ಫೆ.06, 07 : ಜಿಲ್ಲಾ 19 ನೇ ಕನ್ನಡ ಸಾಹಿತ್ಯ ಸಮ್ಮೇಳನ

District President D. Manjunath informed that on behalf of the District Kannada Sahitya Parishad, the District 19th Kannada Sahitya Sammelan has been organized for two days on February 06 and 07 at the Sahitya Village of Gopishettikoppa.

ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ.06 ಮತ್ತು 07 ರ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ 19 ನೇ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಡಿ.ಮಂಜುನಾಥ ತಿಳಿಸಿದರು.

ತೀರ್ಥಹಳ್ಳಿ ತಾಲ್ಲೂಕಿನ ಹಿರಿಯ ಸಾಹಿತಿ ಡಾ.ಜೆ.ಕೆ.ರಮೇಶ್‌ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಮಹಾವೇದಿಕೆಗೆ ಡಾ.ನಾ.ಡಿಸೋಜ ಅವರ  ಸುಮಾರು 4 ಸಾವಿರ ಪ್ರತಿನಿಧಿಗಳು ಸಾಹಿತ್ಯ ಸಮ್ಮೇಳನಕ್ಕೆ ನೊಂದಣಿಯಾಗಿದ್ದು, ಎರಡು ದಿನಗಳ ಊಟೋಪಚಾರದ ಜೊತೆಗೆ ಓಓಡಿ ಸೌಲಭ್ಯ ನೀಡಲಾಗುತ್ತಿದೆ. ಎರಡು ದಿನಗಳಲ್ಲಿ 10 ಕ್ಕು ಹೆಚ್ಚು ಗೋಷ್ಟಿಗಳು ನಡೆಯಲಿದ್ದು, ನಾಡಿನ ಪ್ರಸಿದ್ದ ಸಾಹಿತಿಗಳು, ಚಲನಚಿತ್ರ ನಟರು ಭಾಗವಹಿಸಲಿದ್ದಾರೆ. ಪುಸ್ತಕ ಮಾರಟ ಮಳಿಗೆಗಳ ಜೊತೆಯಲ್ಲಿ ವಿಭಿನ್ನ ಬಗೆಯ 25 ಕ್ಕು ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಶಿಕ್ಷಕಿ ಮೇರಿ ಡಿಸೋಜ ಸಂಗ್ರಹಿಸಿರುವ ಅಮೂಲ್ಯ ನಾಣ್ಯಗಳು ಹಾಗೂ ಶಿವಮೊಗ್ಗ ನಾಗರಾಜ ಅವರ ಸೆರೆ ಹಿಡಿದಿರುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. 

