದ ದಸರಾ ನಾಡಿನ ಪ್ರಾಚೀನ ಹಾಗೂ ವೈಭವಯುತ ಸಾಂಸ್ಕೃತಿಕ ಪರಂಪರೆಯಾಗಿದೆ. ವಿಶೇಷವಾಗಿ ಮೈಸೂರು ದಸರಾ ಕಲೆ, ಸಂಸ್ಕೃತಿ, ಇತಿಹಾಸ ಮತ್ತು ರಾಜಪರಂಪರೆಯ ಪ್ರತೀಕವಾಗಿದೆ. ಆದರೆ, ಪರಂಪರೆಯನ್ನು ಗೌರವಿಸುವುದರ ಜತೆಗೆ ವನ್ಯಜೀವಿ ಸಂರಕ್ಷಣೆ, ಪ್ರಾಣಿಗಳ ಕಲ್ಯಾಣ, ಪರಿಸರ ಸಮತೋಲನ ಹಾಗೂ ಸಾರ್ವಜನಿಕ ಸುರಕ್ಷತೆಗೂ ಆದ್ಯತೆ ನೀಡಬೇಕಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸಕ್ರೆಬೈಲು ಆನೆಗಳ ಸಾವಿನ ಬಗ್ಗೆಯೂ ಪ್ರಸ್ತಾಪ

ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರದಲ್ಲಿ ಶೌರ್ಯ ಸೇರಿದಂತೆ ಕಳೆದ ಆರು ತಿಂಗಳಲ್ಲಿ ನಾಲ್ಕು ಆನೆಗಳು ಮೃತಪಟ್ಟಿರುವುದು ಹಾಗೂ ಶಿವಮೊಗ್ಗದ ಸಿಂಹಧಾಮದಲ್ಲಿ ನಾಲ್ಕು ಸಿಂಹದ ಮರಿಗಳು ಮೃತಪಟ್ಟಿರುವುದು ಮಲೆನಾಡಿನ ವನ್ಯಜೀವಿ ಪ್ರೇಮಿಗಳಲ್ಲಿ ಆತಂಕ ಮತ್ತು ನೋವು ಮೂಡಿಸಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಆನೆಗಳ ಆರೋಗ್ಯ, ಪೋಷಣೆ ಮತ್ತು ಸೂಕ್ತ ಪಶುವೈದ್ಯಕೀಯ ಆರೈಕೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವನ್ನೂ ಒತ್ತಿಹೇಳಲಾಗಿದೆ.

ದಸರಾ ಮೆರವಣಿಗೆಯಲ್ಲಿ ಆನೆಗಳನ್ನು ಬಳಸುವ ಸಂದರ್ಭದಲ್ಲಿ ಉಂಟಾಗಬಹುದಾದ ಶಬ್ದ, ಜನಸಂದಣಿ, ಪಟಾಕಿ, ತೀವ್ರ ಬೆಳಕು, ಮಾಧ್ಯಮಗಳ ಚಿತ್ರೀಕರಣ ಹಾಗೂ ಇತರ ಒತ್ತಡಕಾರಿ ಪರಿಸ್ಥಿತಿಗಳು ಆನೆಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದ ಪ್ರಾಣಿಗಳ ಕಲ್ಯಾಣದ ಜತೆಗೆ ಸಾರ್ವಜನಿಕರ ಸುರಕ್ಷತೆಯ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಆನೆಗಳ ಬದಲಿಗೆ ತಾಂತ್ರಿಕ ಪ್ರತಿರೂಪಗಳ ಬಳಕೆಗೆ ಸಲಹೆ

ಜೀವಂತ ಆನೆಗಳ ಬದಲಿಗೆ ಅತ್ಯಾಧುನಿಕ ಯಾಂತ್ರಿಕ ಆನೆಗಳು, ಕಲಾತ್ಮಕ ಪ್ರತಿಕೃತಿಗಳು, ಪ್ರೊಜೆಕ್ಷನ್ ಹಾಗೂ ಆಗ್ಮೆಂಟೆಡ್ ರಿಯಾಲಿಟಿಯಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ದಸರಾ ಮೆರವಣಿಗೆಯ ವೈಭವವನ್ನು ಮುಂದುವರಿಸಬಹುದು ಎಂದು ಸಂಘಟನೆಗಳು ಸಲಹೆ ನೀಡಿವೆ. ಇದರಿಂದ ಸಂಸ್ಕೃತಿಯ ಸಂಭ್ರಮವನ್ನು ಉಳಿಸಿಕೊಂಡು ಪ್ರಾಣಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ.

