![]() |
60 pilgrims left for Prayagraj Maha Kumbh Mela in two special buses on Monday night, Kumari Suraksha Subbu drove the buses. |
ಸುದ್ದಿಲೈವ್/ಸೊರಬ
ಪಟ್ಟಣದಿಂದ ಪ್ರಯಾಗ್‍ರಾಜ್ ಮಹಾ ಕುಂಭಮೇಳಕ್ಕೆ ಎರಡು ವಿಶೇಷ ಬಸ್‍ಗಳಲ್ಲಿ 60 ಯಾತ್ರಾರ್ಥಿಗಳು ಸೋಮವಾರ ರಾತ್ರಿ ತೆರಳಿದ್ದು, ಬಸ್‍ಗಳಿಗೆ ಕುಮಾರಿ ಸುರಕ್ಷ ಸುಬ್ಬು ಚಾಲನೆ ನೀಡಿದರು.
ಚಿಕ್ಕಪೇಟೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಕುಂಭಮೇಳಕ್ಕೆ ತೆರಳುವ ಬಸ್‍ಗಳಿಗೆ ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್ ಗೋಖಲೆ ಪೂಜೆ ಸಲ್ಲಿಸಿದರು. ನೆಮ್ಮದಿ ಗ್ರೂಪ್ ಆಫ್ ಸರ್ವಿಸಸ್ ವತಿಯಿಂದ ಶ್ರೀ ಬಾಲಾಜಿ ಹಾಲಿಡೇಸ್ ಸಹಯೋಗದೊಂದಿಗೆ ವಿಶೇಷ ಬಸ್‍ಗಳ ಆಯೋಜನೆ ಮಾಡಲಾಗಿತ್ತು. ಕೂಡಲಸಂಗಮ, ಪಂಡಾರಪುರ, ಉಜ್ಜಯಿನಿ, ಅಯೋಧ್ಯೆ, ಕಾಶಿ, ಪ್ರಯಾಗರಾಜ್ ಸೇರಿದಂತೆ ಸುತ್ತಲಿನ ಧಾರ್ಮಿಕ ಸ್ಥಳಗಳಿಗೆ ಯಾತ್ರಾರ್ಥಿಗಳು ಭೇಟಿ ನೀಡಲಿದ್ದಾರೆ. ಯಾತ್ರಾರ್ಥಿಗಳಿಗೆ ರೊಟ್ಟಿ-ಚೆಟ್ನಿ ನೀಡುವ ಮೂಲಕ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಶುಭಹಾರೈಸಲಾಯಿತು.
ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಮಾತನಾಡಿ, ಯಾತ್ರಾರ್ಥಿಗಳು ಗಡಿಬಿಡಿ, ನೂಕು ನುಗ್ಗಲು, ತಳ್ಳಾಟ ಮಾಡದೆ ಸಾವಧಾನದಿಂದ ವರ್ತಿಸಬೇಕು. ಗಂಗಾಮಾತೆ, ಯಮುನೆ, ಸರಸ್ವತಿಯ ಅನುಗ್ರಹ ಪಡೆಯಬೇಕು. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದ ಮೂಲಕ ಸನಾತನ ಹಿಂದೂ ಧರ್ಮದ ಶಕ್ತಿ ಜಗತ್ತಿಗೆ ಮತ್ತೊಮ್ಮೆ ಪರಿಚಯವಾದಂತಾಗಿದೆ. ದೇಶದಲ್ಲಿ ಸನಾತನ ಸಂಸ್ಕøತಿ ಬೆಳೆಯಬೇಕು. ಗೋಮಾತೆಯ ರಕ್ಷಣೆಯಾಗಬೇಕು ಎಂದರು.
ಯಾತ್ರಾರ್ಥಿ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಮತ್ತು ಸದಸ್ಯ ವೀರೇಶ್ ಮೇಸ್ತ್ರಿ ಮಾತನಾಡಿ, 60 ಜನರ ತಂಡದಲ್ಲಿ ಪ್ರಯಾಗ್‍ರಾಜ್ ತೆರಳುವ ಅವಕಾಶ ದೊರೆತಿರುವುದು ಸಂತಸ ತಂದಿದೆ. ಪ್ರಯಾಗ್‍ರಾಜ್‍ಗೆ ತೆರಳಲು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲು ಕಾರಣೀಕರ್ತರಾದ ನೆಮ್ಮದಿ ಸುಬ್ಬು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಕುಂಭಮೇಳಕ್ಕೆ ಮೊದಲ ಬಾರಿಗೆ ತೆರಳುತ್ತಿದ್ದು, ಅವಕಾಶ ಸದ್ಭಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಯಾತ್ರಾರ್ಥಿಗಳು ಜೈ ಶ್ರೀರಾಮ್, ಜೈಜೈ ಶ್ರೀರಾಮ್, ಭಾರತ್ ಮಾತಾಕೀ ಜೈ, ಗಂಗಾ ಮಾತಾಕೀ ಜೈ, ಗೋಮಾತಾಕೀ ಜೈ, ಜೈ ಬಜರಂಗಬಲಿ, ಹರಹರ ಮಹಾದೇವ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ನೆಮ್ಮದಿ ಗ್ರೂಪ್ ಆಫ್ ಸರ್ವಿಸಸ್ ಮುಖ್ಯಸ್ಥೆ ಅನಿತಾ ಸುಬ್ಬು, ಸಿಸಿಒ ನೆಮ್ಮದಿ ಸುಬ್ಬು, ಶ್ರೀ ಬಾಲಾಜಿ ಹಾಲಿಡೇಸ್‍ನ ವಿಶ್ವನಾಥ್, ಸುಚೇಂದ್ರ, ಪವನ, ಜನಾರ್ಧನ, ತಾಲೂಕು ಗೋ ಸಂಕರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ, ಉಪಾಧ್ಯಕ್ಷ ದತ್ತಾ ಸೊರಬ ಸೇರಿದಂತೆ ಯಾತ್ರಾರ್ಥಿಗಳು ಇದ್ದರು.