ಸುದ್ದಿಲೈವ್/ಶಿರಾಳಕೊಪ್ಪ
ಶಿರಾಳಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಪ್ರಶಾಂತ್ ಅವರ ಖಡಕ್ ಕಾರ್ಯಾಚರಣೆಯ ಹಿನ್ನಲೆಯಲ್ಲಿ ಅದ್ಭುತ ಪ್ರಕರಣವೊಂದನ್ನ ಬೆಧಿಸಲಾಗಿದೆ. ಅಪರೂಪದ ಪ್ರಕರಣಗಳಲ್ಲಿ ಕಳ್ಳರು ಪತ್ತೆಯಾಗಿದ್ದಾರೆ. ನಕಲಿ ಚಿನ್ನದ ನಾಣ್ಯಗಳಲ್ಲಿ ಕಳ್ಳರು ಪತ್ತೆಯಾಗೋದೇ ಅಪರೂಪ. ಅಂಥಹ ಅಪರೂಪದ ಪ್ರಕರಣವನ್ನ ಪಿಎಸ್ಐ ಪ್ರಶಾಂತ್ ಅವರ ತಂಡ ಬೇಧಿಸಿದೆ.
ದಿನಾಂಕಃ 29-12-2024 ರಂದು ಹಾಸನಜಿಲ್ಲೆಯ , 52 ವರ್ಷ, ಇಂಟಿತೊಳಲು ಗ್ರಾಮದ ಕಲ್ಲೇಶ್ಎಂಬುವರಿಗೆ ಧರ್ಮಸ್ಥಳದಲ್ಲಿ ಚಂದ್ರು ಎಂಬ ವ್ಯಕ್ತಿಯ ಪರಿಚಯವಾಗಿದ್ದು, ಆತನು ದಿನಾಂಕಃ 06-01-2025 ರಂದು ಕಲ್ಲೇಶ್ ರವರಿಗೆ ಫೋನ್ ಮಾಡಿ, ನಮ್ಮ ಮನೆಯ ಪಕ್ಕದ ಜಾಗದಲ್ಲಿ ಪಾಯ ತೆಗೆಯುವಾಗ 3 ಕೆ.ಜಿ. ಬಂಗಾರದ ನಾಣ್ಯಗಳು ಸಿಕ್ಕಿರುತ್ತವೆ. ಅವುಗಳನ್ನು ಮಾರಾಟ ಮಾಡುತ್ತೇವೆಂದು ಹೇಳಿದ್ದನು,
ಆತನ ಮಾತು ನಂಬಿ ಕಲ್ಲೇಶನು ಶಿರಾಳಕೊಪ್ಪಕ್ಕೆ ಬಂದಿದ್ದು, ಚಂದ್ರು ಮತ್ತು ನವೀನ್ ಇಬ್ಬರು ನೀಡಿದ ಒಂದು ಬಂಗಾರದ ನಾಣ್ಯವನ್ನು ಪಡೆದುಕೊಂಡು ತನ್ನ ಊರಿಗೆ ವಾಪಾಸ್ ಹೋಗಿ ಪರಿಶೀಲಿಸಿದಾಗ ಅದು ಅಸಲಿ ಚಿನ್ನದ ನಾಣ್ಯವಾಗಿತ್ತು. ನಂತರ ದಿನಾಂಕಃ 08-01-2025 ರಂದು ಶಿರಾಳಕೊಪ್ಪಕ್ಕೆ ಬಂದು ಚಂದ್ರು ಮತ್ತು ನವೀನ್ ಇಬ್ಬರಿಗೆ ಐದು ಲಕ್ಷ ಹಣವನ್ನು ನೀಡಿ ಅವರಿಂದ 800 ಗ್ರಾಂ ತೂಕದ ನಾಣ್ಯಗಳನ್ನು ತೆಗೆದುಕೊಂಡು ಹೋಗಿ ಅವುಗಳನ್ನು ಪರೀಕ್ಷೆ ಮಾಡಿಸಿದಾಗ ಇವು ನಕಲಿ ಬಂಗಾರದ ನಾಣ್ಯಗಳೆಂದು ತಿಳಿದು ಬಂದಿತ್ತು.
ತನಗೆ ಬಂಗಾರದ ನಾಣ್ಯಗಳೆಂದು ಹೇಳಿ ನಕಲಿ ನಾಣ್ಯಗಳನ್ನು ನೀಡಿ ಹಣವನ್ನು ಪಡೆದು ಮೋಸ ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿಯ ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ ಜಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಕೇಶವ್, ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ ಮತ್ತು ರುದ್ರೇಶ್ ಸಿಪಿಐ ಶಿಕಾರಿಪುರ ವೃತ್ತ ರವರ ಮೇಲ್ವಿಚಾರಣೆಯಲ್ಲಿ, ಪ್ರಶಾಂತ್ ಪಿಎಸ್ಐ ಶಿರಾಳಕೊಪ್ಪ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳಾದ ಸಿ.ಹೆಚ್.ಸಿ ಸಂತೋಷ್ ಕುಮಾರ್, ಸಿಪಿಸಿ ರವರುಗಳಾದ ಸಲ್ಮಾನ್, ರಾಕೇಶ್, ಕಾರ್ತಿಕ್, ಕಾಂತೇಶ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ವಿಭಾಗದ ಸಿಬ್ಬಂಧಿಗಳಾದ ಸಿ.ಹೆಚ್.ಸಿ ಗುರುರಾಜ್, ಇಂದ್ರೇಶ್ ಹಾಗೂ ವಿಜಯ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ತನಿಖಾ ತಂಡವು ದಿನಾಂಕಃ 29-01-2025 ರಂದು ಪ್ರಕರಣದ ಆರೋಪಿ ಚಂದ್ರಪ್ಪ, 48 ವರ್ಷ, ತತ್ತೂರು ಗ್ರಾಮ, ಸೊರಬ ತಾಲ್ಲೂಕು, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಲಾಗಿದೆ, ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿದ ರೂ 5,00,000/- ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.