ಸುದ್ದಿಲೈವ್/ಶಿವಮೊಗ್ಗ
ಮುಸಿಯಾ ದಾಳಿಯಿಂದ ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೂಡೂರು ಸಮೀಪದ ಐದನೇ ಮೈಲಿಕಲ್ಲು ಬಳಿಯಲ್ಲಿ ನಡೆದಿದೆ.
ಲೋಕೇಶ್ ಹೊಸಕೊಪ್ಪ ಎಂಬುವವರಿಗೆ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹನುಮಾನ್ ಲಂಗೂರ್ ಎಂದು ಕರೆಯಲ್ಪಡುವ ಮುಸಿಯಾಗಳು ಈ ಭಾಗದಲ್ಲಿ ಹೆಚ್ಚು ತೊಂದರೆ ಕೊಡುತ್ತಿದೆ ಎಂದು ಸ್ಥಳೀಯರು ಆರೋಪಿಸುತಿದ್ದಾರೆ.
ನಡೆದಿದ್ದೇನು..???
ಐದನೇ ಮೈಲಿಕಲ್ಲು ಬಸ್ ನಿಲ್ದಾಣದ ಬಳಿಯಲ್ಲಿ ಕಬ್ಬಿನ ಜ್ಯೂಸ್ ಅಂಗಡಿಯನ್ನಿಟ್ಟುಕೊಂಡಿರುವ ಲೋಕೇಶ್ ಭಾನುವಾರ ಬೆಳಿಗ್ಗೆ ಅಂಗಡಿ ತೆರೆಯಲು ಹೋದಾಗ ಮರದಲ್ಲಿ ಕುಳಿತಿದ್ದ ಮುಸಿಯಾ ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ.ಕೈ ಮತ್ತು ಕಾಲುಗಳನ್ನು ಕಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ಆಯನೂರು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಹತ್ತು ದಿನಗಳ ಹಿಂದೆ ಐದನೇ ಮೈಲಿಕಲ್ಲು ಬಸ್ ನಿಲ್ದಾಣದಲ್ಲಿದ್ದ ವಿದ್ಯಾರ್ಥಿಗಳ ಮೇಲೂ ಮುಸಿಯಾ ದಾಳಿ ಮಾಡಿತ್ತು , ಬಸ್ ನಿಲ್ದಾಣದಲ್ಲಿ ಬಸ್ ಕಾಯುವವರು ಆತಂಕ ಪಡುವಂತಹ ವಾತಾವರಣ ನಿರ್ಮಾಣವಾಗಿದೆ ಕೂಡಲೇ ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಲಿ ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ-https://suddilive.in/archives/16106