ಆನೆಗಳ ದಾಖಲೆಗಳ ಪರಿಶೀಲನೆಗೆ ಆಗ್ರಹ

ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960, Performing Animals (Registration) Rules, 2001 ಹಾಗೂ Captive Elephant (Transfer or Transport) Rules, 2024ರ ಕಾನೂನು ಮತ್ತು ಪ್ರಾಣಿಕಲ್ಯಾಣದ ತತ್ವಗಳನ್ನು ಆಧರಿಸಿ ಮನವಿ ಸಲ್ಲಿಸಲಾಗಿದೆ.

ದಸರಾ ಮೆರವಣಿಗೆಯಲ್ಲಿ ಆನೆಗಳ ಬಳಕೆಯನ್ನು ಹಂತ ಹಂತವಾಗಿ ನಿಲ್ಲಿಸಲು ರಾಜ್ಯಮಟ್ಟದ ನೀತಿ ರೂಪಿಸಬೇಕು. ಈ ಕುರಿತು ಅರಣ್ಯ ಇಲಾಖೆ, ಪ್ರಾಣಿಗಳ ಕಲ್ಯಾಣ ಮಂಡಳಿ, ಪಶುವೈದ್ಯಕೀಯ ತಜ್ಞರು, ಆನೆ ಸಂರಕ್ಷಣಾ ತಜ್ಞರು ಹಾಗೂ ಪ್ರಾಣಿಕಲ್ಯಾಣ ಸಂಸ್ಥೆಗಳ ಅಭಿಪ್ರಾಯ ಪಡೆದು ಸಮಗ್ರ ವರದಿ ಸಿದ್ಧಪಡಿಸಬೇಕು ಎಂದು ಒತ್ತಾಯಿಸಲಾಗಿದೆ.

ಅಲ್ಲದೆ, ಮೆರವಣಿಗೆಯಲ್ಲಿ ಬಳಸುವ ಆನೆಗಳ ಮಾಲೀಕತ್ವ ಪ್ರಮಾಣಪತ್ರ, ಮೈಕ್ರೋಚಿಪ್ ಅಥವಾ ಗುರುತಿನ ದಾಖಲೆ, ಆರೋಗ್ಯ ಪ್ರಮಾಣಪತ್ರ, ವೈದ್ಯಕೀಯ ದಾಖಲೆ, ತರಬೇತಿ ಮತ್ತು ಸಾಗಣೆ ದಾಖಲೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು. ಕಾನೂನಿನ ಪ್ರಕಾರ ಅಗತ್ಯವಿರುವ ನೋಂದಣಿ, ಅನುಮತಿ ಹಾಗೂ ಸಾಗಣೆ ಅಧಿಕೃತ ದಾಖಲೆಗಳಿಲ್ಲದೆ ಯಾವುದೇ ಆನೆಯನ್ನು ಕಾರ್ಯಕ್ರಮಕ್ಕೆ ಕರೆತರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಮೆರವಣಿಗೆಯಲ್ಲಿ ಪಟಾಕಿ, ಸಿಡಿಮದ್ದು, ಅತಿಯಾದ ಶಬ್ದ ಹಾಗೂ ಆನೆಗಳಿಗೆ ಕಿರಿಕಿರಿ ಉಂಟುಮಾಡುವ ಬೆಳಕಿನ ಬಳಕೆಯಿಂದ ಅವುಗಳನ್ನು ದೂರವಿಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

‘ಪರಂಪರೆ ಉಳಿಯಲಿ, ಪ್ರಾಣಿಗಳ ಮೇಲಿನ ಒತ್ತಡ ಕಡಿಮೆಯಾಗಲಿ’ ಎಂಬ ಆಶಯದೊಂದಿಗೆ ದಸರಾ ಆಚರಣೆಯಲ್ಲಿ ಬದಲಾವಣೆ ತರುವ ಮೂಲಕ ವನ್ಯಜೀವಿ ಸ್ನೇಹಿ ಸಾಂಸ್ಕೃತಿಕ ಉತ್ಸವಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಮಲೆನಾಡು ವನ್ಯಜೀವಿ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಶಿವಮೊಗ್ಗ ನಗರ ಪರಿಸರಪ್ರೇಮಿಗಳ ಒಕ್ಕೂಟ ಮನವಿ ಮಾಡಿವೆ.

Stop Live Elephants in Dasara Processions: Petition Submitted in Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close