Suddilive|| Shivamogga
Lady was declared that she was died but she opened her eyes while she retuned home, Miracle at Bhadravathi
ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಮಹಿಳೆಯೋರ್ವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ವೈದ್ಯರು ಕೂಡ ಇದನ್ನು ಖಚಿತಪಡಿಸಿದ್ದರು. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಮರು ದಿನ ಆಸ್ಪತ್ರೆಯಿಂದ ದೇಹವನ್ನು ವಾಹನದಲ್ಲಿ ಮನೆಗೆ ತರಲಾಗಿತ್ತು.
ನೂರಾರು ಜನರು ಅಂತಿಮ ದರ್ಶನ ಪಡೆಯಲು ಮನೆ ಬಳಿ ಆಗಮಿಸಿದ್ದರು. ಆದರೆ ದಿಢೀರ್ ಆಗಿ ಮಹಿಳೆ ಕಣ್ತೆರೆದು, ಉಸಿರಾಡಲಾರಂಭಿಸಿದ್ದಾರೆ..! ಕುಟುಂಬದವರು ಮಹಿಳೆಗೆ ನೀರು ಕುಡಿಸಿದ್ದಾರೆ. ನಂತರ ತಕ್ಷಣವೇ ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಗೆ ಚಿಕಿತ್ಸೆ ಮುಂದುವರಿದಿದೆ.
ಇದು ಯಾವುದೋ ಸಿನಿಮಾ ಅಥವಾ ಧಾರವಾಹಿಯ ಕಥೆ ಆಗಲಿ ಅಲ್ಲ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಡೆದ ರಿಯಲ್ ಸ್ಟೋರಿ. ಹೌದು. ಮೃತಪಟ್ಟಿದ್ದಾರೆಂದು ಹೇಳಲಾದ ಮಹಿಳೆಯೋರ್ವರು ಮತ್ತೆ ಉಸಿರಾಡಲಾರಂಭಿಸಿದ ಪವಾಡ ಸದೃಶ್ಯ, ವಿಸ್ಮಯಕಾರಿ ಸುದ್ದಿಯಿದು.
ಘಟನೆಯ ವಿವರಣೆ
ಭದ್ರಾವತಿ ಗಾಂಧಿನಗರದ ನಿವಾಸಿ, ಗುತ್ತಿಗೆದಾರರಾದ ಸುಬ್ರಮಣಿ ಎಂಬುವರ ಪತ್ನಿ ಮೀನಾಕ್ಷಿ (52) ಎಂಬುವರೆ ಸತ್ತು ಬದುಕಿದ ಮಹಿಳೆಯಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದಕ್ಕೆ ಕುಟುಂಬದವರು ದಾಖಲಿಸಿದ್ದರು.
ಕಳೆದ ಸೋಮವಾರ ರಾತ್ರಿ 11. 30 ರ ಸುಮಾರಿಗೆ ಅವರು ವಿಧಿವಶರಾಗಿದ್ದಾರೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ರಾತ್ರಿಯಾಗಿದ್ದ ಕಾರಣದಿಂದ ಬೆಳಿಗ್ಗೆ ಆಸ್ಪತ್ರೆಯಿಂದ ದೇಹವನ್ನು ಮನೆಗೆ ಕೊಂಡೊಯ್ಯಲು ಕುಟುಂಬದವರು ನಿರ್ಧರಿಸಿದ್ದರು.
ಅದರಂತೆ ಮಂಗಳವಾರ ಬೆಳಿಗ್ಗೆ ದೇಹವನ್ನು, ವಾಹನವೊಂದರಲ್ಲಿ ಶಿವಮೊಗ್ಗದ ಆಸ್ಪತ್ರೆಯಿಂದ ಭದ್ರಾವತಿಯ ನಿವಾಸಕ್ಕೆ ತರಲಾಗಿತ್ತು. ಅಂತಿಮ ದರ್ಶನ ಪಡೆಯಲು ಬಂಧು – ಬಳಗದವರು ಸೇರಿದಂತೆ ನೂರಾರು ಜನರು ನೆರೆದಿದ್ದರು.
ಮನೆಗೆ ತಂದ ಕೂಡಲೇ, ದಿಢೀರ್ ಆಗಿ ಮಹಿಳೆ ಉಸಿರಾಡಲಾರಂಭಿಸಿದ್ದಾರೆ. ಕಣ್ತೆರೆದು ನೋಡಲಾರಂಭಿಸಿದ್ದಾರೆ. ಇದು ಕುಟುಂಬಸ್ಥರು ಸೇರಿದಂತೆ ನೆರೆದಿದ್ದವರಲ್ಲಿ ಭಾರೀ ಅಚ್ಚರಿ ಉಂಟು ಮಾಡುವುದರ ಜೊತೆಗೆ, ಸಂತಸಕ್ಕೂ ಕಾರಣವಾಗಿದೆ.
ತಕ್ಷಣವೇ ಮಹಿಳೆಯನ್ನು ಭದ್ರಾವತಿ ನಗರದ ನರ್ಸಿಂಗ್ ಹೋಂವೊಂದಕ್ಕೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ನಂತರ ಶಿವಮೊಗ್ಗ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಮಹಿಳೆಗೆ ಚಿಕಿತ್ಸೆ ಮುಂದುವರಿದಿದ್ದು, ಕೊಂಚ ಮಾತನಾಡುತ್ತಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಒಟ್ಟಾರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾದ ಮಹಿಳೆಯು, ವಿಸ್ಮಯವೆಂಬಂತೆ ಮನೆಯಲ್ಲಿ ಉಸಿರಾಡಲಾರಂಭಿಸಿದ ಸಂಗತಿಯು ಸಾರ್ವಜನಿಕ ವಲಯದಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿರುವುದಂತೂ ಸತ್ಯವಾಗಿದೆ.