SUDDILIVE || SHIVAMOGGA
ವಿವಿಯಲ್ಲಿ ಕೆಪಿಎಸ್‌ಸಿ ಮಾದರಿ ಹಗರಣ: ಸಿಐಡಿ ತನಿಖೆಗೆ ಡಿ.ಎಸ್. ಅರುಣ್ ಆಗ್ರಹ-KPSC model scam at university: DS Arun demands CID investigation
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ಹಾಗೂ ಅಂಕಪಟ್ಟಿ ಅಕ್ರಮದ ಆರೋಪಗಳು ಕೆಪಿಎಸ್‌ಸಿ ಮಾದರಿಯ ಹಗರಣದ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ಸಮಗ್ರ ಸಿಐಡಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಆಗ್ರಹಿಸಿದರು.
ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ವಿಶ್ವವಿದ್ಯಾಲಯವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಮೂರು ತಿಂಗಳ ಹಿಂದೆ ಡಿಜಿಟಲ್ ಮೌಲ್ಯಮಾಪನದ ಸಾಧಕ-ಬಾಧಕಗಳ ಕುರಿತು ಮಾಹಿತಿ ಕೋರಿ ಕುಲಸಚಿವರಿಗೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು.
ಈ ನಡುವೆ ಸಮಿತಿ ರಚಿಸಿ ವರದಿ ಪಡೆಯಲಾಗಿದೆ. ಸೆ.30ರಂದು ನಡೆಯಬೇಕಿದ್ದ ಸಿಂಡಿಕೇಟ್ ಸಭೆಯನ್ನು ಹಿಂದಿನ ದಿನವೇ ಮುಂದೂಡಲಾಗಿದೆ. ಇದರ ಹಿಂದೆ ಯಾವುದೋ ಷಡ್ಯಂತ್ರ ನಡೆದಿರುವ ಅನುಮಾನವಿದೆ ಎಂದು ಅರುಣ್ ಆರೋಪಿಸಿದರು.
ಸಮಿತಿಯ ವರದಿಯಲ್ಲಿ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಹಲವು ನ್ಯೂನತೆಗಳನ್ನು ಗುರುತಿಸಲಾಗಿದೆ. 2025ರ ಜ.7ರಂದು ಡಿಜಿಟಲ್ ಮೌಲ್ಯಮಾಪನ ಆರಂಭವಾಗಿದ್ದು, ಏ.19ರಂದು ಕುಲಪತಿಯವರೇ ಸಮಿತಿ ರಚಿಸಿದ್ದರು. ಆಗಲೂ ಸಮಿತಿ ಕೆಲವು ಆಕ್ಷೇಪಗಳನ್ನು ವ್ಯಕ್ತಪಡಿಸಿತ್ತು ಎಂದು ತಿಳಿಸಿದರು.
ಸಮಿತಿ ವರದಿ ಪ್ರಕಾರ, ಒಂದೇ ವರ್ಷಕ್ಕೆ ಖಾಸಗಿ ಕಂಪನಿಗೆ ಸುಮಾರು ₹2.94 ಕೋಟಿ ಹೆಚ್ಚುವರಿ ಹಣ ನೀಡಲಾಗಿದೆ. ಮೌಲ್ಯಮಾಪನ ಕಾರ್ಯ ಸಿಸಿ ಕ್ಯಾಮೆರಾ ನಿಗಾದಲ್ಲಿ ನಡೆದಿಲ್ಲ. ಸ್ಕ್ಯಾನಿಂಗ್ ಸಮರ್ಪಕವಾಗಿ ನಡೆದಿಲ್ಲ ಹಾಗೂ ಡಿಜಿಟಲ್ ಸಹಿಯೂ ಇಲ್ಲ ಎಂಬ ಅಂಶಗಳು ವರದಿಯಲ್ಲಿ ಉಲ್ಲೇಖವಾಗಿವೆ ಎಂದು ಅರುಣ್ ಹೇಳಿದರು.
ಡಿಜಿಟಲ್ ಮೌಲ್ಯಮಾಪನಕ್ಕೆ ಸುಮಾರು ₹8 ಕೋಟಿ ವೆಚ್ಚ ಮಾಡಲಾಗಿದೆ. ವಿಶ್ವವಿದ್ಯಾಲಯದ ಪರೀಕ್ಷಾ ಶುಲ್ಕದ ವೆಚ್ಚದಲ್ಲಿ ಉಳಿತಾಯವಾಗುತ್ತಿದ್ದು, ಹಿಂದಿನ ವರ್ಷ ಸುಮಾರು ₹20 ಕೋಟಿ ಉಳಿತಾಯವಾಗಿತ್ತು. ಆ ಹಣವನ್ನು ಖರ್ಚು ಮಾಡುವ ಉದ್ದೇಶದಿಂದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ಜಾರಿಗೆ ತರಲಾಗಿದೆಯೇ ಎಂಬ ಅನುಮಾನವಿದೆ ಎಂದು ಅವರು ಆರೋಪಿಸಿದರು.
ಇದೀಗ ಅಂಕಪಟ್ಟಿಗಳಲ್ಲಿ ಗೊಂದಲ ಉಂಟಾಗಿದ್ದು, ಅಂಕ ನೀಡುವಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರತಿ ವಿಷಯಕ್ಕೆ ₹10 ಸಾವಿರದಂತೆ ಹಣ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ನೀಡುವುದು ಹಾಗೂ ಉತ್ತೀರ್ಣಗೊಳಿಸುವ ಆರೋಪಗಳೂ ಕೇಳಿಬಂದಿವೆ. ಇದು ಕೆಪಿಎಸ್‌ಸಿ ಮಾದರಿಯ ಹಗರಣದಂತಿದೆ ಎಂದು ಅರುಣ್ ಹೇಳಿದರು.
ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಗೆ ಕಾರಣರಾದವರು ಸೇರಿದಂತೆ ಈವರೆಗಿನ ಸಂಪೂರ್ಣ ಬೆಳವಣಿಗೆಯ ಬಗ್ಗೆ ಸಿಐಡಿ ತನಿಖೆ ನಡೆಸಬೇಕು. ಸ್ಥಳೀಯ ತನಿಖೆಯ ಮೇಲೆ ಒತ್ತಡ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರತ್ಯೇಕ ತನಿಖಾ ತಂಡದ ಮೂಲಕ ಸಮಗ್ರ ತನಿಖೆ ನಡೆಸುವುದು ಅಗತ್ಯ ಎಂದು ಅವರು ಒತ್ತಾಯಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಡಿಜಿಟಲ್ ಮೌಲ್ಯಮಾಪನದಿಂದ ಹಿಡಿದು ಅಂಕಪಟ್ಟಿ ಅಕ್ರಮದವರೆಗಿನ ಎಲ್ಲ ವಿಚಾರಗಳನ್ನು ತನಿಖೆಯ ವ್ಯಾಪ್ತಿಗೆ ತರಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಎಂದು ಅರುಣ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್. ದತ್ತಾತ್ರಿ, ಮಾಲತೇಶ್, ಎನ್.ಕೆ. ಜಗದೀಶ್, ಈಶ್ವರಪ್ಪ ಹಾಗೂ ಮಂಜುನಾಥ್, ಚಂದ್ರಶೇಖರ್ ಉಪಸ್ಥಿತರಿದ್ದರು.