ಫೆ.06 ರ ಗುರುವಾರ ಬೆಳಗ್ಗೆ 09:30 ಕ್ಕೆ ಸಾಹಿತ್ಯ ಗ್ರಾಮದ ಆವರಣದಲ್ಲಿ ಧ್ವಜಾರೋಹಣ ನೆರವೇರಲಿದ್ದು, ಡಿಡಿಪಿಐ ಮಂಜುನಾಥ ಎಸ್.ಆರ್‌ ರಾಷ್ಟ್ರಧ್ವಜ, ವಾರ್ತಾಧಿಕಾರಿ ಆರ್.‌ಮಾರುತಿ ನಾಡಧ್ವಜ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ  ಪರಿಷತ್ತಿನ ಧ್ವಜಾರೋಹಣಗೊಳಿಸಲಿದ್ದಾರೆ. ನಂತರ ಬೆಳಗ್ಗೆ 10:00 ಕ್ಕೆ ಗೋಪಾಳದ ಆನೆ ಸರ್ಕಲ್‌ನಿಂದ ಹೊರಡುವ ಸಮ್ಮೇಳನಾಧ್ಯಕ್ಷರೊಂದಿಗೆ ಸಾಂಸ್ಕೃತಿಕ ನಡಿಗೆಯನ್ನು ರಾಜ್ಯ ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಎಸ್.‌ರವಿಕುಮಾರ್‌ ಮೆರವಣಿಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜೆ.ಪಲ್ಲವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಮೋಹನ್‌ಕುಮಾರ್‌, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಯೋಗೀಶ್‌, ಕುವೆಂಪು ವಿವಿ ಸಿಂಡಿಕೇಟ್‌ ಸದಸ್ಯ ಕೆ.ಪಿ.ಶ್ರೀಪಾಲ್‌, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶರಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ.ಹೆಚ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ಬೆಳಗ್ಗೆ 10:30 ಕ್ಕೆ ನಡೆಯುವ ಸಮ್ಮೇಳನದ ಉದ್ಘಾಟನಾ ಸಮಾರಂಭ ಹಣತೆ ಹಚ್ಚೋಣ ಬನ್ನಿಯಲ್ಲಿ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಸಮ್ಮೇಳನದ ಸ್ಮರಣ ಸಂಚಿಕೆ ಕ್ರಿಯಾಶೀಲತೆ ಒಳನೋಟ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಸರ್ವಾಧ್ಯಕ್ಷರಾದ ಡಾ.ಜೆ.ಕೆ.ರಮೇಶ್‌ ಅವರ 'ಇಂಡಿಯಾದ ಹೊರಗೊಂದು ಹಣಕುʼ ಕೃತಿ ಹಾಗೂ ಬಿ.ಚಂದ್ರೇಗೌಡರ ʼದೇಶಾಂತರ ಕಾದಂಬರಿʼ ಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಲೋಕಾರ್ಪಣೆಗೊಳಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷರಾದ ಡಾ.ಮಹೇಶ್‌ ಜೋಷಿ ದತ್ತಿನಿಧಿ ಸ್ವೀಕಾರ ಮಾಡಲಿದ್ದಾರೆ. ಜಿಲ್ಲಾ 18 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾದ ಡಾ.ಎಸ್‌.ಪಿ.ಪದ್ಮಪ್ರಸಾದ್‌, ಕುವೆಂಪು ವಿವಿ ಕುಲಪತಿ ಡಾ.ಶರತ್‌ ಅನಂತಮೂರ್ತಿ, ಶಾಸಕ ಎಸ್.‌ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ, ವಿಧಾನಪರಿಷತ್ತಿನ ಸದಸ್ಯರಾದ ಎಸ್‌.ಎಲ್.‌ಭೋಜೇಗೌಡ, ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪ ಭಾಗವಹಿಸಲಿದ್ದಾರೆ. ಡಾ.ಜೆ.ಕೆ.ಆರ್‌ ಅವರ ʼಮಲೆಯ ಸೀಮೆಯ ಕಥೆಗಳುʼ, ಪ್ರೊ.ಸತ್ಯನಾರಾಯಣ ಅವರ ಅಂತರಂಗದ ಸುತ್ತ ಹನಿಗವನ ಕೃತಿ, ಡಾ.ಶ್ರೀಪತಿ ಹಳಗುಂದ ಅವರ ವಿಮರ್ಶಾಕೃತಿ ʼಚಿತ್ರ ಚಿಂತನʼ ಮತ್ತು ʼವಿಲೋಚನʼ ಕೃತಿ ಲೋಕಾರ್ಪಣೆಗೊಳ್ಳಲಿದ್ದಾರೆ. 


****************************

ಸಮ್ಮೇಳನದ ವಿಶೇಷತೆಗಳು:


* 4 ಸಾವಿರ ಪ್ರತಿನಿಧಿಗಳ ನೊಂದಣಿ

* 10 ಕ್ಕು ಹೆಚ್ಚು ಗೋಷ್ಟಿಗಳು

* 25 ಕ್ಕು ಹೆಚ್ಚು ಮಳಿಗೆಗಳು

* ನಾಗತಿಹಳ್ಳಿ ಚಂದ್ರಶೇಖರ್‌, ದಿನೇಶ್‌ ಅಮಿನಮಟ್ಟು, ಪುರುಷೋತ್ತಮ ಬಿಳಿಮಲೆ, ವೈ.ಗ.ಜಗದೀಶ್‌ ಭಾಗಿ

* ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮ ಸಂವಾದ

* ವಿವಿಧ ಚಲನಚಿತ್ರ ನಟರು ಭಾಗಿ

* ಸಮ್ಮೇಳನಾಧ್ಯಕ್ಷರೊಂದಿಗೆ ಸಾಂಸ್ಕೃತಿಕ ಹೆಜ್ಜೆ

* ಕ್ರಿಯಾಶೀಲತೆ ಒಳನೋಟ - ಸ್ಮರಣ ಸಂಚಿಕೆ ಲೋಕಾರ್ಪಣೆ

* ಪ್ರತಿನಿಧಿಗಳಿಗೆ ಓಓಡಿ ಸೌಲಭ್ಯ

****************************

ನಂತರ ನಡೆಯುವ ಕವಿಗೋಷ್ಟಿಯಲ್ಲಿ ಸಾಹಿತಿ ವಿಜಯಾದೇವಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಕವಿಗಳು ಭಾಗವಹಿಸಲಿದ್ದಾರೆ. ಸಂಜೆ 04:00 ಕ್ಕೆ ನಡೆಯುವ ಸಮ್ಮೇಳನಾಧ್ಯಕ್ಷರ ಬದುಕು-ಬರಹ ಗೋಷ್ಟಿಯಲ್ಲಿ ಸಾಹಿತಿ ಡಾ.ಎಲ್.ಸಿ.ಸುಮಿತ್ರ ಅಧ್ಯಕ್ಷತೆ ವಹಿಸಲಿದ್ದು, ಜೆ.ಕೆ.ಆರ್‌ ಅವರ ವಿಮರ್ಶಾ ಸಾಹಿತ್ಯ ಕುರಿತು ಭದ್ರಾವತಿಯ ಸಾಹಿತಿ ಪ್ರೊ.ಚಂದ್ರಶೇಖರಯ್ಯ, ಜೆ.ಕೆ.ಆರ್‌ ಪ್ರವಾಸ ಕಥನ-ವ್ಯಕ್ತಿ ಚಿತ್ರಗಳ ಕುರಿತು ತೀರ್ಥಹಳ್ಳಿಯ ಸಾಹಿತಿ ಉಮಾದೇವಿ ಉರಾಳ್‌, ಜನಪದ ಸಾಹಿತ್ಯ ಕುರಿತು ಡಾ.ಬಿ.ಎಂ.ಜಯಶೀಲ, ಹಳೆಗನ್ನಡ ಕಾವ್ಯ ವಿಮರ್ಶೆ ಕುರಿತು ಮೈಸೂರಿನ ಸಾಹಿತಿ ಡಾ.ಸರ್ಜಾಶಂಕರ ಹರಳೀಮಠ ಮಾತನಾಡಲಿದ್ದಾರೆ.

ಸಂಜೆ 06:00 ಕ್ಕೆ ನಡೆಯುವ ಜಾಗತೀಕರಣ ಮತ್ತು ಕನ್ನಡ ಅಸ್ಮಿತೆ ಗೋಷ್ಟಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಪರಿಷತ್ತಿನ ಸದಸ್ಯರಾದ ಡಿ.ಎಸ್.ಅರುಣ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಂಸ್ಕೃತಿ ಕುರಿತಾಗಿ ಸಾಹಿತಿ ಡಾ.ಸರ್ಫ್ರಾಜ್‌ ಚಂದ್ರಗುತ್ತಿ, ಜನಪದ ಕುರಿತು ದಾವಣಗೆರೆ ವಿವಿ ಸಿಂಡಿಕೇಟ್‌ ಸದಸ್ಯೆ ಡಾ.ಜಿ.ಕೆ.ಪ್ರೇಮಾ ಮಾತನಾಡಲಿದ್ದಾರೆ.

ಸಂಜೆ 07:30 ಕ್ಕೆ ನಡೆಯುವ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಜೊತೆಗೆ ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮ ಸಂವಾದ ಸಾದೃಶ್ಯ-ವೈದೃಶ್ಯದಲ್ಲಿ ಚಲನಚಿತ್ರ ನಟ ಗೌರಿಶಂಕರ್.ಎಸ್.ಆರ್.ಜಿ, ಸೈಮಾ ಫಿಲ್ಮಫೇರ್‌ ಪ್ರಶಸ್ತಿ ಪುರಸ್ಕೃತ ಅರ್ಜುನ್‌ ಕುಮಾರ್‌, ಪತ್ರಕರ್ತ ವೈದ್ಯನಾಥ, ರಂಗಕರ್ಮಿ ಡಾ.ಜಿ.ಆರ್.ಲವ, ಸಿನಿಮಾ ಸಂಭಾಷಣೆಕಾರ ಬಿ.ಚಂದ್ರೇಗೌಡ ಭಾಗವಹಿಸಲಿದ್ದಾರೆ.

