Girl in a jacket

ನ.21 ರಿಂದ ಅಂತರ ರಾಜ್ಯ ಮಹಿಳಾ ಕ್ರಿಕೆಟ್‌ ಪಂದ್ಯಾವಳಿ



ಸುದ್ದಿಲೈವ್/ಶಿವಮೊಗ್ಗ

15 ವರ್ಷದೊಳಗಿನ ಅಂತರ ರಾಜ್ಯ ಮಹಿಳಾ ಕ್ರಿಕೆಟ್‌ ಪಂದ್ಯಾವಳಿ ನ. 21ರಿಂದ 29ರ ವರೆಗೆ ನಗರದಲ್ಲಿ ನಡೆಯಲಿವೆ ಎಂದು ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌. ಅರುಣ್‌ ಹೇಳಿದರು. 

ಇಲ್ಲಿನ ನವುಲೆ ರಸ್ತೆಯಲ್ಲಿರುವ ಕೆ.ಎಸ್‌.ಸಿ.ಎ ಕ್ರೀಡಾಂಗಣ ಮತ್ತು ಜೆ.ಎನ್‌.ಎನ್‌.ಸಿ.ಇ. ಶಿವಮೊಗ್ಗ ಟರ್ಫ್‌ ಅಂಕಣಗಳಲ್ಲಿ ಪಂದ್ಯಗಳು ನಡೆಯಲಿವೆ. ರಾಷ್ಟ್ರದ ವಿವಿಧ ರಾಜ್ಯಗಳ 36 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತವೆ. 36 ತಂಡಗಳನ್ನು ತಲಾ 6 ತಂಡಗಳಂತೆ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಪೈಕಿ (ಎ) ಗುಂಪಿನ ಬಿಹಾರ, ತಮಿಳುನಾಡು, ಹರಿಯಾಣ, ಕೇರಳ, ನಾಗಾಲ್ಯಾಂಡ್‌ ಮತ್ತು ಹೈದ್ರಾಬಾದ್‌ ಸೇರಿ 6 ತಂಡಗಳ ಪಂದ್ಯಾವಳಿಗಳು ಮಾತ್ರ ಇಲ್ಲಿ ನಡೆಯಲಿವೆ. ಪ್ರತಿ ದಿನ ಮೂರು ಪಂದ್ಯಗಳಂತೆ ಒಟ್ಟು 15 ಪಂದ್ಯಗಳು ನಡೆಯಲಿವೆ. ಬಿ.ಸಿ.ಸಿ.ಐ. ತೀರ್ಪುಗಾರರು ಮತ್ತು ಪಂದ್ಯ ವೀಕ್ಷಕರ ನೇತೃತ್ವದಲ್ಲಿ  ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯನ್ನು ಆಯೋಜಿಸಲು ಶಿವಮೊಗ್ಗ ವಲಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.ಕರ್ನಾಟಕ ರಾಜ್ಯ ಮಹಿಳಾ ತಂಡವು ಬಿ ಗುಂಪಿನಲ್ಲಿದ್ದು ಡೆಹ್ರಾಡೂನ್‌ನಲ್ಲಿ ಪಂದ್ಯವಾಡಲಿದೆ ಎಂದರು. 

ಶಿವಮೊಗ್ಗದ ಕೆ.ಎಸ್‌.ಸಿ.ಎ. ಮೈದಾನ ಅಭಿವೃದ್ಧಿಗೆ ಎಲ್ಲ ರೀತಿಯಿಂದ ಪ್ರಯತ್ನ ಮಾಡಲಾಗುವುದು. ಒಳಾಂಗಣ ಕ್ರೀಡಾಂಗಣಗಳನ್ನು ಸಹ ಮುಂದಿನ ದಿನಗಳಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಎಚ್‌.ಎಸ್‌. ಸದಾನಂದ, ಎನ್‌. ರಾಜೇಂದ್ರ ಕಾಮತ್‌, ಡಿ.ಆರ್‌. ನಾಗರಾಜ, ಸುಬ್ರಹ್ಮಣ್ಯ, ಗೋಪಾಲಕೃಷ್ಣ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close