ಸುದ್ದಿಲೈವ್/ಸೊರಬ
ಏಸೂರು ಕೊಟ್ಟರೂ ಈಸೂರು ಬಿಡೆವು ಎಂಬ ಘೋಷಣೆಯೊಂದಿಗೆ ಸ್ವಯಂ ಪ್ರೇರಿತರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕೀರ್ತಿ ಈಸೂರು ಗ್ರಾಮಸ್ಥರಿಗೆ ಸಲ್ಲುತ್ತದೆ. ಈಸೂರಿನ ಸ್ವಾತಂತ್ರ್ಯ ಹೋರಾಟ ರೋಮಾಂಚನಕಾರಿಯಾಗಿದ್ದು, ಇತಿಹಾಸದ ಪುಟದಲ್ಲಿ ದಾಖಲಾಗಿದೆ ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಹೇಳಿದರು.
ಗುರುವಾರ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಭಾರತ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಈಸೂರಿನತ್ತ ನಮ್ಮ ಪಯಣ ಬೈಕ್ ರ್ಯಾಲಿಗೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿಯೇ ಮೊದಲ ಸ್ವಾತಂತ್ರ್ಯ ಘೋಷಣೆ ಮಾಡಿಕೊಂಡು ಗ್ರಾಮದ ವೀರಭದ್ರ ದೇವಸ್ಥಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಕೆಚ್ಚೆದೆ ತೋರಿದರು. ಇಂತಹ ಗ್ರಾಮದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆ ಎನಿಸುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈಸೂರು ಗ್ರಾಮದತ್ತ ಚಿತ್ತ ಹರಿಸಬೇಕು. ಈಸೂರಿನ ಹೋರಾಟವು ಚರಿತ್ರೆಯ ಪುಟದಲ್ಲಿ ಅಚ್ಚಳಿಯದೇ ಉಳಿಯಬೇಕು. ಈಗಾಗಲೇ ಗ್ರಾಮದಲ್ಲಿ ಈಸೂರಿನ ಹೋರಾಟಗಾರರ ಸ್ಮಾರಕವನ್ನು ನಿರ್ಮಿಸಲಾಗಿದೆ.
ಆದರೆ, ಸ್ಮಾರಕದ ಮುಂಭಾಗ ಅಥವಾ ಒಳಾಂಗಣದಲ್ಲಿ ಹೋರಾಟಗಾರರ ಪ್ರತಿಮೆಯನ್ನು ನಿರ್ಮಿಸಬೇಕು. ಜೊತೆಗೆ, ದೇಶದಲ್ಲಿ ಮೊದಲು ಸ್ವಾತಂತ್ರ್ಯ ಭಾವುಟ ಹಾರಿಸಿದ ಗ್ರಾಮದಲ್ಲಿ ದೇಶದಲ್ಲೇ ಅತಿ ಎತ್ತರದ ಧ್ವಜ ಸ್ಥಂಭ ಸ್ಥಾಪಿಸಬೇಕಾದ ಕಾರ್ಯ ಸರ್ಕಾರದಿಂದ ಆಗಬೇಕಿದೆ. 1943ರ ಮಾರ್ಚ್ 8ರಂದು ಗ್ರಾಮದ ಗುರಪ್ಪ ಕಮ್ಮಾರ, ಜೀನಳ್ಳಿ ಮಲ್ಲಪ್ಪ, 9ರಂದು ಸೂರ್ಯನಾರಾಯಣಾಚಾರ್, ಬಡಕಳ್ಳಿ ಹಾಲಪ್ಪ ಹಾಗೂ 10ರಂದು ಗೌಡ್ರು ಶಂಕರಪ್ಪ ಅವರನ್ನು ಬ್ರಿಟೀಷ್ ಸರ್ಕಾರ ಗಲ್ಲಿಗೇರಿಸಿತು. ಆದ್ದರಿಂದ ಮಾರ್ಚ್8ರಿಂದ 10ರವರೆಗೆ ದೇಶದಲ್ಲಿಯೇ ಕರಾಳದಿನವನ್ನಾಗಿ ಆಚರಿಸಬೇಕು. ಗ್ರಾಮಕ್ಕೆ ಪ್ರಧಾನ ಮಂತ್ರಿ ಒಮ್ಮೆಯಾದರು ಭೇಟಿ ನೀಡಬೇಕು ಎಂದು ಆಗ್ರಹಿಸಿದರು.
ಬೈಕ್ ರ್ಯಾಲಿಗೆ ಚಾಲನೆ ನೀಡಿದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರ ತ್ಯಾಗ ಮತ್ತು ಬಲಿದಾನವಿದ್ದು, ಅಂತಹ ಮಹಾತ್ಮರ ಮಾರ್ಗದರ್ಶನ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ದೇಶದಲ್ಲಿಯೇ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚುವ ಕಾರ್ಯವನ್ನು ಈಸೂರಿನ ಸ್ವಾತಂತ್ರ್ಯ ಹೋರಾಟಗಾರರು ಮಾಡಿದರು. ಅವರ ಹೆಸರು ಇತಿಹಾಸದ ಪುಟದಲ್ಲಿ ಅಜರಾಮರವಾಗಿದೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅಂತಹ ಹೋರಾಟಗಾರರನ್ನು ನೆನಪಿಸಿಕೊಳ್ಳಬೇಕು. ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯಿಂದ ಈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದಿಂದ ಆರಂಭವಾದ ಬೈಕ್ ರ್ಯಾಲಿ ಮುಖ್ಯರಸ್ತೆ ಮಾರ್ಗವಾಗಿ ಶಿರಾಳಕೊಪ್ಪ, ಶಿಕಾರಿಪುರ ಮಾರ್ಗವಾಗಿ ಈಸೂರು ತಲುಪಿತು. ನಂತರ ಹುತಾತ್ಮ ಸ್ಮಾರಕದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಸಮಿತಿಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ದತ್ತಾತ್ರೇಯ, ಗಣೇಶ ಓಂ ಪಿಕಲ್ಸ್, ರವಿಕುಮಾರ್, ಹರ್ಷ ಗುಡಿಗಾರ್, ಆದಿತ್ಯ, ವಿಠ್ಠಲ, ಸಾತ್ವಿಕ, ಕಿರಣ, ಅಮೋಘ, ಶೋಭರಾಜ ಮಂಚಿ, ಕೌಶಿಕ ಗೌಡ ಸೇರಿದಂತೆ ಇತರರಿದ್ದರು.
ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಭಾರತ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಈಸೂರಿನತ್ತ ನಮ್ಮ ಪಯಣ ಬೈಕ್ ರ್ಯಾಲಿಗೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಚಾಲನೆ ನೀಡಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