ಫೆ.07 ರ ಶುಕ್ರವಾರ ಬೆಳಗ್ಗೆ 09:30 ಕ್ಕೆ ಸಾಹಿತ್ಯ ಗ್ರಾಮದ ಆವರಣದಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ.ಎಸ್ ರಾಷ್ಟ್ರಧ್ವಜ, ಬಿಇಓ ರಮೇಶ್ ನಾಡಧ್ವಜ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ  ಪರಿಷತ್ತಿನ ಧ್ವಜಾರೋಹಣಗೊಳಿಸಲಿದ್ದಾರೆ.‌ ಬೆಳಗ್ಗೆ 10:30 ಕ್ಕೆ ನಡೆಯುವ ಗೋಷ್ಟಿಯಲ್ಲಿ ಕನ್ನಡ ಸಾಹಿತ್ಯ : ಈಚಿನ ಕಥನಕ್ರಮ ಗೋಷ್ಟಿಯಲ್ಲಿ ಸಾಹಿತಿ ಡಾ.ಮೇಟಿ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಲಿದ್ದು, ಕಾವ್ಯ ಪ್ರಕಾರ ಕುರಿತು ಅಕ್ಷತಾ ಹುಂಚದಕಟ್ಟೆ, ವಿಮರ್ಶಾ ಸಾಹಿತ್ಯ ಕುರಿತು ಡಾ.ಸಬಿತಾ ಬನ್ನಾಡಿ ಮಾತನಾಡಲಿದ್ದಾರೆ. 

ಬೆಳಗ್ಗೆ 12:30 ಕ್ಕೆ ನಡೆಯುವ ಮಲೆನಾಡು-ಬದುಕಿನ ಸವಾಲು ಗೋಷ್ಟಿಯಲ್ಲಿ ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರಾದ ಡಾ.ಆರ್.‌ಎಂ.ಮಂಜುನಾಥಗೌಡ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಗೋಪಾಲಕೃಷ್ಣ ಬೇಳೂರು ಭಾಗವಹಿಸಲಿದ್ದು, ಅರಣ್ಯ ಒತ್ತುವರಿ ಆಹಾರ ಧಾನ್ಯ ನಿರ್ಲಕ್ಷ್ಯ, ವನ್ಯಪ್ರಾಣಿ-ನಾಗರಿಕ ಸಂಘರ್ಷ ಪರಿಸರ ತಜ್ಞ ಕಲ್ಕುಳಿ ವಿಠ್ಠಲಹೆಗಡೆ ಮಾತನಾಡಲಿದ್ದಾರೆ. ಮಧ್ಯಾಹ್ನ 02:30 ಕ್ಕೆ ನಡೆಯುವ ಕಥೆ ಹೇಖುವೆವು ಕೇಳಿ ಗೋಷ್ಟಿಯಲ್ಲಿ ಪತ್ರಕರ್ತ ಗೋಪಾಲ ಯಡೆಗೆರೆ ಅಧ್ಯಕ್ಷತೆ ವಹಿಸಲಿದ್ದು, ಸೂಡಾ ಅಧ್ಯಕ್ಷ ಹೆಚ್.‌ಎಸ್‌.ಸುಂದರೇಶ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಜಿಲ್ಲೆಯ ವಿವಿಧ ಕಥೆಗಾರರು ಕಥಾವಾಚನ ಮಾಡಲಿದ್ದಾರೆ.

