SUDDILIVE || SHIVAMOGGA
ಸುಹೇಲ್ ಮಾಮನ ವಿರುದ್ಧ ಎಫ್ಐಆರ್-FIR against Suhail Mama
ಶಿವಮೊಗ್ಗ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಮಾರಕ ಆಯುಧಗಳೊಂದಿಗೆ ವಿಡಿಯೋ (ರೀಲ್ಸ್) ಮಾಡಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟುಮಾಡಿದ್ದ ಯುವಕನ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಗಿಗುಡ್ಡದ 7ನೇ ಕ್ರಾಸ್ ನಿವಾಸಿ ಮಹಮ್ಮದ್ ಸೋಹೇಲ್ ಅಲಿಯಾಸ್ ಸುಹೇಲ್ ಮಾಮ (26) ಎಫ್‌ಐಆರ್‌ಗೊಳಗಾದ ಆರೋಪಿ.
ಘಟನೆಯ ವಿವರ: ಸೆಪ್ಟೆಂಬರ್ 23ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI) ಕೃಷ್ಣಮೂರ್ತಿ ಹಾಗೂ ಸಿಬ್ಬಂದಿ ರಾಗಿಗುಡ್ಡ ಸರ್ಕಲ್ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದಾಗ, ಇನ್‌ಸ್ಟಾಗ್ರಾಂ ಖಾತೆಯೊಂದರಲ್ಲಿ ಯುವಕನೊಬ್ಬ ಮಾರಕ ಆಯುಧಗಳನ್ನು ಪ್ರದರ್ಶಿಸುತ್ತಿರುವ ಕುರಿತು ಸಾರ್ವಜನಿಕರಿಂದ ಮಾಹಿತಿ ಲಭಿಸಿದೆ.
ಮಾಹಿತಿಯನ್ನಾಧರಿಸಿ ಪರಿಶೀಲಿಸಿದಾಗ, 'md_suhail_043' ಎಂಬ ಇನ್‌ಸ್ಟಾಗ್ರಾಂ ಐಡಿಯಲ್ಲಿ ಆರೋಪಿಯು ಒಂದು ಕೈಯಲ್ಲಿ ಗನ್ ಮತ್ತೊಂದು ಕೈಯಲ್ಲಿ ಡ್ರ್ಯಾಗರ್ ಹಿಡಿದುಕೊಂಡು, ಹಿನ್ನೆಲೆಯಲ್ಲಿ ಬೆದರಿಕೆ ಹಾಕುವ ರೀತಿಯ ಹಿಂದಿ ಸಂಭಾಷಣೆ ("ಹಮ್ ಆಂಕೊ ಸೆ ಸುರ್ಮಾ ನಹಿ ಚುರಾಕೆ, ಹಮ್ ಅಂಕೆ ಹಿ ಚುರಾ ಲೇತೆ ಹೈನ್...") ಸೇರಿಸಿ 11 ಸೆಕೆಂಡ್‌ಗಳ ವಿಡಿಯೋ ಪೋಸ್ಟ್ ಮಾಡಿರುವುದು ಕಂಡುಬಂದಿದೆ.
ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಹಾಗೂ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ರೀಲ್ಸ್ ಹಂಚಿಕೊಂಡ ಹಿನ್ನೆಲೆಯಲ್ಲಿ, ಪೊಲೀಸರು ಸ್ವಯಂಪ್ರೇರಿತವಾಗಿ (Suo Moto) ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ಆಯುಧ ಕಾಯ್ದೆ 1959 (Indian Arms Act) ಕಲಂ 25(1)(a) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
FIR against Suhail Mama