ಸಂಜೆ 04:30 ಕ್ಕೆ ನಡೆಯುವ ಮಾಧ್ಯಮ ಬದ್ಧತೆಗಳು ಗೋಷ್ಟಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಅಧ್ಯಕ್ಷತೆ ವಹಿಸಲಿದ್ದು. ಎಂಎಲ್‌ಸಿ ಡಾ.ಧನಂಜಯ ಸರ್ಜಿ, ಯುವ ಮುಖಂಡರಾದ ನಾಗರಾಜಗೌಡ, ಕೊಲ್ಲೂರು ಮುಕಾಂಬಿಕಾ ದೇವಸ್ಥಾನ ಟ್ರಸ್ಟಿ ರಘುರಾಮ ದೇವಾಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಜಾವಾಣಿ ಉಪಸಂಪಾದಕ ವೈ.ಗ.ಜಗದೀಶ್‌ ಅವರು ವಿದ್ಯುನ್ಮಾನ ವಾಹಿನಿ ಕನ್ನಡದ ಹತ್ಯೆ ಕುರಿತು, ಪ್ರಭುತ್ವ – ಸಾಂಸ್ಕೃತಿಕ ಲಜ್ಜೆ ಕುರಿತು ಹೊಸಪೇಟೆಯ ಸಾಹಿತಿ ಪೀರ್‌ಬಾಷಾ, ಓದು ಯುವಜನತೆ ಕುರಿತು ಸಹ ಪ್ರಾಧ್ಯಾಪಕ ಡಾ.ಬಿ.ಎಲ್.ರಾಜು ಮಾತನಾಡಲಿದ್ದಾರೆ. ಸಂಜೆ 05:30 ಕ್ಕೆ ಕುವೆಂಪು ಸಾಹಿತ್ಯ ವಚನಗಳು ಕುರಿತಾಗಿ ಭದ್ರಾವತಿಯ ಹಿರಿಯ ಸಾಹಿತಿ ಜಿ.ವಿ.ಸಂಗಮೇಶ್ವರ ವಿಶೇಷ ಉಪನ್ಯಾಸ ನೀಡಲಿದ್ದಾರೆ. 

ಸಂಜೆ 06:00 ಕ್ಕೆ ನಡೆಯುವ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಂಸ್ಕೃತಿಕ ಚಿಂತಕ ದಿನೇಶ್‌ ಅಮಿನ್ ಮಟ್ಟು ಸಮಾರೋಪ ಮಾತುಗಳನ್ನಾಡಲಿದ್ದು, ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಸಮ್ಮೇಳನಾಧ್ಯಕ್ಷರಿಗೆ ಅಭಿನಂದಿಸಲಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕ ಬಿ.ಕೆ.ಸಂಗಮೇಶ್ವರ, ಬಿ.ವೈ.ವಿಜಯೇಂದ್ರ, ಬಲ್ಕೀಶ್‌ ಬಾನು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಜಿಲ್ಲಾ ಪಂಚಾಯತಿ ಸಿಇಓ ಎನ್.ಹೇಮಂತ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ, ದತ್ತಿ ದಾನಿಗಳಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದಿಸಲಾಗುತ್ತಿದೆ. 

ಸುದ್ದಿಗೋಷ್ಟಿಯಲ್ಲಿ ಕಸಾಪ ಜಿಲ್ಲಾ ಕೋಶಾಧ್ಯಕ್ಷರಾದ ಎಂ.ನವೀನ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಎಂ.ಎಂ.ಸ್ವಾಮಿ, ಹೊಸನಗರ ತಾಲ್ಲೂಕು ಕಸಾಪ ಅಧ್ಯಕ್ಷ ನಾಗರಕೋಡಿಗೆ ಗಣೇಶಮೂರ್ತಿ, ಪದಾಧಿಕಾರಿಗಳಾದ ಡಿ.ಗಣೇಶ್, ಹುಚ್ಚರಾಯಪ್ಪ, ಮಧುಸೂದನ್ ಐತಾಳ್, ಕೃಷ್ಣಮೂರ್ತಿ ಹಿಳ್ಳೋಡಿ, ಭಾರತಿ ರಾಮಕೃಷ್ಣ, ಅನುರಾಧ, ಮಂಜುನಾಥ ಕಾಮತ್, ಬಾಲರಾಜ್, ಜಿ.ವಿ.ಸಂಗಮೇಶ್ವರ, ಮಾರ್ಷಲ್ ಶರಾಂ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close